ಗ್ಯಾಡ್ಜೆಟ್ಸ್

iPhone 16: Apple ಮಳಿಗೆಗಳತ್ತ ಮುಗಿ ಬಿದ್ದ ಗ್ರಾಹಕರು, ಹೊಸ ಫೋನ್ ಕೊಳ್ಳಲು ಕಾತುರ!

ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶಾದ್ಯಂತ ಇರುವ ಆ್ಯಪಲ್ ಸ್ಟೋರ್ ಗಳಲ್ಲಿ ಐಫೋನ್ 16 ಮಾರಾಟ ಆರಂಭವಾಗಿದ್ದು, ಹೊಸ ಫೋನ್ ಕೊಳ್ಳಲು ಗ್ರಾಹಕರು ಆ್ಯಪಲ್ ಮಳಿಗೆಗಳತ್ತ ಧಾವಿಸುತ್ತಿದ್ದಾರೆ.

iPhone 16: Apple ಮಳಿಗೆಗಳತ್ತ ಮುಗಿ ಬಿದ್ದ ಗ್ರಾಹಕರು, ಹೊಸ ಫೋನ್ ಕೊಳ್ಳಲು ಕಾತುರ!
ಐಫೋನ್ 16 ಗಾಗಿ ಮುಗಿಬಿದ್ದ ಗ್ರಾಹಕರು
Published On :

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾಗಿದ್ದ ಆ್ಯಪಲ್ ಕಂಪನಿಯ ಬಹು ನಿರೀಕ್ಷಿತ ಐಫೋನ್‌ನ 16ನೇ ಸರಣಿಯ ವಿವಿಧ ಸ್ಮಾರ್ಟ್‌ಫೋನ್‌ಗಳ ಮಾರಾಟ ಭಾರತದಲ್ಲಿ ಶುಕ್ರವಾರದಿಂದ ಅಂದರೆ ಇಂದಿನಿಂದ (ಸೆ.20) ಆರಂಭವಾಗಿದೆ.

ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶಾದ್ಯಂತ ಇರುವ ಆ್ಯಪಲ್ ಸ್ಟೋರ್ ಗಳಲ್ಲಿ ಐಫೋನ್ 16 ಮಾರಾಟ ಆರಂಭವಾಗಿದ್ದು, ಹೊಸ ಫೋನ್ ಕೊಳ್ಳಲು ಗ್ರಾಹಕರು ಆ್ಯಪಲ್ ಮಳಿಗೆಗಳತ್ತ ಸಾವಿರಾರು ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.

ದೆಹಲಿಯ ಸಾಕೇತ್‌ ಮಾಲ್‌ನಲ್ಲಿರುವ ಆ್ಯಪಲ್‌ ಸ್ಟೋರ್‌ನಲ್ಲಿ ಮಾರಾಟ ನಡೆಯುತ್ತಿದ್ದು, ಸ್ಟೋರ್‌ ಹೊರಗೆ ಗ್ರಾಹಕರು ಸಾಲಿನಲ್ಲಿ ನಿಂತು ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.

ದೆಹಲಿ ಮಾತ್ರವಲ್ಲದೇ ಮುಂಬೈನ ಆ್ಯಪಲ್‌ ಸ್ಟೋರ್‌ಗಳು ಹಾಗೂ ವಿವಿಧ ಮೊಬೈಲ್‌ ಮಳಿಗೆಗಳ ಮುಂದೆ ಗ್ರಾಹಕರ ಉದ್ದನೆಯ ಸಾಲುಗಳು ಕಂಡುಬಂದಿವೆ. ಇದೇ ಮೊದಲ ಬಾರಿಗೆ ಐಫೋನ್‌ಗಳು ಭಾರತದಲ್ಲಿ ತಯಾರಾಗುತ್ತಿವೆ. ಆದರೆ ಪ್ರಸ್ತುತ ಭಾರತದಲ್ಲಿ ತಯಾರಾದ ಫೋನ್‌ಗಳು ಸದ್ಯಕ್ಕೆ ಮಾರಾಟವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

‘ಇದೇ ಮೊದಲ ಬಾರಿಗೆ ಹಿಂದಿನ ಆವೃತ್ತಿಯ ದುಬಾರಿ ಮಾದರಿಯ ಫೋನ್‌ನ ಬೆಲೆಗಿಂತ ಅಗ್ಗದ ಬೆಲೆಗೆ 16 ಸರಣಿಯ ಐಫೋನ್‌ ಪ್ರೊ ಸರಣಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ. ಐಫೋನ್ 16 ಪ್ರೊ ಬೆಲೆ 1.19 ಲಕ್ಷ ರೂ ಹಾಗೂ ಐಫೋನ್‌ 16 ಪ್ರೊ ಮ್ಯಾಕ್ಸ್‌ ಬೆಲೆ 1.44ಲಕ್ಷದಿಂದ ಲಭ್ಯ’ ಎಂದು ಕಂಪನಿ ಹೇಳಿದೆ.

ವಿಶೇಷ ಏನು?

ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್‌ ಫೋನ್‌ಗಳು 128ಜಿಬಿ, 256ಜಿಬಿ, 512ಜಿಬಿ ಹಾಗೂ 1 ಟಿಬಿ ಮೆಮೋರಿ ಸಾಮರ್ಥ್ಯದೊಂದಿಗೆ ಲಭ್ಯವಿದೆ. ಅಂತೆಯೇ ಈವರೆಗಿನ ಐಫೋನ್‌ಗಳಲ್ಲೇ ಅತಿ ದೊಡ್ಡ ಡಿಸ್‌ಪ್ಲೇ 6.3 ಇಂಚು ಹಾಗೂ 6.9 ಇಂಚಿನ ಪರದೆಯುಳ್ಳ ಫೋನ್‌ಗಳು ಇದಾಗಿವೆ. ಐಫೋನ್‌ 16ರ ಬೆಲೆ 79,900ರಿಂದ ಆರಂಭವಾದರೆ, 16 ಪ್ಲಸ್‌ ಫೋನ್‌ ಬೆಲೆ 89,900ರಿಂದ ಲಭ್ಯವಾಗುತ್ತಿದೆ. ಹೊಸ ಐಫೋನ್ 16 ಪ್ರೊ ಸರಣಿಯ ಫೋನ್‌ಗಳಲ್ಲಿ ಎ18 ಪ್ರೊ ಚಿಪ್‌ ಹಾಗೂ 6 ಕೋರ್ ಜಿಪಿಯು ಚಿಪ್‌ಸೆಟ್ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಎ18 ಚಿಪ್‌ಸೆಟ್‌ ಹಿಂದಿನ 15 ಸರಣಿಯ ಫೋನ್‌ಗಳಿಗಿಂತ ಶೇ 20ರಷ್ಟು ವೇಗ ಹೊಂದಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ತಯಾರಾದ ಐಫೋನ್‌ 16 ಹಾಗೂ ಐಫೋನ್‌ 16 ಪ್ಲಸ್‌ ಫೋನ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ವರ್ಷದ ಹಿಂದೆ ಬಿಡುಗಡೆಯಾದ ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್‌ ಬೆಲೆಯು ಕ್ರಮವಾಗಿ 1.34 ಲಕ್ಷ ಹಾಗೂ 1.59 ಲಕ್ಷ ರೂ ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.