ಪೆಟ್‌ಗುಟ್ಟು
ಆಸೆಯಿಂದ ಪೆಟ್ಸ್ ತಂದು ಬಿಡುತ್ತೇವೆ. ಆದರೆ, ಕೆಲವೊಂದರ ಮೆಂಟೇನೆನ್ಸ್ ಅಷ್ಟು ಸುಲಭವಲ್ಲ. ಅಲ್ಲದೇ ಅವುಗಳು ನಮ್ಮ ಮನಸ್ಸಿಗೆ ಮುದ ನೀಡಿದರೂ...

ಮಗನ ಬೇಡಿಕೆಯಂತೆ ಮನೆಗೆರಡು ಮೊಲಗಳನ್ನು ತಂದ್ವಿ. ಅವು ಬಹು ಬೇಗನೆ ಮನೆಯ ಸದಸ್ಯರಂತಾಗಿದ್ದವು. ಬರ್ತಾ ಬರ್ತಾ ಸದಾ ಅವುಗಳನ್ನು ಹಿಸುಕಿ, ಮುದ್ದು ಮಾಡುತ್ತಿದ್ದ ಮಗನಿಗೆ ಅಲರ್ಜಿ ಆರಂಭವಾಯಿತು. ಮನೆಯ ಬಾಲ್ಕನಿಗೆ ಹೋದರೆ ಕೆಟ್ಟ ದುರ್ನಾತ. ಸರಿ ಎರಡೂ ತಲೆನೋವಿಗೆ ಈ ಮುದ್ದು ಮೊಲಗಳೇ ಕಾರಣ ಎಂದು ಒಲ್ಲದ ಮನಸ್ಸಿನಿಂದ ಒಂದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ್ವಿ.
ಆಸೆಯಿಂದ ಪೆಟ್ಸ್ ತಂದು ಬಿಡುತ್ತೇವೆ. ಆದರೆ, ಕೆಲವೊಂದರ ಮೆಂಟೇನೆನ್ಸ್ ಅಷ್ಟು ಸುಲಭವಲ್ಲ. ಅಲ್ಲದೇ ಅವುಗಳು ನಮ್ಮ ಮನಸ್ಸಿಗೆ ಮುದ ನೀಡಿದರೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂದರೆ ನಂಬಲೇಬೇಕು.
ಮೈಕೈ ನೋವು, ಸದಾ ಕಾಡುವ ತಲೆನೋವು ಮುಂತಾದ ದೈಹಿಕ ಸಮಸ್ಯೆಗಳಿಗೆ ಮನೆಯಲ್ಲಿರುವ ಪೆಟ್ಸ್ ಕಾರಣವಾಗಬಲ್ಲದು. ಆದ್ದರಿಂದ ಮನೆಯಲ್ಲಿ ಸಾಕುವ ಪ್ರಾಣಿ, ಪಕ್ಷಿಗಳ ಬಗ್ಗೆ ಎಷ್ಟು ಹುಷಾರಾಗಿದ್ದರೂ ಸಾಲದು. ಪೆಟ್ ಕೇರ್ ಹೇಗೆ?
- ಮನೆಯಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ನೀಡಬೇಕು.
- ನಿಮ್ಮನೆ ನಾಯಿಯನ್ನು ಬೀದಿ ನಾಯಿಯೊಟ್ಟಿಗೆ ಬೆರೆಯಲು ಬಿಡಬೇಡಿ. ಅಕಸ್ಮಾತ್ ಅಪರಿಚಿತ ಪ್ರಾಣಿ ನಿಮ್ಮ ನಾಯಿಯನ್ನು ಕಡಿದರೆ ತಕ್ಷಣವೇ ಪಶು ವೈದ್ಯರನ್ನು ಸಂಪರ್ಕಿಸಿ. ಭಾರತದಲ್ಲಿ ಸುಮಾರು 55 ಸಾವಿರ ಸಾವುಗಳು ರೇಬಿಸ್‌ನಿಂದ ಸಂಭವಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ನೀರನ್ನು ಕಂಡರೆ ಭಯ (ಹೈಡ್ರೋಫೋಬಿಯಾ), ಗೊಂದಲ, ಭಾಗಶಃ ಪಾರ್ಶ್ವವಾಯು, ಮನೋವಿಕಲ್ಪ, ತಳಮಳದಂಥ ರೋಗ ಲಕ್ಷಣಗಳು ರೇಬೀಸ್‌ಗಿರುತ್ತವೆ.
- ಹುಚ್ಚು ನಾಯಿ ನಿಮ್ಮ ನಾಯಿಯನ್ನು ಕಡಿದರೆ ತಕ್ಷಣವೇ ಸೋಪ್‌ನಿಂದ ಸ್ವಚ್ಛವಾಗಿ ತೊಳೆಯಿರಿ. ನಾಯಿ ಕಚ್ಚಿದ 24 ಗಂಟೆಯೊಳಗೆ ಮೊದಲ ಆ್ಯಂಟಿ-ರೇಬಿಸ್ ಚುಚ್ಚುಮದ್ದನ್ನು ಕೊಡಿಸಲೇ ಬೇಕು. ನಂತರ ಇದರ ಸಂಪೂರ್ಣ ಡೋಸ್ ಹಾಕಿಸಬೇಕು.
- ನಾಯಿಗೆ ತಪ್ಪದೇ ವರ್ಷದಲ್ಲಿ ಒಮ್ಮೆ ಲೆಪ್ಟೋಸ್ಪಿರೊಸಿಸ್ ಚುಚ್ಚುಮದ್ದನ್ನು ನೀಡಬೇಕು. ಹಸಿವಿನ ಕೊರತೆ, ಕೆಮ್ಮು, ಗಂಟಲು ನೋವು, ಕಿರಿಕಿರಿ, ಕಣ್ಣು ಕೆಂಪಾಗುವುದು ಮುಂತಾದ ರೋಗ ಲಕ್ಷಣವನ್ನು ಹೊಂದಿರುವ ಈ ಸೋಂಕು ಪ್ರಾಣಿಗಳ ಮೂತ್ರದಿಂದ ನೀರು ಅಥವಾ ಮಣ್ಣಿನ ಮೂಲಕ ಮನುಷ್ಯನಿಗೆ ಹರಡುತ್ತದೆ. ಕೆಲವು ವಾರ ಅಥವಾ ತಿಂಗಳುಗಳು ಕಾಣಿಸಿಕೊಳ್ಳುವ ಈ ರೋಗದ ಬ್ಯಾಕ್ಟಿರೀಯಾ ಮನುಷ್ಯನನ್ನು ಗಾಯಗೊಂಡ ಚರ್ಮ, ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ಪ್ರವೇಶಿಸುತ್ತದೆ.
- ಪ್ರಾಣಿಗಳು ಊಟದ ತಟ್ಟೆ, ಹಾಸು ಮತ್ತಿತರೆ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿದ ಬಳಿಕ ಕೈಯನ್ನು ಚೆನ್ನಾಗಿ ಸೋಪ್ ಹಚ್ಚಿ ತೊಳೆದುಕೊಳ್ಳಿ. ಗಾರ್ಡನಿಂಗ್ ಮಾಡಿದ ಮೇಲೂ ಕೈಯನ್ನು ಸ್ವಚ್ಛಗೊಳಿಸಿಕೊಳ್ಳಿ. ಬೆಕ್ಕುಗಳು ಮಾಡಿದ ಗಲೀಜು ಮಣ್ಣಿಗೆ ಸೇರುವ ಸಾಧ್ಯತೆಗಳಿರುತ್ತವೆ. ಅವುಗಳಿಂದ ಮಾಂಸ ಖಂಡಗಳ ಸೆಳೆತ, ಜ್ವರ, ಸುಸ್ತು ಮುಂತಾದ ರೋಗ ಲಕ್ಷಣಗಳನ್ನು ಹೊಂದಿರುವ ಟೊಕ್ಸೋಪ್ಲಾಸ್ಮೋಸಿಸ್ ಎಂಬ ರೋಗ ಹರಡುವ ಸಾಧ್ಯತೆಯಿದೆ. ವಿಶೇಷವಾಗಿ ಗರ್ಭಿಣಿಯರು ಬಹಳ ಬೇಗ ಈ ರೋಗಕ್ಕೆ ತುತ್ತಾಗಲಿದ್ದು, ಗರ್ಭಪಾತ ಆಗಬಹುದು.
- ಬೆಕ್ಕು ಪರಚಿ ಅಥವಾ ಕಚ್ಚಿ ಗಾಯಗೊಳಿಸಿದರೆ ತಕ್ಷಣವೇ ತೊಳೆದುಕೊಳ್ಳಿ. ಪರಚಿದ ಗಾಯಗಳಿಂದ ಗುಳ್ಳೆ, ಕೀವು ತುಂಬಿದ ಗಂಟು, ಜ್ವರ, ತಲೆನೋವು ಮುಂತಾದ ತೊಂದರೆಗಳಾಗುವ ಸಾಧ್ಯತೆಗಳಿರುತ್ತವೆ.
- ನಿಮಗೆ ಗಾಯಗಳೇನಾದರೂ ಆಗಿದ್ದರೆ ಅದನ್ನು ನೆಕ್ಕಲು ಪೆಟ್ಸ್‌ಗೆ ಬಿಡಬೇಡಿ.
- ಸಾಲ್ಮನೆಲ್ಲಾ ಎಂಬ ಸೋಂಕಿನಿಂದ ಗಂಭೀರವಾದ ಹೊಟ್ಟೆ ನೋವು, ಭೇದಿ, ಜ್ವರ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವು ಮುಖ್ಯವಾಗಿ ಪ್ರಾಣಿಗಳ ಪರಿಸರದಿಂದಲೇ ಹರಡುತ್ತದೆ. ಆಮೆಯನ್ನು ನೀರಿಗೆ ಬಿಟ್ಟಾಗಲೂ ಸ್ವಚ್ಛತೆಗೆ ಗಮನ ಹರಿಸಿ.
- ಮನೆಯಲ್ಲಿ ಲವ್ ಬರ್ಡ್ಸ್, ಗಿಳಿ, ಕಾಕ್ಟೈಲ್‌ಗಳಿದ್ದರೆ ಜ್ವರ, ಚಳಿ, ತಲೆನೋವು, ಕಫ, ಉಸಿರಾಟದಲ್ಲಿ ತೊಂದರೆ ಮುಂತಾದ ತೊಂದರೆಗಳು ಸಹಜವಾಗಿ ಉಸಿರಾಡಿದರೂ ಹರಡುತ್ತವೆ. ಅದಕ್ಕೆ ಸೋಂಕಿತ ಪಕ್ಷಿಗಳನ್ನು ಸ್ವಚ್ಛಗೊಳಿಸುವಾಗ ಸುರಕ್ಷಿತ ಮಾಸ್ಕ್ ಮತ್ತು ಗ್ಲೌವ್ಸ್ ಅನ್ನು ತೊಡಬೇಕು. ಪಕ್ಷಿಗಳಲ್ಲಿ ನಿರುತ್ಸಾಹ ಅಥವಾ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರಿಗೆ ತೋರಿಸಿ.
- ನಾಯಿ ಅಥವಾ ಬೆಕ್ಕಿನ ಚರ್ಮದ ಮೇಲೆ ಕೂದಲುಗಳು ಉದುರಿದ್ದರೆ ಅಥವಾ ಕೆಂಪು ನವೆಯಾಗಿದ್ದರೆ ಅದು ರಿಂಗ್‌ವರ್ಮ್‌ನ ಲಕ್ಷಣ. ಚರ್ಮಕ್ಕೆ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ, ವರ್ಮ್ಸ್‌ಗೂ ತಕ್ಷಣವೇ ಔಷಧಿ ಕೊಡಿಸಬೇಕು. ಅವಗಳನ್ನು ಮುಟ್ಟಬೇಡಿ.
- ನೊಣಗಳಾಗದಂತೆ ಸೂಕ್ತ ರಾಸಾಯನಿಕಗಳನ್ನು ಬಳಸಿ.
- ಪ್ರಾಣಗಳ ಹಾಸು ಹಾಗೂ ಅವುಗಳು ಓಡಾಡುವ ನೆಲವನ್ನು ಸೂಕ್ತ ಬ್ಲೀಚ್ ಹಾಗೂ ಬಿಸಿ ನೀರಿನ ಮೂಲಕ ಸ್ವಚ್ಛಗೊಳಿಸಿ.
- ಹೊಟ್ಟೆಹುಳದ ಔಷಧಿಗಳನ್ನು ಕಾಲ ಕಾಲಕ್ಕೆ ನೀಡಿ.
- ಪ್ರಾಣಿಗಳಲ್ಲಿ ತರಚು ಗಾಯಗಳಾಗಿದ್ದರೆ ಸೂಕ್ತವೇ ಸೂಕ್ತ ಔಷಧಿ ಹಾಕಿ. ಇದರ ಮೇಲೆ ನೊಣಗಳು ಮೊಟ್ಟೆ ಇಟ್ಟು ಸಣ್ಣ ಗಾಯವೂ ದೊಡ್ಡಾದಾಗಿ ಪ್ರಾಣಿ ಹಾಗೂ ಮನುಷ್ಯರಿಗೂ ಅನೇಕ ತೊಂದರೆಗಳನ್ನು ಒಡ್ಡುವ ಸಾಧ್ಯತೆಗಳಿರುತ್ತವೆ.
- ನಾಯಿ ಅಥವಾ ಬೆಕ್ಕಿಗೆ ರಕ್ತ ಸಹಿತ, ನೀರಾಗಿ ಮಲ ವಿಸರ್ಜನೆಯಾಗುತ್ತಿದ್ದರೆ ವೈದ್ಯರನ್ನು ತಕ್ಷಣವೇ ಸಂಪರ್ಕಿಸಿ. ಇದು ಕ್ಯಾಂಪ್ಲಿಯೋಬ್ಯಾಕ್ಟಿರಿಯೋಸಿಸಿ ಆಗಿರುವ ಸಾಧ್ಯತೆ ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


