ಹೊಗೆಬಗೆ

ಯಾರಾದರೂ ವಿನಾಕಾರಣ ನಿಮ್ಮನ್ನು ಗೇಲಿ ಮಾಡುತ್ತಿದ್ದಾರೆ ಅಥವಾ ಹಂಗಿಸುತ್ತಿದ್ದಾರೆ ಎಂದರೆ ನಿಮ್ಮ ಬಗ್ಗೆ ಅವರಿಗೆ 'ಅಸೂಯೆ' ಹುಟ್ಟಿದೆ ಎಂದರ್ಥ.
ಹೌದು. 'ಅಸೂಯೆ' ಮಾನವನ ಹುಟ್ಟುಗುಣ. ಇಂಥ ಗುಣವುಳ್ಳವರು ತಮ್ಮ ಸಹದ್ಯೋಗಿಗಳೋ, ನೆಂಟರೋ, ಸಂಬಂಧಿಗಳೋ ಸ್ವಲ್ಪ ಮುಂದುವರಿಯುತ್ತಾರೆ ಅಥವಾ ಚೆನ್ನಾಗಿದ್ದಾರೆ ಎಂದೆನಿಸಿದರೆ ಸಾಕು ಅಂಥವರನ್ನು ಹಾಳು ಮಾಡಬೇಕೆಂಬ ದುರಾಲೋಚನೆಯನ್ನು ಒಳಗೊಳಗೇ ಹೂಡುತ್ತಾರೆ.
ಅಸೂಯೆ ಇರುವ ವ್ಯಕ್ತಿಗೆ ಇನ್ನೊಬ್ಬರ ಬೆಳವಣಿಗೆ ಎಂದೂ ಸಹ್ಯವೆನಿಸುವುದಿಲ್ಲ. ಹಾಗಾಗಿ ಅಂಥವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ, ಹಂಗಿಸುವುದು, ಪ್ರತಿ ವಿಚಾರಕ್ಕೂ ಕಾಲೆಳೆಯುವುದು, ಪರೋಕ್ಷವಾಗಿಯಾದರೂ ತೊಂದರೆ ಕೊಡದೆ ಬಿಡುವುದಿಲ್ಲ.
ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲೊಂದಿಷ್ಟು ಅಸೂಯೆಪಟುಗಳು ಇದ್ದೇ ಇರುತ್ತಾರೆ. ನಮ್ಮ ಜೊತೆಗೆ ಇದ್ದು ಪರಮಾಪ್ತರಂತೆ ಕಂಡರೂ, ತೀರಾ ಸಣ್ಣ ತಪ್ಪನ್ನೆ ದೊಡ್ಡದು ಮಾಡಿ ಪ್ರತಿಕ್ಷಣ ಅವಮಾನಿಸಲು, ನಮಗಿರುವ ಅವಕಾಶ ಕಸಿದುಕೊಳ್ಳಲು ಹಂಬಲಿಸುತ್ತಿರುತ್ತಾರೆ. ಅವರ ನಿತ್ಯದ ಬದುಕನ್ನು ಇತರರ ತಪ್ಪುಗಳನ್ನು ಕೆದಕುವುದರಲ್ಲೇ ಕಳೆದು ಮಾನಸಿಕ ರೋಗಿ ಆಗಿಬಿಡುತ್ತಾರೆ.
ನೆನಪಿರಲಿ... ಅಸೂಯೆ ಪಡುವವರಿಂದ ಇತರರಿಗೆ ಬೆರಳೆಣಿಕೆಯ ತೊಂದರೆಯಷ್ಟೇ ಆಗುತ್ತದೆ. ಆದರೆ, ಅಸೂಯೆಪಟುಗಳನ್ನೇ ಅಸೂಯೆ ಸುಡುತ್ತದೆ. ಧೈರ್ಯ, ಸಾಮರ್ಥ್ಯ, ಬುದ್ಧಿವಂತಿಕೆ ಇದ್ದವರು ಹೇಗಿದ್ದರೂ ಮೇಲೆದ್ದೇ ಏಳುತ್ತಾರೆ.
ಅಸೂಯೆ ಬಗ್ಗೆ ಒಂದಿಷ್ಟು...
- ಅಸೂಯೆ ಕೆಟ್ಟದ್ದು. ಅದರಿಂದ ಲಾಭ ಏನೂ ಇಲ್ಲ. ಅಸೂಯೆ ಪಡುವವರಿಗೆ ಇನ್ನೊಬ್ಬರ ಉನ್ನತಿ, ಸಂತೋಷವನ್ನು ತಡೆದೆವು ಎಂಬ ಕ್ಷುದ್ರ ತೃಪ್ತಿಯೊಂದನ್ನು ಬಿಟ್ಟರೆ ಮತ್ತೇನೂ ದಕ್ಕದು.
- ನಮ್ಮ ಸಮಯ, ಶಕ್ತಿ, ಸಾಮರ್ಥ್ಯವನ್ನು ಇನ್ನೊಬ್ಬರ ಕಾಲೆಳೆಯಲು ಬಳಸದೆ, ತಮಗೆ ಸಿಕ್ಕ ಸೌಲಭ್ಯ ಬಳಸಿಕೊಂಡು ಬೆಳೆಯಲು ಯತ್ನಿಸಿ. ಇದರಿಂದ ಆರೋಗ್ಯ, ಆಯುಸ್ಸು, ಶ್ರೇಯಸ್ಸು ಎಲ್ಲವೂ ಸಿಗುತ್ತೆ.
- ಅಸೂಯೆ ಎಂಬುದು ಕ್ರಮೇಣ ವ್ಯಕ್ತಿಯನ್ನು ಸಂತೃಪ್ತಿ, ಸಹಜ ಸಮಾಧಾನ, ವಿವೇಕವನ್ನು ಕಳೆದುಕೊಳ್ಳುವಂತೆ ಮಾಡುವುದಲ್ಲದೆ, ಅಂಥವರ ಪ್ರಗತಿ ಸಹಜವಾಗಿಯೇ ಕುಂಠಿತವಾಗುತ್ತದೆ. ಆತ ಮಾನಸಿಕ ರೋಗಿಯಾಗುತ್ತಾನೆ.
- ಅಸೂಯೆಪಟುಗಳ ಅಡ್ಡಗಾಲು ತಾತ್ಕಾಲಿಕ ಪರಿಣಾಮ ಬೀರಬಹುದೇ ವಿನಾ ಶಾಶ್ವತವಾಗಿ ಇನ್ನೊಬ್ಬರನ್ನು ತುಳಿದಿಡುವುದು ಅಸಾಧ್ಯ.
- ಮನಸ್ಸು ಬಿಳಿಹಾಳೆ ಇದ್ದಂತೆ. ಅದರಲ್ಲಿ ಅಸೂಯೆ, ಮತ್ಸರ ತುಂಬಿದರೆ ತಮ್ಮದೆ ಮನಸ್ಸು ಮಲಿನವಾಗುತ್ತದೆ ವಿನಾ ಇತರರಿಗೆ ಕೇಡುಂಟಾಗುವ ಸಾಧ್ಯತೆ ಕಡಿಮೆ.
- ಜೀವನದಲ್ಲಿ ಬದಲಾವಣೆ ಸದಾ ಇರುತ್ತದೆ. ಅದರಂತೆ ನಮ್ಮ ಚಿಂತನೆಗಳ ವ್ಯಾಪ್ತಿಯೂ ವಿಸ್ತರಿಸಬೇಕೆ ವಿನಾ ಕ್ಷುಲ್ಲಕ ಕಾರಣಗಳಿಗೆ ಮನಸ್ಸಿನ ಶಕ್ತಿಯನ್ನು ಕುಗ್ಗಿಸಿಕೊಳ್ಳದಿರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


