ಆರೋಗ್ಯ-ಜೀವನಶೈಲಿ

ಫ್ಲರ್ಟ್ ಅಲರ್ಟ್!

ಫ್ಲರ್ಟ್ ಅಲರ್ಟ್!
Published On :

ವಿಲಾಸಿ, ಮೋಸಗಾರ, ವಂಚಕ ಎಂದೆಲ್ಲ ಕರೆಸಿಕೊಳ್ಳುವ ಈ ಫ್ಲರ್ಟ್‌ಗೆ ಮಾತೇ ಬಂಡವಾಳ. ಮಾತಿನಲ್ಲೇ ಮನೆ ಕಟ್ಟುವ ವ್ಯಕ್ತಿಗಳು ಸ್ನೇಹ, ಪ್ರೀತಿ, ಸಂತೋಷ ಗಳಿಸಲು ಹೇಳಿ ಮಾಡಿಸಿದ್ದು ಈ ಫ್ಲರ್ಟಿಂಗ್.
ಹಿಂದಿನ ದಿನಗಳಲ್ಲಿ ಗಂಡು ಹೆಣ್ಣು ಬಲು ಹುರುಪಿನಿಂದ ಮಾತನಾಡಿದರೆ ಚಕ್ಕಂದ ಎನ್ನುತ್ತಿದ್ದರು. ಗಂಡಸರು ಸೇರಿ ಮಾತನಾಡಿದರೆ ವ್ಯವಹಾರ. ಹೆಂಗಸರು ಒಟ್ಟಾಗಿ ಹರಟುತಿದ್ದರೆ ಪಟ್ಟಾಂಗ. ಮುದುಕಿಯರೇ ಸೇರಿ ಮಾತನಾಡುತ್ತಿದ್ದರೆ ಬೋಗಾರ. ಹುಡುಗರಷ್ಟೇ ಸೇರಿದ್ದರೆ ಹರಟೆ. ದಂಪತಿ ನಡುವಿನ ಪಿಸುಮಾತುಗಳು ಲಲ್ಲೆ, ಸಲ್ಲಾಪ ಎಂದು ಕರೆಸಿಕೊಳ್ಳುತ್ತಿದ್ದವು. ಈಗ 'ಹಲೋ' ಎಂಬಲ್ಲಿಂದ ಆರಂಭವಾಗುವ ಫ್ಲರ್ಟಿಂಗ್, ಮಾತಿನಲ್ಲಿ ಮುಂದುವರಿದು, ಲಲ್ಲೆ, ಚಕ್ಕಂದದ ಹಂತ ದಾಟಿ ಸಲ್ಲಾಪಕ್ಕೆ ಬಂದು ನಿಲ್ಲುತ್ತದೆ.
ಈ ಜಗತ್ತಿನಲ್ಲಿ ನಿತ್ಯ ಪ್ರತಿ ಕ್ಷಣವನ್ನು ಸಂತೋಷವಾಗಿಡಬಲ್ಲ ಫ್ಲರ್ಟಿಂಗ್ ಹುಡುಗ-ಹುಡುಗಿಯರಿಗೆ ಮಾತ್ರ ಸೀಮಿತವಾಗದೆ ಎಲ್ಲ ವಯೋವಾನದವರನ್ನೂ ಕಾಡಿದೆ, ಕಾಡುತ್ತಿದೆ ಕೂಡಾ. ಆದರೆ, ಯಾವುದೇ ಉದ್ದೇಶವಿಲ್ಲದೆ ಮಾಡುವ ಫ್ಲರ್ಟಿಂಗ್ ಕೇವಲ ಭಾವನಾತ್ಮಕ ವಿಷಯವಾಗಿದ್ದರೆ ಇದರಿಂದ ಯಾರಿಗೂ ತೊಂದರೆ ಇರುವುದಿಲ್ಲ. ಆದರೆ, ಉದ್ದೇಶಪೂರ್ವಕ ಫ್ಲರ್ಟ್ ಮಾಡಿದರೆ ಅದರಿಂದ ಇನ್ನೊಬ್ಬರ ಬಾಳು ಮೂರಾಬಟ್ಟೆ ಆಗುವುದು ಖಂಡಿತ.
ಇಬ್ಬರ ನಡುವಿನ ಸ್ನೇಹ ಸಂಬಂಧಕ್ಕೆ, ಪ್ರೀತಿಗೆ, ಮನಸ್ಸಿನ ದುಗುಡ ಹಂಚಿಕೊಳ್ಳಲಿಕ್ಕೆ, ಖುಷಿ ಜೀವನಕ್ಕೆ, ಮಾತು, ನಗು, ಹರಟೆಗಳ ಸ್ನೇಹಮಯಿ ಫ್ಲರ್ಟಿಂಗ್ ತಪ್ಪೇನಿಲ್ಲ.ಆದರೆ, ಆದರಾಚೆಗೆ ದಾಟಿ ಡೇಟಿಂಗ್‌ಗೆ ಮುನ್ನುಡಿಯಾಗಿ, ಲೈಂಗಿಕ ಕಿರುಕುಳವಾಗಿ ಬದಲಾದರೆ ಮಾತ್ರ ಕಷ್ಟ ಕಷ್ಟ. ಹಾಗಾಗಿ 'ಫ್ಲರ್ಟ್‌' ಬಗ್ಗೆ ಒಂದಿಷ್ಟು ಎಚ್ಚರಿಕೆ ಅವಶ್ಯ.

ಇತಿಮಿತಿಯ ಫ್ಲರ್ಟ್
ಫ್ಲರ್ಟ್ ಮಾಡುವುದೆಂದರೆ ಇನ್ನೊಬ್ಬರ ಭಾವನೆಗಳೊಂದಿಗಿನ ಚೆಲ್ಲಾಟವಿದ್ದಂತೆ. ಈ ಹುಚ್ಚಾಟದ ಮೇಲೆ ಹಿಡಿತವಿರಲಿ.
ಫ್ಲರ್ಟ್ ಮಾಡೋದು ಎಷ್ಟು ಸರಿ, ಎಷ್ಟು ತಪ್ಪು ಎನ್ನುವುದಕ್ಕಿಂತ ಅದರ ಇತಿಮಿತಿ ಅರಿತು ಫ್ಲರ್ಟ್ ಮಾಡಿದರೆ ಮಾತ್ರ ಅದು ಆರೋಗ್ಯಕರ ಆಗಿರಲು ಸಾಧ್ಯ.
ಫ್ಲರ್ಟಿಂಗ್ ತೀರಾ ಗಂಭೀರವಲ್ಲವಾದರೂ ಸಿಲ್ಲಿಯಾಗಿ ಪರಿಗಣಿಸದೆ ಫ್ಲರ್ಟ್ ಮಾಡುವವರ ಬಗ್ಗೆ ಎಚ್ಚರ ವಹಿಸಿ.
ಏಕಕಾಲಕ್ಕೆ ಐದಾರು ಜನರೊಂದಿಗೆ ಫ್ಲರ್ಟ್ ಮಾಡುವ ಶೂರ, ಧೀರೆಯರು ಇದ್ದಾರೆ. ಅಂಥವರಿಂದ ದೂರವಿರುವುದು ಒಳಿತು.
ಫ್ಲರ್ಟಿಂಗ್ ಕೇವಲ ಒಂದಿಷ್ಟು ಮಾತು, ತಮಾಷೆ, ಒಂಚೂರು ಹರಟೆ, ಸಣ್ಣಪುಟ್ಟ ಹುಸಿಕೋಪ, ಮುನಿಸಿಗೆ ಮಾತ್ರ ಸಂಬಂಧಿಸಿರಲಿ. ತೀರಾ ಭಾವನಾತ್ಮಕ, ಲೈಂಗಿಕತೆಯತ್ತ ವಾಲದಂತೆ ಜಾಗೃತೆ ವಹಿಸಿ.
ಇನ್ನೊಬ್ಬರನ್ನು ಆಕರ್ಷಿಸುವ ಸೌಂದರ್ಯ ತನ್ನಲ್ಲಿದೆಯೇ ಎಂದು ಪರೀಕ್ಷಿಸಲು, ಮತ್ತೊಬ್ಬರನ್ನು ಸತಾಯಿಸಲು, ಮೋಸಗೊಳಿಸಲು ಖಂಡಿತಾ ಫ್ಲರ್ಟ್ ಮಾಡಬೇಡಿ.
ಫ್ಲರ್ಟಿಂಗ್ ಅಲ್ಪಕಾಲಿಕ ಆಕರ್ಷಣೆ ಮಾತ್ರ. ಅದನ್ನೇ ಸಂಪೂರ್ಣ ನಂಬಿದರೆ ನೋವಿನ ದಾರಿಯಾಗುತ್ತದೆ.
ಫ್ಲರ್ಟ್ ಮಾಡುವವರಿಗೆ ಸಮಾನ ಮನಸ್ಕರು ಸಿಕ್ಕರೆ ಸರಿ. ಆದರೆ, ಅದು ಫ್ಲರ್ಟಿಂಗ್ ಎಂದರಿಯದೆ ನಂಬಿ ಮೋಸ ಹೋದರೆ ಜೀವನ ದುರಂತವಾದೀತು.

-ಗಣೇಶ್ ಕಮ್ಲಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.