ದಾವಣಗೆರೆ ಬೆಣ್ಣೆದೋಸೆ ಯಾರಿಗೆ?
ದಾವಣಗೆರೆಯಲ್ಲಿ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಮೂರೂ ಪಕ್ಷಗಳ ಅಭ್ಯಥಿಗಳಿಗೂ...

ದಾವಣಗೆರೆ ಬೆಣ್ಣೆದೋಸೆ ಯಾರಿಗೆ?
ದಾವಣಗೆರೆಯಲ್ಲಿ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಮೂರೂ ಪಕ್ಷಗಳ ಅಭ್ಯಥಿಗಳಿಗೂ ಇದೊಂದು ಪ್ರತಿಷ್ಠೆಯ ಪ್ರಶ್ನೆ. ಹ್ಯಾಟ್ರಿಕ್ ಸಾಧಿಸುವ ಹುಮ್ಮಸ್ಸಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿದ್ದೇಶ್ವರ ಕಣಕ್ಕಿಳಿದಿದ್ದಾರೆ. ಕಳೆದ ಎರಡು ಬಾರಿಯೂ ಸೋಲನುಭವಿಸಿದ್ದ ಮಲ್ಲಿಕಾರ್ಜುನ ಈ ಬಾರಿ ಗೆದ್ದೇ ತೀರುವೆ ಎಂಬ ವಿಶ್ವಾಸದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದಿದ್ದಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮಹಿಮಾ ಪಟೇಲ್ ಸ್ಪರ್ಧಿಸುತ್ತಿದ್ದಾರೆ.
- ದಾವಣಗೆರೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧಿಸಿದ್ದು, ಈಗ ನಿಮ್ಮ ಹ್ಯಾಟ್ರಿಕ್ ಸ್ಪರ್ಧೆ ಬಗ್ಗೆ ಏನನ್ನಿಸುತ್ತದೆ?
ತಮ್ಮ ತಂದೆ ಜಿ. ಮಲ್ಲಿಕಾರ್ಜುನಪ್ಪ 1996ರಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಜಯ ದಾಖಲಿಸಿದ್ದರು. ನಂತರ 1999ರಲ್ಲಿ ಮತ್ತೆ ಮಲ್ಲಿಕಾರ್ಜುನಪ್ಪ ಇಲ್ಲಿಂದ ಪುನರಾಯ್ಕೆಯಾದರು. 2004, 2009ರಲ್ಲೂ ತಾವು ಬಿಜೆಪಿ ಅಭ್ಯರ್ಥಿಯಾಗಿ ಸತತ 2 ಅವಧಿಗೆ ಆಯ್ಕೆಯಾಗಿದ್ದೇನೆ. ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ. 4ನೇ ಅವಧಿಗೂ ಪಕ್ಷ ಜಯಿಸಲಿದೆ. ನರೇಂದ್ರ ಮೋದಿ ಅಲೆ, ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಅವಧಿಯಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳು, ಜನಪರ ಕಾರ್ಯಕ್ರಮಗಳು ನನ್ನ ಗೆಲವಿಗೆ ಕಾರಣವಾಗಲಿವೆ.
- ಯಾವ ಆಧಾರದಲ್ಲಿ ನೀವು ಜನರ ಬಳಿ ಮತ ಕೇಳುತ್ತಿದ್ದೀರಿ?
ಕೇಂದ್ರ ಸರ್ಕಾರದಿಂದ ಕ್ಷೇತ್ರಕ್ಕೆ ಸಿಗಬಹುದಾದ ಎಲ್ಲಾ ಸೌಲಭ್ಯ ತಂದಿದ್ದೇನೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ಜಿಲ್ಲೆಗೆ ಸಾಕಷ್ಟು ದುಡಿದಿದ್ದೇನೆ. ಸಂಸದನಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ, ನಿಸ್ವಾರ್ಥದಿಂದ ಸಲ್ಲಿಸಿರುವ ತೃಪ್ತಿ ಇದೆ. ದೇಶದ ಭದ್ರತೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆಯನ್ನು ತಹಬದಿಗೆ ತರಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವೆಂಬುದು ಜನರಿಗೂ ಗೊತ್ತಿದೆ.
- ಕ್ಷೇತ್ರದ ಜನರೊಂದಿಗೆ ನಿಮ್ಮ ಒಡನಾಟ ಹೇಗಿಟ್ಟುಕೊಂಡಿದ್ದೀರಿ?
ಸಂಸದನಾಗಿ ಕ್ಷೇತ್ರದ ಸಾವಿರಾರು ಹಳ್ಳಿಗಳನ್ನು 3- 4 ಸಲ ಸುತ್ತಾಡಿದ್ದು, ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಿದ ತೃಪ್ತಿ ಇದೆ. ಕ್ಷೇತ್ರದ ಎಲ್ಲ ವರ್ಗ, ಧರ್ಮೀಯರ ಪ್ರೀತಿಗೆ ಪಾತ್ರನಾಗಿದ್ದೇನೆ. ಜನರ ಸುಖ, ದುಃಖದಲ್ಲಿ ಭಾಗಿಯಾಗಿದ್ದೇನೆ. ಸಂಸದನಾಗಿ ತಮ್ಮಷ್ಟು ಯಾವೊಬ್ಬ ಸಂಸದರೂ ಕ್ಷೇತ್ರವನ್ನು ಸುತ್ತಾಡಿರುವ ನಿದರ್ಶನ ಇಲ್ಲ. ಇದೂ ಜನರ ಮನಸ್ಸಿನಲ್ಲಿದೆ. ಸಮುದಾಯ ಭವನ, ಶಾಲಾ ಕೊಠಡಿ, ಕುಡಿಯುವ ನೀರು, ರಸ್ತೆ ಹೀಗೆ ಮೂಲ ಸೌಕರ್ಯ ಕಲ್ಪಿಸಲು ಒಬ್ಬ ಸಂಸದನಾಗಿ ಕೇಂದ್ರ, ರಾಜ್ಯ ಸರ್ಕಾರದ ಮಟ್ಟದಲ್ಲಿ ಶಕ್ತಿ ಮೀರಿ, ಕೆಲಸ ಮಾಡಿಸಿರುವುದು ಜನರಿಗೂ ಗೊತ್ತಿದೆ.
- ದಾವಣಗೆರೆಯಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಲಾಗಿಲ್ಲವೆಂಬ ಕೊರಗಿದೆ?
ಜಗಳೂರಿಗೆ ಭದ್ರಾ ಮೇಲ್ದಂಡೆಯಡಿ ನೀರೊದಗಿಸಲು ಮಂಜೂರಾತಿ ಕೊಡಿಸಿದೆ. ಹರಪನಹಳ್ಳಿ, ಜಗಳೂರನ್ನು ಇನ್ನೂ ಅಭಿವೃದ್ಧಿಪಡಿಸಬೇಕಿದೆ. ದಾವಣಗೆರೆಯಲ್ಲಿ ಏರ್ಸ್ಟ್ರಿಪ್, ಮೆಕ್ಕೆಜೋಳ ಸಂಸ್ಕರಣಾ ಘಟಕ, ನೀರಾವರಿ ಸೌಲಭ್ಯ ಕಲ್ಪಿಸುವುದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕಿದೆ.
ಎಲ್ಲ ಧರ್ಮಗುರುಗಳು, ಮಠಾಧೀಶರ ಆಶೀರ್ವಾದವೂ ನಮ್ಮ ಮೇಲಿದೆ. ಒಳ್ಳೆಯ ಕೆಲಸ, ಜನ ಮೆಚ್ಚುವ ಸೇವೆ ಮಾಡುವ ತಮಗೆ ಜಾತಿ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪಕ್ಷ ಬಿಜೆಪಿಯಾಗಿದೆ.
- ಜಿ.ಎಂ. ಸಿದ್ದೇಶ್ವರ
--
- ದಾವಣಗೆರೆ ಲೋಕಸಭೆ ಕ್ಷೇತ್ರದ ವಾತಾವರಣ ನಿಮಗೆ ಹೇಗಿದೆ?
ದಾವಣಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ತಮ್ಮ ಪರ ಅಲೆ ಮತದಾರರ ಮನಸ್ಸಿನಲ್ಲಿ ಗುಪ್ತಗಾಮಿನಿ, ಪ್ರವಾಹೋಪಾದಿಯಲ್ಲಿ ಹರಿಯುತ್ತಿದೆ. ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ಜನ ತಮ್ಮ ಪರ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು, ರೈತರು, ಹಿರಿಯರು, ಯುವ ಜನರು ಪಕ್ಷಭೇದ ಮರೆತು, ತಮ್ಮ ಪರ ಕೆಲಸ ಮಾಡುತ್ತಿರುವುದು ಹೊಸ ಉತ್ಸಾಹ ಮೂಡಿಸಿದೆ. ತಮ್ಮ ತಂದೆ ಮಾಜಿ ಸಿಎಂ ಜೆ.ಎಚ್. ಪಟೇಲ್, ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಸಾಧನೆ ಜತೆಗೆ ಭರವಸೆ ಇಟ್ಟು ಜನ ತಮ್ಮ ಪರ ಒಲವು ತೋರುತ್ತಿದ್ದಾರೆ.
- ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲವೆಂಬ ಬೇಸರ ನಿಮ್ಮಲ್ಲಿದೆಯೆ?
ಮಹಿಮಾಗೆ ಕಾಂಗ್ರೆಸ್ ಟಿಕೆಟ್ ಸಿಗಲೆಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಟಿಕೆಟ್ ಸಿಗದಿದ್ದರಿಂದ ತಮಗೇನೂ ಬೇಸರವಾಗಿಲ್ಲ. ಜೆಡಿಎಸ್ ಸೇರ್ಪಡೆಯಿಂದಾಗಿ ತಮ್ಮ ಪರವಾಗಿ ಪಕ್ಷಾತೀತವಾಗಿ ಬೆಂಬಲ ಸಿಗುತ್ತಿದೆ. ಜಾತಿ- ಭೇದ ಮರೆತು ಜನ ಇಂದು ನನ್ನ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಜನರಲ್ಲಿ ನನ್ನ ಬಗ್ಗೆ ಉತ್ತಮ ಭಾವನೆ ಮೂಡುತ್ತಿದೆ. ನನ್ನಿಂದ ಒಳ್ಳೆಯ ಕೆಲಸವಾಗುತ್ತದೆಂಬ ನಂಬಿಕೆ ಜನರಲ್ಲಿದ್ದು, ಅದೇ ಅಭಿಮಾನ ತಮ್ಮ ಉತ್ಸಾಹ ಹೆಚ್ಚಿಸುತ್ತಿದೆ.
- ಜೆ.ಎಚ್. ಪಟೇಲರ ಹೆಸರು ನಿಮಗೆ ಲಾಭ ತರುತ್ತದೆಯೆ?
ಮಾಜಿ ಸಿಎಂ ಜೆ.ಎಚ್. ಪಟೇಲರು ತಮ್ಮ ತಂದೆ ಎಂಬುದೇ ನನಗೆ ದೊಡ್ಡ ಆಸ್ತಿ. ಪಟೇಲರ ಮಗ ಸ್ಪರ್ಧಿಸಿದ್ದಾನೆಂಬ ಕಾರಣಕ್ಕೆ ಸಹಸ್ರಾರು ಜನರು ಇಂದು ಜೆಡಿಎಸ್ ಪರ ಕೆಲಸ ಮಾಡುತ್ತಿದ್ದಾರೆ. ರಾಜಕಾರಣ, ಜನಸೇವೆಯನ್ನು ತಾವು ವ್ಯವಹಾರವೆಂದು ಪರಿಗಣಿಸಿದವನಲ್ಲ. ರಾಜಕಾರಣವನ್ನು ತಾವು ಸೇವೆಯೆಂದು ಮಾಡುತ್ತಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಬಳಸುವ ವಾಹನಕ್ಕೆ, ಊಟ, ತಿಂಡಿಗೆ ಖರ್ಚಿಗೆ ಹಣ ನೀಡುತ್ತಿದ್ದೇನೆ.
- ದಾವಣಗೆರೆ ಅಭಿವೃದ್ಧಿ ಬಗ್ಗೆ ನಿಮ್ಮ ಕನಸು ಏನು?
ಪಟೇಲರ ಕನಸಿನ ಕೂಸು ದಾವಣಗೆರೆಯನ್ನು ರಾಷ್ಟ್ರ, ಜಗತ್ತಿನ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿಪಡಿಸಬೇಕು. ಶಿಕ್ಷಣ, ವ್ಯಾಪಾರ, ಸಂಸ್ಕೃತಿಯಲ್ಲಿ ಎಲ್ಲದರಲ್ಲೂ ಜಿಲ್ಲೆ ಉನ್ನತ ಸ್ಥಾನದಲ್ಲಿರಬೇಕು. ವಿಶ್ವಾದ್ಯಂತ ಇರುವ ತಮ್ಮ ಸ್ನೇಹಿತರು ಹಾಗೂ ಹಿರಿಯರ ಸಲಹೆ ಪಡೆದು ಉದ್ಯೋಗ ಸೃಷ್ಟಿ, ಕೈಗಾರಿಕೆ ಸ್ಥಾಪನೆ, ಕೃಷಿ, ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಜಿಲ್ಲೆಯು ವಿಶ್ವ ಭೂಪಟದಲ್ಲಿ ಗುರುತಿಸುವಂತಾಗಬೇಕು.
ಚುನಾವಣೆಯಲ್ಲಿ ನಿಮ್ಮ ಹೃದಯದ ಮಾತಿಗೆ ಕಿವಿಗೊಟ್ಟು ಮತ ಚಲಾಯಿಸಿ. ಯಾರು ಸಮಾಜವನ್ನು ರಕ್ಷಿಸಬಲ್ಲರು ಎಂಬುದನ್ನು ಹೃದಯಕ್ಕೆ ಒಮ್ಮೆ ಕೇಳಿ, ಮತ ಚಲಾಯಿಸಿ. ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುವ, ನಿಮ್ಮೆಲ್ಲರಲ್ಲೂ ಒಬ್ಬನಾಗಿ ಸೇವೆ ಮಾಡಬಲ್ಲ ಅಭ್ಯರ್ಥಿಗೆ ಮತ ನೀಡಿ.
- ಮಹಿಮಾ ಪಟೇಲ್
----------
- ದಾವಣಗೆರೆ ಕ್ಷೇತ್ರದಲ್ಲಿ 2 ಸಲ ಸೋತ ನೀವು ಸತತ 3ನೇ ಅವಧಿಗೆ ಸ್ಪರ್ಧಿಸುತ್ತಿದ್ದೀರಿ, ವಾತಾವರಣ ಹೇಗಿದೆ?.
ಎರಡು ಬಾರಿ ಸೋತರೂ ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು, ಮತ್ತೆ ಕಣಕ್ಕಿಳಿಸಿದೆ. ಈಗ ಕ್ಷೇತ್ರಾದ್ಯಂತ ಕಾಂಗ್ರೆಸ್ ಪರ ಅಲೆ ಕಂಡು ಬರುತ್ತಿದೆ. ಕಳೆದೊಂದು ದಶಕದಲ್ಲಿ ಬಿಜೆಪಿ ಸಂಸದರಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಜನರನ್ನು ಮರಳು ಮಾಡುತ್ತಿದ್ದಾರಷ್ಟೆ. ಅಭಿವೃದ್ಧಿಯೆಂಬುದನ್ನೇ ಸಂಪೂರ್ಣ ಕಡೆಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಯಾದ ನನ್ನ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
- ಯಾವ ಸಾಧನೆಗಳನ್ನು ಮುಂದಿಟ್ಟುಕೊಂಡು, ನೀವು ಮತದಾರರ ಬಳಿಗೆ ಹೋಗುತ್ತಿದ್ದೀರಿ?
ಡಾ. ಮನಮೋಹನಸಿಂಗ್ರ ಯುಪಿಎ ಸರ್ಕಾರದ ಸಾಧನೆ, ಸಿಎಂ ಸಿದ್ದರಾಮಯ್ಯ ಸರ್ಕಾರದ ಜನಪರ ಕಾರ್ಯ, ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು, ಚುನಾವಣೆಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಉದ್ಯೋಗ ಖಾತರಿ, ಆಹಾರ ಭದ್ರತೆ ಸೇರಿದಂತೆ ಹಲವಾರು ಜನಪರ ಕಾರ್ಯಗಳ ಜೊತೆಗೆ ಜನ ಮೆಚ್ಚುವಂತಹ ಆಡಳಿತದ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇನೆ.
- ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಯಾವ ರೀತಿಯ ವಾತಾವರಣವಿದೆ?
ಕಳೆದ ವಿಧಾನಸಭೆ ಚುನಾವಣೆ, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ ಎಂಬುದನ್ನು ಕಾಣಬಹುದು. ಬಿಜೆಪಿ ದುರಾಡಳಿತದಿಂದ ಬೇಸತ್ತ ಜನತೆ ಕಾಂಗ್ರೆಸ್ಸಿಗೆ ಆಶೀರ್ವದಿಸಿದ್ದಾರೆ. ರಾಜ್ಯ, ರಾಷ್ಟ್ರದಲ್ಲಿ ಎಲ್ಲಿಯೂ ನರೇಂದ್ರ ಮೋದಿ ಅಲೆ ಇಲ್ಲ. ಜಿಲ್ಲೆಯ 8 ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ 7 ಶಾಸಕರಿದ್ದು, ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ.
- ಮತದಾರರಿಗೆ ನಿಮ್ಮ ಭರವಸೆಗಳು ಏನು?
ದಾವಣಗೆರೆ ಜಿಲ್ಲೆಗೆ ಹೆಚ್ಚು ಕೈಗಾರಿಕೆಗಳನ್ನು ತರಬೇಕು. ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಿದೆ. ಮುಖ್ಯವಾಗಿ ಕೃಷಿ ಪ್ರಧಾನ ಜಿಲ್ಲೆಯಾದ ಈ ಭಾಗಕ್ಕೆ ಮೆಕ್ಕೆಜೋಳ ಸಂಸ್ಕರಣಾ ಕೇಂದ್ರ, ಶೀಥಲೀಕರಣ ಘಟಕ ಸ್ಥಾಪನೆ, ನೀರಾವರಿ ಯೋಜನೆಗಳನ್ನು ತರುವ ಮೂಲಕ ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು. ಅಭಿವೃದ್ಧಿ ಮಂತ್ರದೊಂದಿಗೆ ಚುನಾವಣೆ ಕಣಕ್ಕಿಳಿದಿದ್ದೇನೆ.
ಜಾತ್ಯತೀತ ನೆಲೆಗಟ್ಟಿನಲ್ಲಿ ನನ್ನ ತಂದೆ ಹಾಗೂ ನಾನು ರಾಜಕಾರಣ ಮಾಡುತ್ತಿದ್ದು, ಎಲ್ಲ ಜಾತಿ, ವರ್ಗದ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ. ಪ್ರತಿಯೊಬ್ಬರೂ ಇಂದು ಕಾಂಗ್ರೆಸ್ಸಿನಿಂದ ಮಾತ್ರ ಸಾಮರಸ್ಯ ಬಾಳು ಕಲ್ಪಿಸಲು ಸಾಧ್ಯವೆಂಬುದನ್ನು ಅರಿತಿದ್ದಾರೆ. ಜನ ನನ್ನನ್ನು ಕೈ ಹಿಡಿಯುವ ವಿಶ್ವಾಸವಿದೆ.
- ಎಸ್. ಎಸ್. ಮಲ್ಲಿಕಾರ್ಜುನ
- ನಾಗರಾಜ್ ಬಡದಾಳ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


