ಆರೋಗ್ಯ-ಜೀವನಶೈಲಿ

ಸೆನ್ ಸೆಕ್ಸ್

ಸೆನ್ ಸೆಕ್ಸ್
Published On :

ಪತಿ, ಪತ್ನಿಯರ ಸಾಮೀಪ್ಯವನ್ನು ಗಟ್ಟಿಗೊಳಿಸುವಲ್ಲಿ ಮಿಲನೋತ್ಸವದ ಪಾತ್ರವೂ ಮುಖ್ಯ. ಇದಕ್ಕೆ ಭಾಷೆ ಬೇಡ, ಸ್ಪರ್ಶ ಬೇಕು. ಅನುಭವಕ್ಕಿಂತ ಅನುಭೂತಿ ಮುಖ್ಯ. ಹೊತ್ತು ಗೊತ್ತಿಗಿಂತ ಇಬ್ಬರ ಮನಸ್ಥಿತಿ ಇನ್ನೂ ಮುಖ್ಯ. ಆದರೂ, ಅದಕ್ಕೊಂದು ಸಮಯ ಅಂತ ಇದೆಯಾ?
ಯಾವ ಸಮಯದಲ್ಲಿ ಅದರಿಂದ ಹೆಚ್ಚು ತೃಪ್ತಿ ಸಿಗುತ್ತದೆ? ಸುಖದ ಮತ್ತಿಗೆ ಜಾರುವುದಕ್ಕೆ 'ಹೊತ್ತಲ್ಲದ ಹೊತ್ತು' ಅಂತ ಇದೆಯಾ? ಬೆಳಗ್ಗಿನ ಹೊತ್ತು? ಅಥವಾ ಮಧ್ಯಾಹ್ನ? ಸಂಜೆಯಾದರೆ? ರಾತ್ರಿಯೇ ಲೇಸಾ? ಹಾಗಂತ ಸಮಯ ನೋಡುವುದರಲ್ಲೇ 'ಆ ಸಮಯ' ವ್ಯರ್ಥ ಮಾಡಲು ಯಾರೂ ಇಚ್ಛಿಸುವುದಿಲ್ಲ. ಆದರೆ ಸೂಕ್ತ ಸಮಯ ಆಯ್ಕೆ ಮಾಡಿಕೊಳ್ಳುವುದರಲ್ಲಿ ಜಾಣತನ ಇದೆ.
ರಾತ್ರಿಯಾದರೆ ಒಳ್ಳೆಯದೇ?
ಈ ಚಟುವಟಿಕೆಗೆ ರಾತ್ರಿಯೇ ಏಕೆ ಆಯ್ಕೆಯಾಗಿದೆ ಎಂದರೆ ಹಿಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳೇ ಹೆಚ್ಚು. ಹಗಲಿಡೀ ಜನರ ಓಡಾಟ, ಸ್ಥಳದ ಅಭಾವ. ಈಗ ಕಾಲ ಬದಲಾಗಿದೆ. ಕುಟುಂಬಗಳು ವಿಭಕ್ತಗೊಂಡಿವೆ. ದಂಪತಿಗೆ ಮಕ್ಕಳಿದ್ದರೆ ಅವರಿಗೇ ಬೇರೆ ಕೊಠಡಿಗಳು ಬಂದಿವೆ. ಹೀಗಾಗಿ ರಾತ್ರಿ-ಹಗಲು ಎಂಬ ಭೇದಭಾವವಿಲ್ಲ. ಆದರೂ ರಾತ್ರಿ ಸೆಕ್ಸ್ ಬಯಸುವವರಿಗೆ ಇಲ್ಲಿದೆ ಹಿತನುಡಿ. ರಾತ್ರಿ ಊಟ ಆದ ತಕ್ಷಣ ಅದು ಬೇಡ. ಏಕೆಂದರೆ ಜೀರ್ಣಕ್ರಿಯೆ ದೇಹದಲ್ಲಿ ನಡೆಯುತ್ತಿರುತ್ತದೆ. ಈ ಸಂದರ್ಭ ನಿಮ್ಮ ಹೆಚ್ಚಿನ ಶಕ್ತಿ 'ಆ ಕ್ರಿಯೆ'ಗೆ ವಿನಿಯೋಗವಾಗುವುದರಿಂದ ಸಂತೃಪ್ತಿ ಸಂಪೂರ್ಣವಾಗದು. ಹೀಗಾಗಿ ಊಟ ಆದ ಮೇಲೆ ಕೊನೆಪಕ್ಷ ಒಂದು ಗಂಟೆಯಾದರೂ ಸುಮ್ಮನಿರಿ. ವಾತಾವರಣವೂ ನಿಶ್ಯಬ್ದವಾಗಿರುವುದರಿಂದ ನಿಮ್ಮ ಏಕಾಂತಕ್ಕೆ ಯಾವುದೇ ಭಂಗ ಬಾರದು.
ಮುಂಜಾನೆಯಲ್ಲಿ ಮಜಾ ಇರುತ್ತಾ?
ರಾತ್ರಿ ಸುಖ ನಿದ್ರೆ ಅನುಭವಿಸಿ ಮುಂಜಾನೆ ಎದ್ದಾಗ ದೇಹ ಹೊಸ ಚೈತನ್ಯದಿಂದ ಕೂಡಿರುತ್ತದೆ. ಇದು ನೀವು ಕೂಡಲು ಉತ್ತಮ ಸಮಯ. ದೇಹದಲ್ಲಿ ಯಾವುದೇ ಬಳಲಿಕೆ ಇಲ್ಲದೆ ಇರುವುದರಿಂದ ಪರಸ್ಪರ ಸಹಕಾರಕ್ಕೆ ಅನುಕೂಲವಾಗುತ್ತದೆ. ಸಂತೋಷವೂ ಲಭಿಸುತ್ತದೆ. ಇದೂ ಒಂದು ವ್ಯಾಯಾಮವಾದ್ದರಿಂದ ಪ್ರತ್ಯೇಕ ವ್ಯಾಯಾಮದ ಅವಶ್ಯಕತೆಯೂ ಇರುವುದಿಲ್ಲ! ಆದರೆ ಆಯಾಮಗಳು ಬದಲಾಗಲಿ ಅಷ್ಟೆ.
ಮಧ್ಯಾಹ್ನದ ಹೊತ್ತು?
ಮಧ್ಯಾಹ್ನ ಸೆಖೆ ಇರುವ ಸಮಯವಾದ್ದರಿಂದ ಸಾಮಾನ್ಯವಾಗಿ ಈ ಹೊತ್ತಿನಲ್ಲಿ ಯಾರೂ ಆಸಕ್ತಿ ವಹಿಸರು. ಆದರೆ, ಊಟವಾದ ತಕ್ಷಣ ಸೆಕ್ಸ್ ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ಸಾಧ್ಯವಾದರೆ ಗ್ಯಾಪ್ ಕೊಡಿ. ಇಲ್ಲದಿದ್ದರೆ ಮಧ್ಯಾಹ್ನದ ಕಿರು ನಿದ್ದೆ ಮಾಡಿ ಎದ್ದ ಬಳಿಕ ಸೇರಿದರೆ ಒಳಿತು. ಆಗ ನೀವು ಮಾನಸಿಕ ಹಾಗೂ ದೈಹಿಕವಾಗಿ ಉಲ್ಲಸಿತರಾಗಿರುತ್ತೀರಿ. ಆದರೆ ನೆನಪಿಡಿ ಇಬ್ಬರಿಗೂ ಅದರ ಬಗ್ಗೆ ಆಸಕ್ತಿ ಇರಬೇಕು.
ಒಟ್ಟಾರೆಯಾಗಿ ಸಮಯದ ಜತೆ ಮೇಲಿನ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ ನೀವು ಖಂಡಿತಾ ದಾಂಪತ್ಯದ ಆಳ ಅನುಭವಿಸಬಹುದು. <
ಸಲಿಗೆ ಸಲಹೆ
    ಗಂಡ-ಹೆಂಡತಿ ಇಬ್ಬರೂ ಕೆಲಸದಲ್ಲಿರುತ್ತೀರಿ. ಕಚೇರಿ ಕೆಲಸ ಮುಗಿಸಿ ಬರುವುದರಲ್ಲೇ ಸುಸ್ತು ಆವರಿಸಿದ್ದರೆ ಒಮ್ಮೊಮ್ಮೆ ರಾತ್ರಿ ವೇಳೆ ಸೆಕ್ಸ್ ಅಸಾಧ್ಯ ಎನಿಸಿಬಿಡುತ್ತದೆ. ಇಂತಹ ಸಂದರ್ಭ ಪರಸ್ಪರ ಮನಬಿಚ್ಚಿ ಮಾತನಾಡಿಕೊಂಡರೆ ಹಗುರಾಗುತ್ತದೆ.
    ಸೆಕ್ಸ್ ಬರೇ ಭೋಗವಲ್ಲ. ಅದೂ ಕೂಡಾ ಒಂದು ಯೋಗ. ಹೀಗಾಗಿ ಇದರಿಂದ ಆರೋಗ್ಯ ವೃದ್ಧಿಯೂ ಆಗುತ್ತದೆ. ಊಟವಾದ ತಕ್ಷಣ ಹೇಗೆ ಯೋಗ ಮಾಡುವುದಿಲ್ಲವೋ ಹಾಗೆ ಲೈಂಗಿಕ ಕ್ರಿಯೆಯನ್ನೂ ಮಾಡಕೂಡದು. ಆಗ ರಕ್ತ ಚಲನೆ ಹೆಚ್ಚಿರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿದ್ದರೆ ಖಂಡಿತ ಹುಷಾರಾಗಿರಬೇಕು. ಇಂಥವರು ಈ ಸಂದರ್ಭದಲ್ಲಿ ಗ್ಯಾಪ್ ಕೊಡಲೇ ಬೇಕು.
    ನಿಮಗೆ ಸೆಕ್ಸ್ ಏಕೆ ಬೇಕು ಎಂದು ನಿರ್ಧರಿಸಿ. ಸಂತೃಪ್ತಿಗಾದರೆ ಸಮಯ, ದಿನ ಮುಖ್ಯವಾಗುವುದಿಲ್ಲ. ನಿಮ್ಮ ಅನುಕೂಲ ಮಾತ್ರ ಮುಖ್ಯವಾಗುತ್ತದೆ. ಆದರೆ ಸಂತಾನಕ್ಕಾದರೆ ಇವೆಲ್ಲವೂ ಮುಖ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಮುಂದುವರಿಯಿರಿ.
    ಏಕಾಂತ, ಮೂಡ್, ಕಾಲ, ಪ್ರದೇಶ, ದೈಹಿಕ ಕ್ಷಮತೆ ಇವೆಲ್ಲ ಗಮನದಲ್ಲಿರಬೇಕು.
ಇಂಥದ್ದೇ ಸಮಯದಲ್ಲಿ ಸೇರಬೇಕೆಂಬ ನಿಯಮವೇನೂ ಇಲ್ಲ. ಇದು ಪತಿ, ಪತ್ನಿಯ ಮನಸ್ಥಿತಿ ಮೇಲೆ ಅವಲಂಬಿತ. ಅವರು ಮುಕ್ತವಾಗಿದ್ದರೆ ಯಾವ ಸಮಯವಾದರೂ ಸರಿ. ಮುಖ್ಯವಾಗಿ ಏಕಾಂತ ಇರಬೇಕು. ಯಾವುದೇ ಕಿರಿಕಿರಿ, ಅಡತಡೆ ಇರಕೂಡದು. ಇಬ್ಬರಲ್ಲೂ ದೈಹಿಕ ಕ್ಷಮತೆ ಇರಬೇಕಾಗುತ್ತದೆ. ಯಾರೊಬ್ಬರ ಆರೋಗ್ಯದಲ್ಲಿ ಏರುಪೇರಾಗಿದ್ದರೂ ಸೆಕ್ಸ್ ಖುಷಿ ಕೊಡದು. ತೃಪ್ತಿಗಾಗಿಯಾದರೆ ಸಮಯ ಮುಖ್ಯವಾಗುವುದಿಲ್ಲ. ಮಗುವಿಗೋಸ್ಕರವಾದರೆ ಪೀರಿಯಡ್ಸ್ ಅವಧಿಯ ಆಚೀಚೆ ಸಮಯ ಹೊಂದಿಸಿಕೊಳ್ಳಬೇಕು.
- ಡಾ. ಪದ್ಮಿನಿ ಪ್ರಸಾದ್,
ಖ್ಯಾತ ಲೈಂಗಿಕ ತಜ್ಞೆ


-ಆದರ್ಶ ರಾವ್
    aaadivasi@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.