ಭ್ರಾಂ ಭ್ರೂಂ

ಜಾದೂ ಎಂದರೆ ಆಕರ್ಷಣೆ ಸಹಜ. ಆದರೆ, ಕೆಲವರು ಜಾದೂಗಾರ 'ಭ್ರಾಂ ಭ್ರೂಂ ಶಕಲಕಭೂಮ್' ನಂಥ ಮಂತ್ರ ಹೇಳಿ ಕರವಸ್ತ್ರವನ್ನು ಹೂವಾಗಿಸಿದ ಹಾಗೆ ವೈದ್ಯರು ಮ್ಯಾಜಿಕ್ ಮಾಡಿ ರೋಗಿಗಳನ್ನು ತಕ್ಷಣವೇ ಗುಣಪಡಿಸಿಬಿಡಬೇಕೆಂಬುದು ಬಹುತೇಕರ ನಿರೀಕ್ಷೆ.
ಇಂಥ ಅವಾಸ್ತವಿಕ ನಿರೀಕ್ಷೆಗಳು ತಪ್ಪು ಹಾದಿಗೆ ತಳ್ಳುವುದರಲ್ಲಿ ಅನುಮಾನವೇ ಇಲ್ಲ. ಒಂದು ಉದಾಹರಣೆ ಕೇಳಿ... 50ರ ಮಹಿಳೆ ಸಾವು- ಬದುಕಿನ ಹೋರಾಟದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಳು. ರಕ್ತ ಪರೀಕ್ಷೆಯಿಂದ ಆಕೆಯ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್‌ಗಳು ಗಣನೀಯವಾಗಿ ಕಡಿಮೆಯಾಗಿರುವುದು ಪತ್ತೆಯಾಗಿತ್ತು. ಈ ಪರಿಸ್ಥಿತಿ ಏಕೆ ಬಂದಿತ್ತು ಗೊತ್ತಾ? ಆಕೆ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದು, ತಪ್ಪದೇ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ, ಸಂಬಂಧಿಕರ ಪುಕ್ಕಟೆ ಸಲಹೆಯಂತೆ ಆ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟು ಯಾವುದೋ ಬೇರನ್ನು ತೇಯ್ದು ಸೇವಿಸಲು ಆರಂಭಿಸಿದ್ದಳು. ಇದರಿಂದ ಮಹಿಳೆಯ ಜೀವಕ್ಕೇ ಸಂಚಕಾರ ಬಂದೊದಗಿತ್ತು.
ಗುಣವಾಗೋಕೆ ಟೈಂ ಬೇಕು...
ಅಲೋಪತಿ, ಆಯುರ್ವೇದ ಅಥವಾ ಹೋಮಿಯೋಪತಿ ಮುಂತಾದ ಯಾವುದೇ ವೈದ್ಯ ಪದ್ಧತಿಯಿರಲಿ... ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ವೈದ್ಯರ ಸಲಹೆಯಂತೆಯೇ ರೋಗಿಗಳು ನಡೆದುಕೊಳ್ಳಬೇಕು. ಆದರೆ, ಇಂಥ ವೈದ್ಯರಾರೂ ಜಾದು ಮಾಡುವ ಬಿಡುವ ಭರವಸೆ ನೀಡೋಲ್ಲ. ಯಾವುದೋ ಎರಡು ಪುಸ್ತಕಗಳ ಹತ್ತು ಪುಟ ತಿರುಗಿಸಿ, ಇನ್ಯಾವುದೋ ನಾಲ್ಕು ಬೇರು- ಗಿಡ- ಹುಡಿ ಹೆಸರು ಕೇಳಿದವರು ತಾವೇ ಎಲ್ಲ ಬಲ್ಲ ತಜ್ಞರಂತೆ ಸೋಗು ಹಾಕಿ ಸುಳ್ಳು ಆಶ್ವಾಸನೆ ನೀಡುತ್ತಾರೆ.
ಒಮ್ಮೆ ಸಂಬಂಧಿಕರ ಮನೆಗೆ ತೆರಳಿದ್ದೆ. ಅವರ ಪಕ್ಕದ್ಮನೆ ಎದುರು ಜನರ ಸಂತೆಯೇ ಸೇರಿತ್ತು. ಏಕೆಂದು ವಿಚಾರಿಸಿದಾಗ 'ಮಂಡಿನೋವಿಗೆ ಬಹಳ ಒಳ್ಳೆಯ ಔಷಧಿ ಕೊಡುತ್ತಾರೆ. ದೊಡ್ಡ ಆಸ್ಪತ್ರೆಗಳಲ್ಲೂ ಗುಣಪಡಿಸಾಗದ್ದನ್ನು, ಆಪರೇಷನ್ ಆಗಲೇಬೇಕೆಂದು ಹೇಳಿದ್ದನ್ನು ಇವರ ಔಷಧದಿಂದ ಸರಿಮಾಡಿದ್ದಾರಂತೆ...' ಇತ್ಯಾದಿ ಗುಣಗಾನಗಳು ಕೇಳಿ ಬಂದವು. ಆಕಸ್ಮಿಕವಾಗಿ ಅವರ ಮನೆಯ ಹಿಂಭಾಗದಲ್ಲಿ ಸಗಣಿ ಗುಂಡಿಯಾಚೆ ರಾಶಿ ರಾಶಿ ಮಾತ್ರೆಗಳ ಖಾಲಿ ಪ್ಯಾಕ್‌ಗಳು ಕಣ್ಣಿಗೆ ಬಿದ್ದವು. ಅವೆಲ್ಲ ತೀವ್ರ ಸ್ಟಿರಾಯ್ಡ್ ಅಂಶಗಳುಳ್ಳ, ಅಗ್ಗದ ನೋವು ನಿವಾರಕ ಮಾತ್ರೆಗಳದ್ದು!
ಸ್ಟೆರಾಯ್ಡ್‌ಗೆ ಧಿಕ್ಕಾರ
ಶಾಸ್ತ್ರೀಯವಾಗಿ ಕಲಿತ ಯಾವುದೇ ವೈದ್ಯ ಪದ್ಧತಿಯಲ್ಲೂ ಸ್ಟಿರಾಯ್ಡ್‌ಯುಕ್ತ ಔಷಧ ನೀಡುವ ಮೊದಲು ಅದರ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ವಿಚಾರಿಸುತ್ತಾರೆ. ಮೂತ್ರಪಿಂಡ, ಯಕೃತ್ ಮೇಲೆ, ರಕ್ತದೊತ್ತಡ - ಸಕ್ಕರೆ ಪ್ರಮಾಣದ ಮೇಲೆ ಉಂಟಾಗುವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಆದರೆ ಅವುಗಳ ಅರಿವೇ ಇಲ್ಲದವರ ಕೈಯಲ್ಲಿ ದೇಹವನ್ನು ಒಪ್ಪಿಸಿ ಪ್ರಯೋಗ ಪಶುಗಳಾಗುವುದು ಎಷ್ಟು ಸರಿ?
ನನ್ನ ಪರಿಚಿತರ ಮಗುವಿಗೆ ಮೆಳ್ಳೆಗಣ್ಣಿತ್ತು. ಪರೀಕ್ಷಿಸಿದಾಗ ದೃಷ್ಟಿ ದೋಷವಿರುವುದು ತಿಳಿಯಿತು. ಆಕೆಗೆ ಕನ್ನಡಕ ಹಾಕೋದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ದೃಷ್ಟಿ ನರ ದುರ್ಬಲವಾಗುವ ಎಲ್ಲ ಸಾಧ್ಯತೆಗಳೂ ಇದ್ದವು. 'ದಿನಾ ಜೋಕಾಲಿಯಲ್ಲಿ ಕೂರಿಸಿ ತೂಗಿದರೆ ಕಣ್ಣು ಸರಿಯಾಗುತ್ತದೆ. ಇಷ್ಟು ಚಿಕ್ಕ ವಯಸ್ಸಿಗ್ಯಾಕೆ ಕನ್ನಡಕ?' ಎಂದರಂತೆ ಯಾರೋ. ವಿದ್ಯಾವಂತರಾಗಿರುವ, ಉತ್ತಮ ಉದ್ಯೋಗದಲ್ಲಿರುವ ಆ ಮಗುವಿನ ಪೋಷಕರು ಅದನ್ನೇ ಗಾಢವಾಗಿ ನಂಬಿ ಇಂದಿಗೂ ಮಗುವಿಗೆ ಕನ್ನಡಕ ಕೊಡಿಸಲು ಮುಂದಾಗಿಲ್ಲ. ಅದು ಇಂದಿಗೂ ಕತ್ತು ವಾಲಿಸಿ ಒಂದೇ ಕಣ್ಣಿನಲ್ಲಿ ನೋಡುತ್ತದೆ. ಮಗುವಿನ ಕಣ್ಣಿನ ಬೆಳಕಿಗಾಗಿ, ಅದರ ಭವಿಷ್ಯಕ್ಕಾಗಿ ನಾನು ಭೇಟಿಯಾದಾಗೆಲ್ಲ ತಿಳಿಹೇಳುತ್ತಿದ್ದರೂ ಜಾದು ಆಗಬಹುದೆಂಬ ನಿರೀಕ್ಷೆಯಲ್ಲಿಯೇ ಐದಾರು ವರ್ಷಗಳನ್ನು ಕಳೆದಿದ್ದಾರೆ.
ಸುಮ್ ಸುಮ್ನೆ ಔಷಧಿ ಕೊಡ್ತಾರೆ!
'ಡಾಕ್ಟ್ರ ಹತ್ರ ಹೋದ್ರೆ, ಸಮ್ ಸುಮ್ನೆ 10-15 ಥರದ ಟೆಸ್ಟ್ ಮಾಡಿಸಿ ದುಡ್ಡು ಎಳೆಯುತ್ತಾರೆ' ಎಂಬ ಮನೋಭಾವನೆಯೂ ಕೆಲವರಲ್ಲಿದೆ. ಅಫ್‌ಕೋರ್ಸ್ ಎಲ್ಲಿಯೋ ಕೆಲವು ವೈದ್ಯರು ಇಂಥ ಕೃತ್ಯಗಳಿಗೆ ಕೈ ಹಾಕುತ್ತಿರುವುದು ಹೌದಾದರೂ ಎಲ್ಲರನ್ನೂ ಅದೇ ಸಂಶಯದಿಂದ ನೋಡುವುದು ಎಷ್ಟು ಸರಿ?
ಉತ್ತಮ ಆರೋಗ್ಯ ಎಂಬುದು ಎಂದಿಗೂ ಜಾದೂ ಅಲ್ಲ. ಅದು ಜೀವನಶೈಲಿ.
- ಡಾ. ಸೌಮ್ಯಾ ಕೆ.ವಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


