ಆರೋಗ್ಯ-ಜೀವನಶೈಲಿ

ಬಿಡಿ ಸಿಗರೇಟ್

ಬಿಡಿ ಸಿಗರೇಟ್
Published On :

ಎಷ್ಟು ಜನ, ಎಷ್ಟು ದಿನ ತಾವು ನುಡಿದಂತೆ ನಡೆದುಕೊಳ್ಳುತ್ತಾರೆ? ಒಂದು ವಾರ, ಒಂದು ತಿಂಗಳು... ಕೆಲವರಂತೂ ಅವರಾಡಿದ ಮಾತು ಆ ಗಳಿಗೆಯಲ್ಲೇ ಮರೆತುಬಿಟ್ಟಿರುತ್ತಾರೆ. ನಾಳೆಯಿಂದ ಕೆಟ್ಟ ಚಟ ಬಿಡುತ್ತೇನೆಂದು ಪ್ರತಿ ಹೊಸ ವರ್ಷ ಬಂದಾಗಲೂ ಹೇಳುತ್ತಾರೆ. ಮರು ಕ್ಷಣದಲ್ಲಿ ಮರೆತೇ ಬಿಡುತ್ತಾರೆ. ಎಷ್ಟೋ ಜನ ಧೂಮಪಾನ ಬಿಡುತ್ತೇನೆನ್ನುತ್ತಾರೆ. ಅದು ಬಾಯಲ್ಲಷ್ಟೇ, ಮತ್ತದೇ ಹೊಗೆ ಬಿಡುತ್ತಾರೆ.
ಧೂಮಪಾನದ ಬಗ್ಗೆ ಜನರಲ್ಲಿ ಸುಮಾರಷ್ಟು ಮಿಥ್‌ಗಳಿವೆ. ಸಿಗರೇಟ್ ಸೇದುವುದರಿಂದ ಟೆನ್ಶನ್ ಕಡಿಮೆಯಾಗುತ್ತದೆ. ಓದುವಾಗ ನಿದ್ದೆ ಬರದಂತೆ ತಡೆಯಬಹುದು. ಸದಾ ಎಚ್ಚರ ಸ್ಥಿತಿಯಲ್ಲಿರಬಹುದು. ದಣಿವನ್ನು ನಿವಾರಿಸಿಕೊಳ್ಳಬಹುದು. ಹೀಗೆ ನಾನಾ ತರಹದ್ದು. ಆದರೆ ಇದೆಲ್ಲವೂ ನಿಜವಲ್ಲ. ಸಿಗರೇಟ್‌ನಿಂದ ನಮ್ಮ ದೇಹಕ್ಕೆ ಯಾವುದೇ ಉಪಯೋಗವಿಲ್ಲ. ಬದಲಾಗಿ ನಾವು ದಿನ ನಿತ್ಯ ಇಷ್ಟಿಷ್ಟೇ ಸಾಯುತ್ತ ಹೋಗುತ್ತೇವೆ ಅಷ್ಟೇ.
ಸಿಗರೇಟಿನ ಬಗ್ಗೆ ನಿಮಗೆಷ್ಟು ಗೊತ್ತು?
ಸಿಗರೇಟಿನಲ್ಲಿ ಸುಮಾರು ನಾಲ್ಕು ಸಾವಿರ ವಿಷಯುಕ್ತ ರಾಸಾಯನಿಕಗಳಿವೆ. ಮನುಷ್ಯನ ಬಾಹ್ಯ ಮತ್ತು ಆಂತರಿಕ ಅಂಗಗಳ ಮೇಲೆ ಅವು ಪ್ರಭಾವ ಬೀರುತ್ತವೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ಪಫ್‌ನಲ್ಲೂ ಕಾರ್ನಿನೊಜೆನ್ಸ್ ಎಂಬ ವಿಷದ್ರವ ನಾಡಿಯಲ್ಲಿ ಹರಿಯುವ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಅದು ರಕ್ತದೊತ್ತಡದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ಶ್ವಾಸಕೋಶದೊಳಗೆ ಹೋದ ವಿಷಕಾರಿ ಹೊಗೆ ಅಲ್ಲಿನ ವಾತಾವರಣವನ್ನ ಹಾಳು ಮಾಡುತ್ತದೆ. ಉಸಿರಾಟದ ನಾಳದಲ್ಲಿ ಕಿಟ್ಟ ಕೂರುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಹುಟ್ಟುತ್ತದೆ. ಹೃದಯ ಕಾಯಿಲೆಗಳು ಉಂಟಾಗುತ್ತವೆ. ತುಟಿಗಳು ಕಪ್ಪಾಗುತ್ತವೆ. ಚರ್ಮದ ಬಣ್ಣ ಕುಂದಿ ನಾಲಿಗೆ ರುಚಿ ಕಳೆದುಕೊಳ್ಳುತ್ತದೆ. ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ.
'ಸೆಕೆಂಡ್‌ಹ್ಯಾಂಡ್‌' ಇನ್ನೂ ಅಪಾಯಕಾರಿ!
ಧೂಮಪಾನ ಎಷ್ಟು ಹಾನಿಕಾರಕ ಎಂದರೆ, ಅವರು ಹೊರಬಿಟ್ಟ ಹೊಗೆಯನ್ನು ಇನ್ನೊಬ್ಬರು ಸೇವಿಸಿದರೆ ಮೆದುಳು ಕ್ಯಾನ್ಸರ್‌ಗೆ ತುತ್ತಾಗಬಹುದು. ಹೀಗೆಂದು ಅಮೆರಿಕದ ಪರಿಸರ ರಕ್ಷಣಾ ಏಜನ್ಸಿಯೊಂದು ಅಧ್ಯಯನದಿಂದ ಸ್ಪಷ್ಟಪಡಿಸಿದೆ.
ಒಬ್ಬ ವ್ಯಕ್ತಿ ಹೊರಬಿಟ್ಟ ಹೊಗೆಯಲ್ಲಿ ಏಳು ಸಾವಿರ ವಿಷಯುಕ್ತ ಪದಾರ್ಥಗಳಿರುತ್ತವೆ! ಪಕ್ಕದಲ್ಲಿದ್ದವರು ಸೇವಿಸಿದರೆ ಸ್ತನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್, ಮೂಗಿನ ಕ್ಯಾನ್ಸರ್, ಕೆಮ್ಮು, ಜ್ವರಗಳಿಗೆ ತುತ್ತಾಗಬಹುದು.   

- ವಿಜಯ್ ಆರ್. ಹೊಸನಗರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.