ರೈಟ್ ವೇಟ್
'ಅಯ್ಯೋ ನಾನು ತುಂಬಾ ತೆಳ್ಳಗಿದ್ದೀನಿ. ನನ್ನನ್ನು ಯಾರು ಮದುವೆ ಆಗ್ತಾರೆ' ಎಂಬುದು ಬಹಳಷ್ಟು ಯುವಕ- ಯುವತಿಯರ ಅಳಲು. ಆದರೆ...

'ಅಯ್ಯೋ ನಾನು ತುಂಬಾ ತೆಳ್ಳಗಿದ್ದೀನಿ. ನನ್ನನ್ನು ಯಾರು ಮದುವೆ ಆಗ್ತಾರೆ' ಎಂಬುದು ಬಹಳಷ್ಟು ಯುವಕ- ಯುವತಿಯರ ಅಳಲು. ಆದರೆ, ಈ ರೀತಿ ಕೊರಗುತ್ತಾ ಕುಳಿತರೆ ಮತ್ತಷಟ್ಟು ಸಪೂರವಾಗೋದು ನಿಕ್ಕಿ. ಹಾಗಾದರೆ ದಪ್ಪಗಾಗಲು ಏನು ಮಾಡಬೇಕು ಅಂತೀರಾ? ತಿನ್ನಿ.. ತಿನ್ನಿ.. ತಿನ್ನಿ... ಹೆಚ್ಚೆಚ್ಚು ತಿಂದರೆ ದಪ್ಪಗಾಗೋದು ಗ್ಯಾರಂಟಿ. ಹಾಗಂತ ಕೈಗೆ ಸಿಕ್ಕಿದ್ದೆಲ್ಲಾ ತಿಂದರೆ ಫಜೀತಿ ಅನುಭವಿಸಬೇಕಾಗುತ್ತೆ. ಅದಕ್ಕಾಗಿ ಪಂಚಸೂತ್ರಗಳು ಸಣಕಲು ದೇಹದವರಿಗೆ ನೆರವಾಗುತ್ತವೆ.
ಹೆಚ್ಚು ತಿನ್ನಲು ಕಲಿಯಿರಿ
ತೂಕ ಹೆಚ್ಚಿಸಿಕೊಳ್ಳಲು ಇರುವ ಸರಳ ಉಪಾಯವೇ ಇದು. ಆದರೆ, ಪ್ರೊಟೀನ್, ವಿಟಾಮಿನ್‌ಯುಕ್ತ ಆಹಾರ ಆಗಿರಬೇಕು. ಮೊಟ್ಟೆ, ಮಾಂಸ, ಹಾಲು, ಎಲ್ಲ ನಮೂನೆಯ ತರಕಾರಿಗಳನ್ನು ನಿಯಮಿತವಾಗಿ ಸೇವಿಸಬೇಕು. ಹಸಿ ತರಕಾರಿ ತಿಂದಷ್ಟು ಆರೋಗ್ಯಕ್ಕೆ ಒಳ್ಳೆಯದು. ಹೀಗೆ ಮಾಡಿದರೆ ಫಲಿತಾಂಶ ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ.
ಊಟ ಹೇಗೆ?
ದಪ್ಪಗಾಗಬೇಕೆಂಬ ಹಂಬಲ ಉಳ್ಳವರು ದಿನಕ್ಕೆ 3 ಬಾರಿ ಊಟ ಮಾಡಬೇಕು ಅಂತಾರೆ ತಜ್ಞರು. ಅಷ್ಟೇ ಅಲ್ಲ, ಅಷ್ಟೇ ಸಲ ಉಪಹಾರ ಸೇವಿಸಬೇಕು. ಅಂದರೆ ದಿನಕ್ಕೆ ಏನಿಲ್ಲವೆಂದರೂ 2- 3 ತಾಸಿಗೊಮ್ಮೆ ತಿನ್ನುತ್ತಲೇ ಇರಬೇಕು. ಮಧ್ಯೆಮಧ್ಯೆ ಗೋಡಂಬಿ, ಒಣದ್ರಾಕ್ಷಿ, ಲಾಡು, ಚಿಕ್ಕಿ ಮೊದಲಾದ ಪೌಷ್ಟಿಕಾಂಶ ಅಧಿಕವುಳ್ಳ ಪದಾರ್ಥ ಸೇವಿಸುವುದು ಒಳಿತು.
ಜಂಕ್ ಫುಡ್ ಮುಟ್ಟಬೇಡಿ
ಬಾಯಲ್ಲಿ ನೀರೂರಿಸುವ ಜಂಕ್ ಫುಡ್ ಸಹವಾಸವೇ ಬೇಡ. ಜಂಕ್ ಫುಡ್ ತಿನ್ನುವುದರಿಂದ ತೂಕದಲ್ಲಿ ದಿಢೀರ್ ಹೆಚ್ಚಳ ಕಂಡುಬರಬಹುದು. ಆದರೆ, ಅತಿಯಾದ ತೂಕ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಬಳಿಕ ಆಸ್ಪತ್ರೆಗೆ ಎಡತಾಕಿ ದುಡ್ಡು ಕಳೆದುಕೊಳ್ಳಬೇಕಾಗುತ್ತದೆ ಎಂಬ ಅರಿವಿರಲಿ.
ಪಥ್ಯ ಇರಲಿ
ತಿನ್ನಿ.. ತಿನ್ನಿ.. ಎಂದ ಕೂಡಲೇ ಕೈಗೆ ಸಿಕ್ಕಿದ್ದೆಲ್ಲಾ ಸಿಕ್ಕಾಪಟ್ಟೆ ತಿಂದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ. ಪ್ರೊಟೀನ್, ವಿಟಾಮಿನ್, ಖನಿಜಾಂಶ, ಪಿಷ್ಟ ಮೊದಲಾದವುಗಳು ಸಮಪ್ರಮಾಣದಲ್ಲಿ ದೇಹ ಸೇರುತ್ತವೆಯೇ ಎಂಬುದರ ಜಾಗೃತಿ ವಹಿಸಬೇಕು. ಅಕಸ್ಮಾತ್ ಮಾಂಸ, ಕೃತಕ ಬೆಣ್ಣೆ ಮೊದಲಾದವುಗಳು ಅಧಿಕ ಪ್ರಮಾಣದಲ್ಲಿ ದೇಹ ಸೇರಿದರೆ ಆರೋಗ್ಯಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ.
ಶುದ್ಧ ನೀರು
ಆರೋಗ್ಯವಂತ ವ್ಯಕ್ತಿಯ ದೇಹಕ್ಕೆ ದಿನಾಲೂ ಏನಿಲ್ಲವೆಂದರೂ 8- 10 ಗ್ಲಾಸ್ ನೀರು ಬೇಕು. ಕುಡಿಯುವ ನೀರು ಶುದ್ಧವಾಗಿರಬೇಕು. ಅಶುದ್ಧ ನೀರು ಸೇವಿಸದಂತೆ ಜಾಗೃತಿ ವಹಿಸಿ. ಜತೆಗೆ ಹಾಲು, ವಿವಿಧ ಹಣ್ಣುಗಳ ಜ್ಯೂಸ್ ಕುಡಿಯುವದರಿಂದ ಆರೋಗ್ಯದ ಸಮತೋಲನ ಕಾಪಾಡಬಹುದು.
- ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


