ನಾನು ನಾನೇ!
ಅವಳು ನೋಡಲು ಎಣ್ಣೆಗಪ್ಪು. ಆದರೂ ಸೌಂದರ್ಯವತಿ. ಓದಿನಲ್ಲಿ ಚೂಟಿ, ಸದಾ ತುಂಟಾಟ, ಲವಲವಿಕೆಯಿಂದ ಎಲ್ಲೆಡೆ ಓಡಾಡುತ್ತಾ,...

ಕಿತ್ಹಾಕಿ ಕೀಳರಿಮೆ, ನಿಮ್ಮ ಮೇಲಿರಲಿ ಒಲುಮೆ
ಅವಳು ನೋಡಲು ಎಣ್ಣೆಗಪ್ಪು. ಆದರೂ ಸೌಂದರ್ಯವತಿ. ಓದಿನಲ್ಲಿ ಚೂಟಿ, ಸದಾ ತುಂಟಾಟ, ಲವಲವಿಕೆಯಿಂದ ಎಲ್ಲೆಡೆ ಓಡಾಡುತ್ತಾ, ಶಿಕ್ಷರ ಗಮನ ಸೆಳೆಯುತ್ತಾ, ಪೋಷಕರನ್ನು ಆನಂದದಲ್ಲಿ ತೇಲಾಡಿಸುತ್ತಾ ತನ್ನದೇ ಪುಟ್ಟ ಪ್ರಪಂಚದಲ್ಲಿ ರಾಜಕುಮಾರಿಯಂತೆ ದಿನ ಕಳೆಯುತ್ತಿದ್ದಳು. ಆದರೆ ಅದೇನೋ ಇದಕ್ಕಿದ್ದಂತೆ ಅವಳನ್ನು 'ಮೌನ' ಆವರಿಸಿಕೊಂಡು ಬಿಡುತ್ತದೆ. ಅಷ್ಟೇ...
ಆಕೆಯ ಎಲ್ಲ ವರ್ತನೆಗಳೂ ಬದಲಾಗುತ್ತವೆ. ಒಂದು ಪ್ರಶ್ನೆ ಕೇಳಿದರೆ ಮಾರುತ್ತರ ಕೊಡುತ್ತಿದ್ದಾಕೆಗೆ ಈಗ ಎಷ್ಟೇ ಪ್ರಶ್ನೆ ಕೇಳಿದರೂ ಒಂದೇ ಒಂದು, ಹೋಗಲಿ ಚುಟುಕಿನ ಉತ್ತರವೂ ಇಲ್ಲ. ಹಾಗಾದರೆ ಆಕೆಗೆ ಏನಾಯಿತು? ಯಾರ ಬಳಿಯೂ ಉತ್ತರವಿಲ್ಲ. ಓದಿನಲ್ಲಿ ಮುಂದಿದ್ದಾಕೆಗೆ ಅಲ್ಲೂ ನಿರಾಸಕ್ತಿ. ಕಾರಣ ಕೇಳಿದರೆ ಬಾಯೇ ಬಿಡುತ್ತಿಲ್ಲ. ಕೊನೆಗೆ ಮನೋವೈದ್ಯರ ಬಳಿ ಕರೆದುಕೊಂಡು ಹೋದಾಗ ತಿಳಿದ ಅಂಶ ಆಕೆಗೆ ಶುರುವಾಗಿದೆ 'ಕೀಳರಿಮೆ' (Inferiority complex) ಎಂಬ ವ್ಯಾದಿ.
ಆಕೆಗದು ಶುರುವಾಗಿದ್ದು, ತನ್ನ ತರಗತಿಯಲ್ಲಿ ಬೆಳ್ಳಗಿನ ಹುಡುಗಿಯ ಹೊಸ ಎಂಟ್ರಿ ಕೊಟ್ಟಾಗ. ಆಕೆ ತನಗಿಂತ ಬೆಳ್ಳಗಿದ್ದಾಳೆ. ಓದಿನಲ್ಲೂ ತನಗಿಂತಲೂ ಬುದ್ಧಿವಂತೆ. ಶಾಲೆಯಲ್ಲಿ ಎಲ್ಲರೂ ಅವಳನ್ನೇ ಹೆಚ್ಚು ಮಾತನಾಡಿಸುತ್ತಿದ್ದಾರೆ. ನನ್ನನ್ನು ಕಡೆಗಣಿಸುತ್ತಿದ್ದಾರೆ ಎಂಬಿತ್ಯಾದಿ ಅಂಶಗಳನ್ನು ತನಗೆ ತಾನೇ ಅಂದುಕೊಂಡು ಕೀಳರಿಮೆ ಎಂಬ ಪ್ರಪಾತಕ್ಕೆ ಬಿದ್ದು ಬಿಟ್ಟಿರುತ್ತಾಳೆ.
ಕೀಳರಿಮೆ ಏಕೆ ಬರುತ್ತೆ?
ಮಕ್ಕಳಿಗೆ ಸಿಗುವ ಪ್ರಾಶಸ್ತ್ಯಗಳು ಕಡಿಮೆಯಾದಾಗ, ಅವರನ್ನು ಇತರರಿಗೆ ಹೋಲಿಸಿ ನಿಂದಿಸಿದಾಗ, ಅಂದ- ಚೆಂದದ ವಿಷಯ ಬಂದಾಗ, ಸದಾ ನಿಂದನೆಗೊಳಗಾದರೆ... ಇತ್ಯಾದಿ ಅಂಶಗಳು ಗಣನೆಗೆ ಬರುತ್ತದೆ.
ದೊಡ್ಡವರಿಗೆ ಕುಟುಂಬ ವರ್ಗದಲ್ಲಿ ವೈಮನಸ್ಸುಗಳು ಎದುರಾದಾಗ, ಸ್ನೇಹಿತರು ಮತ್ತು ಸಹಪಾಠಿಗಳ ನಿರಂತರ ಟೀಕೆಗೆ ಗುರಿಯಾದಾಗ, ನಮ್ಮ ಕಾರ್ಯಗಳಲ್ಲಿ ನಿರಂತರ ವೈಫಲ್ಯ ಕಂಡಾಗ, ಕಚೇರಿಯಲ್ಲಿನ ವಾತಾವರಣ ಸರಿಯಿಲ್ಲದಿರುವಾಗ ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತಾರೆ.
ಕೀಳರಿಮೆ ತೊರೆಯೋದು ಹೇಗೆ?
ಇದು ಅತ್ಯಂತ ಸರಳ. ಆದರೆ ಮನಸ್ಸಿನ ನಿಗ್ರಹ, ಏಕಾಗ್ರತೆ ಹಾಗೂ ಆತ್ಮಾಭಿಮಾನ ಅವಶ್ಯ. ಮಾಡುವ ಕಾರ್ಯಗಳ ಬಗ್ಗೆ ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕು. ಎಲ್ಲವನ್ನೂ ಧನಾತ್ಮಕವಾಗಿ ಯೋಚಿಸಬೇಕು. ನಾನು ಎಲ್ಲವನ್ನೂ ಮಾಡಬಲ್ಲೆ, ಇತರರಿಗಿಂತ ಯಾವುದರಲ್ಲೂ ಕಡಿಮೆಯೇನಿಲ್ಲ, ಬೇರೆಯವರಿಂದ ಸಾಧ್ಯವಾಗುವುದು ನನ್ನಿಂದ ಯಾಕೆ ಸಾಧ್ಯವಾಗದು ಎಂಬ ಛಲ, ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಕೆಲವು ವೇಳೆ ವಿಫಲರಾದಾಗ ನಮಗಿಂತ ಕೆಳಮಟ್ಟದಲ್ಲಿರುವ, ಕುರೂಪಿಯಾಗಿರುವವರನ್ನು ಕಂಡು ಸಮಾಧಾನಪಟ್ಟುಕೊಳ್ಳಬೇಕು. ಉಳಿದಂತೆ ಕೀಳರಿಮೆ ತೊರೆಯಲು ಅಷ್ಟಸೂತ್ರಗಳಿವೆ...
ಹಿತಶತ್ರುಗಳ ಬಗ್ಗೆ ಎಚ್ಚರ
ನಮ್ಮವರೇ ನಮಗೆ ತಿಳಿಯದ ಹಾಗೆ ದ್ರೋಹ ಬಗೆಯುವವರು ಇರುತ್ತಾರೆ. ಇಂಥವರ ಬಗ್ಗೆ ನಿಗಾ ಇರಲಿ. ಯಾವತ್ತಾದರೂ ಅವರಿಂದ ನಮ್ಮ ಭಾವನೆಗೆ, ಕೆಲಸಕ್ಕೆ ಚ್ಯುತಿ ಅಥವಾ ಧಕ್ಕೆ ಬರುತ್ತದೆ ಎಂಬುದನ್ನು ಮುಂಚಿತವಾಗಿಯೇ ತಿಳಿದಿರಬೇಕು. ಅಂಥ ಸಂದರ್ಭ ಎದುರಾದಾಗ ಕೂಡಲೇ 'ಅವನ ಪ್ರವೃತ್ತಿಯೇ ಅಂಥದ್ದು, ವಿಶ್ವಾಸ ದ್ರೋಹಿ, ಅವನೊಬ್ಬ ಹಿತಶತ್ರು' ಎಂದರಿತು ಆ ಕ್ಷಣದಿಂದಲೇ ನಿಮ್ಮ ಗುರಿಯೆಡೆಗೆ ಸಾಗುವ ಪ್ರವೃತ್ತಿ ನಿಮ್ಮಲ್ಲಿರಬೇಕು.
ನಂಬಿಕೆ ಮುಖ್ಯ
ಕೌಟುಂಬಿಕ ಸಮಸ್ಯೆ ಎದುರಾದಾಗ ನೆರೆಹೊರೆಯ ಎಲ್ಲರೂ ನೋಡುವ ದೃಷ್ಟಿಕೋನ, ಮೂದಲಿಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ವಂಶಪಾರಂಪರ್ಯವಾಗಿ ಬಂದಿರುವ ನಮ್ಮ ಬಾಹ್ಯ ಸೌಂದರ್ಯ, ಜತೆಗೆ ಬಂದ ಸಾಂಕ್ರಮಿಕ ರೋಗಗಳು, ಲೈಂಗಿಕತೆಯ ಮನೋಭಾವ, ಚರ್ಮದ ಬಣ್ಣ, ಜಾತಿಯ ಹಿನ್ನೆಲೆ, ಜೀವನ ಪದ್ಧತಿ ಸೇರಿದಂತೆ ವೈಯಕ್ತಿಕ ಜೀವನ ನಿರ್ವರ್ಹಣೆಗಳು ನಿಮ್ಮ ಮನಸ್ಸನ್ನು ಕದಡಬಹುದು. ಯಾವತ್ತೂ ನಿಮ್ಮತನವನ್ನು ಬಿಟ್ಟುಕೊಡದೆ, ನಿಮ್ಮ ಮೇಲೆ ನಂಬಿಕೆ ಇಟ್ಟಿರಿ.
ಆತ್ಮರಕ್ಷಣೆ
ಕಾರ್ಯಶ್ರದ್ಧೆ ಮತ್ತು ನಂಬಿಕೆಯೊಂದಿಗೆ ಮುನ್ನುಗ್ಗಿ. ಯಾವತ್ತೂ ಮುಂದಿಟ್ಟ ಹೆಜ್ಜೆ ಹಿಂದಿಡಬೇಡಿ. ಇದೇ ಸಾಧನೆಗೆ ದಾರಿಯಾದೀತು. ಯಾವತ್ತೂ ಆತ್ಮವಂಚನೆಗೆ ಒಳಗಾಗದೆ ದೂಷಿತರಿಗೆ ಸಾಧನೆಯ ಮೂಲಕ ಉತ್ತರ ಕೊಡುವ ಪರಿಪಾಠ ಬೆಳೆಸಿಕೊಳ್ಳಿ.
ಸ್ವ ವಿಮರ್ಶೆ
ಯಾವತ್ತೂ ಇನ್ನೊಬ್ಬರ ಬಗ್ಗೆ ಟೀಕಿಸುವ, ವಿಮರ್ಶೆ ಮಾಡಲು ಮುಂದಾಗಬೇಡಿ. ಅದರ ಬದಲು ಸ್ವ- ವಿಮರ್ಶೆ ಮಾಡಿಕೊಳ್ಳವ ಮನೋಪ್ರವೃತ್ತಿ ನಮ್ಮದಾಗಿರಬೇಕು. ಇದು ನಮ್ಮ ಆತ್ಮವಿಸ್ವಾಸ ಮತ್ತು ನಂಬುಗೆಯನ್ನು ದ್ವಿಗುಣಗೊಳಿಸುತ್ತದೆ.
ಹಿತೈಷಿಗಳ ನಂಟು
ಯಾರು ನಿಮ್ಮ ಕೆಲಸಕ್ಕೆ, ದೈನಂದಿನ ಜೀವನಕ್ಕೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಾರೋ ಎಂಬುದನ್ನರಿತು ಅಂಥವರೊಂದಿಗೆ ಮಾತ್ರ ಸಲುಗೆಯಿಂದ ವರ್ತಿಸಿ. ಗುರಿ ಸಾಧನೆಗೆ ಧೈರ್ಯ ತುಂಬುವ, ಪ್ರೇರೇಪಿಸುವ ನಿಟ್ಟಿನಲ್ಲಿ ಒಳಿತು- ಕೆಡುಕಿನ ಕುರಿತು ನೇರವಾಗಿ ಚರ್ಚಿಸುವಂಥ ವ್ಯಕ್ತಿಗಳೊಂದಿಗೆ ನಂಟಿರಲಿ.
ಸ್ವಯಂ ಪ್ರೀತಿ
ನಮ್ಮಲ್ಲಿನ ಅಸಾಧಾರಣ ವ್ಯಕ್ತಿತ್ವ ಹಾಗೂ ಧನಾತ್ಮಕ ಯೋಚನೆಗಳ ಬಗ್ಗೆ ಪ್ರೀತಿಯಿರಲಿ. ಸಾಧಿಸಿದ್ದಕ್ಕೆ ಮತ್ತು ಸಾಧಿಸಬೇಕಾದ ನಡೆಯ ಕುರಿತು ಸ್ವಾಭಿಮಾನ ಬೇಕು. ಆದರೆ ದುರಹಂಕಾರ ಸಲ್ಲದು. ಇದು ಮುಂದೊಂದು ದಿನ ವೈಯಕ್ತಿಕ ಹಿತಾಸಕ್ತಿಗೇ ಮಾರಕವಾದೀತು.
ತಟಸ್ಥ ಮನೋಭಾವ
ಮಾಡುವ ಕಾರ್ಯ ಮತ್ತು ಅರಿಷಡ್ವರ್ಗಗಳ ಮೇಲೆ ಮಿತಿಯಿರಲಿ. ಇತರರ (ಹಿತೈಷಿಗಳ ಹೊರತುಪಡಿಸಿ) ಒಳಿತು- ಕೆಡುಕಿನ ಕುರಿತು ಹೆಚ್ಚು ಮೂಗು ತೂರಿಸುವುದು ಒಳಿತಲ್ಲ. ಅಂಥ ಸಂದರ್ಭ ಬಂದಾಗ ತಟಸ್ಥರಾಗಿರುವುದೇ ಒಳ್ಳೆಯದು.
ಸಿಡುಕು ಒಳಿತಲ್ಲ
ಕ್ರೋಧ ಮಾನವನಿಗೆ ಸಲ್ಲದು. ಆದರೆ ಛಲವಿರಬೇಕು. ಹಿಂಜರಿಕೆ, ಅಸಮಾಧಾನ, ಸಿಟ್ಟು ಈ ಮೂರರಿಂದ ದೂರವಿರಬೇಕು. ಇವು ಸಾಧನೆಯ ಶಕ್ತಿಯನ್ನು ಕುಂದಿಸುತ್ತವೆ, ಕಾಲನ್ನು ಎಳೆಯುತ್ತವೆ. ಅದಕ್ಕಾಗಿ ಇವುಗಳ ಸ್ವ ನಿಯಂತ್ರಣ ಇರಬೇಕು.
- ವೀರೇಶ ಜಿ. ಮಠ
mathvg@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


