ನಶೆಗೆ ದೊಡ್ಡ ನಮಸ್ಕಾರ

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬೀದಿಯ ಬಾಯಿಗೆ ಕವಳವಾಗದಿರುವನೆ?
ಎದೆಯನ್ನುಕ್ಕಾಗಿಸುತ ಮತಿಗದೆಯ ಪಿಡಿದು
ನೀನೆದುರು ನಿಲೆ ಬಿದಿಯೋಲಿವ ಮಂಕುತಿಮ್ಮ॥
ಎಂಬಂತೆ ಮನುಷ್ಯ ಅತ್ಯಂತ ಬುದ್ಧಿವಂತ ಜೀವಿಯಾದರೂ ಕೆಲವೊಮ್ಮೆ ಕಂಟಕ ಬಂದಾಗ ಎದುರಿಸಲಾಗದೆ ದುಶ್ಚಟಗಳ ದಾಸನಾಗುತ್ತಾನೆ. ಆ ಮೂಲಕ ಜನರು ಆಡಿಕೊಳ್ಳುವಂಥ ಸ್ಥಿತಿಯನ್ನು ತಾನೇ ತಂದುಕೊಳ್ಳುತ್ತಾನೆ.
ಮನುಷ್ಯ ತಾತ್ಕಾಲಿಕ ಸುಖ ಪಡೆಯಲು ಹೋಗಿ, ದುಶ್ಚಟಗಳ ಸಹವಾಸದಿಂದ ವಿಲ ವಿಲ ಒದ್ದಾಡುತ್ತಿದ್ದಾನೆ. 'ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?' ಎಂಬಂತೆ ಒಂದು ಹಂತ ದಾಟಿದ ನಂತರ ಕುಟುಂಬಕ್ಕೆ, ಸಮಾಜಕ್ಕೆ ಹಾಗೂ ದೇಶಕ್ಕೇ ವ್ಯಸನಿ ಕಂಟಕ ಪ್ರಾಯನಾಗುತ್ತಾನೆ. ಸಾಂಸ್ಕೃತಿಕ, ಆರ್ಥಿಕ, ಆರೋಗ್ಯ ಸಂಬಂಧಿ ಸಮಸ್ಯೆಗಳು ಆತನನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ ಬಿಡುತ್ತವೆ.
ಕೊನೆಗೆ ಚಿಂತಿಸಿ ಫಲವಿಲ್ಲ
ಚಟ ಕಲಿತದ್ದು ಗೊತ್ತಾಗಲಿಲ್ಲ. ಹೇಗೆ, ಯಾವಾಗ ಅಡಿಕ್ಟ್ ಆದೆವೋ ಎಂಬುದೂ ಗಮನಕ್ಕೆ ಬರಲಿಲ್ಲ. ಆದರೆ, ಇನ್ನೇನು ಚಟ್ಟ ಏರುವ ಸಮಯ ಬಂತು ಎನ್ನುವಷ್ಟರಲ್ಲಿ ಮಾಡಿದ ತಪ್ಪಿನ ಅರಿವಾಗುತ್ತದೆ. ಆದರೇನು ಉಪಯೋಗ? ಆದರೆ, ಆರಂಭದಲ್ಲಿ ಹಿಡಿದ ಚಟವನ್ನು ಮನಸ್ಸು ಮಾಡಿದರೆ ಬಿಡಿಸಬಹುದು. ಅದಕ್ಕೆ ವೈದ್ಯರು, ಆಪ್ತ ಸಲಹೆಗಾರರು, ಮನೋವೈದ್ಯರು, ಕುಟುಂಬದ ಸದಸ್ಯರ ಪ್ರಯತ್ನ ಬೇಕಷ್ಟೇ. ಎಲ್ಲಕ್ಕಿಂತಲೂ ಮುಖ್ಯವಾಗಿ ಚಟದ ದಾಸನಾಗಿರುವವನಿಗೆ ತಾನು ಸರಿಯಾಗಬೇಕೆಂಬ ಮನಸ್ಸಿರಬೇಕು. ಇಲ್ಲದಿದ್ದಲ್ಲಿ 'ತರಚುಗಾಯವ ಕೆರೆದು ಹುಣ್ಣಾಗಿಸುವುದು ಕಪಿ, ಕೊರತೆಯೊಂದ ನೀನು ಮನದಲ್ಲಿ ನೆನೆದು ದರೆಯೆಲ್ಲವನು ಶಪಿಸಿ ನರಳುವುದು ಬದುಕೇನೋ ಮಂಕುತಿಮ್ಮ' ಎನ್ನುವಂತಾಗುತ್ತದೆ ಬದುಕು. 'ನಮ್ಮ ಏಳ್ಗೆಗೆ ನಾವೇ ಶಿಲ್ಪಿ, ಹಾಗೂ ನಾವು ಕುಸಿದು ಬೀಳಲೂ ನಾವೇ ಕಾರಣ' ಎಂಬುದನ್ನು ಮರೆಯಬಾರದು.
ಅಡಿಕ್ಷನ್ ಒಂದು ರೋಗ
ದುಶ್ಟಟಗಳು ತಮ್ಮ ಸಮಸ್ಯೆಗಳಿಗೆ ಪರ್ಮನೆಂಟ್ ಸಲ್ಯೂಷನ್ ಎಂದು ನಂಬಿದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಕುಡಿದಾಗ ತುಸು ಕಾಲ ಅರೆಪ್ರಜ್ಞಾವಸ್ಥೆಯಲ್ಲಿರುವ ಮನುಷ್ಯ ಸ್ವರ್ಗದಲ್ಲಿದ್ದೇನೆ ಎಂಬ ಭಾವನೆ ತಾಳುತ್ತಾನೆ. ಆದರೆ, ಯಾವಾಗ ಆ ನಶೆ ಇಳಿಯುತ್ತದೆ ಆಗೆಲ್ಲವೂ ಅಯೋವುಯ. ಒಂದು ಸಮಸ್ಯೆಯಿಂದ ಪಾರಾಗಲು ಹೋಗಿ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿಸುವ ಈ ದುರಾಭ್ಯಾಸಕ್ಕೆ ಅಡಿಕ್ಟ್ ಆಗೋದೂ ಒಂದು ರೋಗ.
ದುಶ್ಚಟಕ್ಕೆ ವ್ಯಕ್ತಿ ಬಲಿಯಾಗುತ್ತಿದ್ದಾನೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಫ್ಯಾಮಿಲಿ ಹೆಚ್ಚು ಅಲರ್ಟ್ ಆಗ್ಬೇಕು. ಪೋಷಕರು ಅಥವಾ ಪತಿ, ಪತ್ನಿ ಕುಡಿಯೋದು ಹೆಚ್ಚಾಗಿ ಸಮಸ್ಯೆಯನ್ನು ತಂದೊಡ್ಡುವ ಮೊದಲೇ ಚಿವುಟಿ ಹಾಕಬೇಕು. ಎಲ್ಲಿ ಬಯಲಾದರೆ ತಮ್ಮ ಸ್ಟೇಟಸ್‌ಗೆ ಹಾನಿಯಾಗುತ್ತೋ ಎಂದು ಅಂಜಿದರೆ, ನಿಮ್ಮನ್ನೇ ಸರ್ವನಾಶ ಮಾಡುತ್ತದೆ. ಕುಡಿತಕ್ಕೆ ದಾಸನಾದ ವ್ಯಕ್ತಿ ಮೊದಲ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಲ್ಲಿ, ಗುಣಮುಖನಾಗುತ್ತಾನೆ.
ಮನಸ್ಸಿದ್ದಲ್ಲಿ ಮಾರ್ಗ
ರಾಮಕೃಷ್ಣ ಪರಮಹಂಸರು ಹೇಳಿದಂತೆ, 'ನಿನ್ನ ಮನಸ್ಸನ್ನು ಯಾರೂ ಕಟ್ಟಿ ಹಾಕಲಾಗದು. ಬಂಧನ ಎನ್ನುವುದೂ ಮನಸ್ಸಿಗೆ ಸಂಬಂಧಿಸಿದ್ದು, ಬಿಡುಗಡೆ ಎಂಬುವುದೂ ಮನಸ್ಸಿಗೆ ಸಂಬಂಧಿಸಿದ್ದು'. ಮನಸ್ಸು ಮಾಡಿದರೆ ವ್ಯಕ್ತಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ.
ಮನಸ್ಸನ್ನು ಹತೋಟಿಗೆ ತಂದುಕೊಂಡರೆ ಏನನ್ನೂ ಸಾಧಿಸಬಹುದು. ನಮ್ಮ ಸಮಸ್ಯೆಯನ್ನು ನಾವೇ ಪರಿಹರಿಸಕೊಳ್ಳಬೇಕೆ ವಿನಾ ಇನ್ನೊಬ್ಬರು ಅದನ್ನು ಸರಿಪಡಿಸಲಾಗದು. ಆದರೆ, ಮನಃಶಾಸ್ತ್ರಜ್ಞರು, ವೈದ್ಯರು ಅದಕ್ಕೆ ಸಹಕರಿಸಬಹುದು. ಮನಸ್ಸಿನ ಸಮಸ್ಯೆಯನ್ನು ಬಿಚ್ಚಿಡುವುದರಿಂದ ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಡಿ-ಅಡಿಕ್ಷನ್ ಸೆಂಟರ್‌ನಂಥ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ತಂಡ ಸಹಕರಿಸುತ್ತದೆ.
(ಮನಃಶಾಸ್ತ್ರಜ್ಞರಾದ ಲೇಖಕರನ್ನು ಸಂಪರ್ಕಿಸಲು ಮೊ. 9880441703)
- ಕೆ.ಸಿ. ಸದಾನಂದ ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


