ತುಮಕೂರು ತುತ್ತು ಯಾರಿಗೆ?
ಚುನಾವಣೆ ಬಳಿಕ ತುಮಕೂರು ಲೋಕಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ.
-ಉಗಮ ಶ್ರೀನಿವಾಸ್
ಕ.ಪ್ರ.ವಾರ್ತೆ ತುಮಕೂರು ಏ.19
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಚುನಾವಣೆ ಮೇಲಾಟಕ್ಕೆ ಕೊನೆ ಬಿದ್ದಿದ್ದು ಚುನಾವಣೆ ಬಳಿಕ ತುಮಕೂರು ಲೋಕಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ.
ಈ ಬಾರಿ ಕ್ಷೇತ್ರದಲ್ಲಿ ಶೇ.72.50 ರಷ್ಟು ಮತದಾನವಾಗಿದ್ದು ಬಿಜೆಪಿಗೆ ಒಂದು ರೀತಿಯ ಲಾಭವಾದಂತಿದೆ. ಆದರೆ ಇಷ್ಟಕ್ಕೆ ಬಿಜೆಪಿ ತೃಪ್ತಿಪಟ್ಟುಕೊಳ್ಳುವಂತಿಲ್ಲ.
ತುಮಕೂರು ನಗರ ಹಾಗೂ ತಿಪಟೂರಿನಲ್ಲಿ ಬಿಜೆಪಿ ತುಸು ಮುಂದಿದೆ. ಹಾಗೆಯೇ ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿಯಲ್ಲೂ ಗಣನೀಯ ಮಟ್ಟದಲ್ಲಿ ಬಿಜೆಪಿ ಮತ ಕಿತ್ತಿದೆ. ಆದರೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆಯಲ್ಲಿ ಜೆಡಿಎಸ್ ಹೆಚ್ಚಿನ ಮತ ಪಡೆದಿದೆ. ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಸಮಬಲ ಪ್ರದರ್ಶನ ನೀಡಿವೆ.
ಉಳಿದಂತೆ ಮಧುಗಿರಿಯಲ್ಲಿ ಕಾಂಗ್ರೆಸ್ ಮುಂದಿದೆ. ಕೊರಟಗೆರೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಮವಾಗಿ ಮೊದಲೆರೆಡು ಸ್ಥಾನದಲ್ಲಿದ್ದರೆ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕು. ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಹೆಚ್ಚಿನ ಮತ ಪಡೆಯಲಿದೆ.
ತುಮಕೂರು ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚು ಇರುವ ಕಡೆ ಹೆಚ್ಚಿನ ಮತದಾನ ಆಗಿಲ್ಲ. ಇದು ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನೆಡೆಯಾಗಿದೆ. ಹಾಗೆಯೇ ಬಿಜೆಪಿ ವೋಟ್ ಬ್ಯಾಂಕ್ ಎಂದೇ ಬಿಂಬಿತವಾಗಿರುವ ವೀರಶೈವ ಮತಗಳು ಹೆಚ್ಚಿರುವ ಕಡೆ ಕೂಡ ಸಾಧಾರಣ ಮತದಾನವಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮಬಲದ ಹಿನ್ನೆಡೆಯಾಗಿದೆ.
ಸಾರಾಸಗಟು ಬಿದ್ದಿಲ್ಲ: ಇನ್ನು ಜೆಡಿಎಸ್‌ಗೆ ಒಕ್ಕಲಿಗ ಮತಗಳು ಸಾರಸಗಟಾಗಿ ಬಿದ್ದಿಲ್ಲ. ಜೆಡಿಎಸ್ ಹೆಚ್ಚು ನಂಬಿದ್ದು ಒಕ್ಕಲಿಗರ ಮತವನ್ನೇ. ಆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮುದ್ದಹನುಮೇಗೌಡರು ಒಕ್ಕಲಿಗ ಸಮುದಾಯದವರಾಗಿರುವುದರಿಂದ ಶೇ.50 ಕ್ಕೂ ಹೆಚ್ಚು ಒಕ್ಕಲಿಗ ಮತದಾರರು ಈ ಬಾರಿ ಕಾಂಗ್ರೆಸ್ ಕಡೆ ವಾಲಿದ್ದಾರೆ.
ಹೀಗಾಗಿ ಜೆಡಿಎಸ್‌ಗೆ ಇದು ಹಿನ್ನೆಡೆ. ಆದರೆ, ಕೃಷ್ಣಪ್ಪ ಹಿಂದುಳಿದ ವರ್ಗದವರಾಗಿರುವುದರಿಂದ ಹಿಂದುಳಿದ ವರ್ಗದ ಮತಗಳನ್ನು ಹೆಚ್ಚಾಗಿ ಪಡೆಯಲಿದ್ದಾರೆ. ತುಮಕೂರು ಮತ್ತು ತಿಪಟೂರಿನಲ್ಲಿ ಅವರಿಗೆ ಹೆಚ್ಚಿಗೆ ಮತ ಬಿದ್ದಿಲ್ಲ. ತುಮಕೂರು ಲೋಕಸಭೆ ವ್ಯಾಪ್ತಿಯಲ್ಲಿ ಈ ಎರಡು ವಿಧಾನಸಭೆ ಕ್ಷೇತ್ರಗಳು ಪ್ರಮುಖವಾದುದು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜು ಅವರಿಗೆ 20 ಸಾವಿರಕ್ಕೂ ಹೆಚ್ಚು ಲೀಡ್ ಸಿಕ್ಕಿದ್ದು ತಿಪಟೂರಿನಲ್ಲಿ. ಹೀಗಾಗಿ ಇದು ಬಿಜೆಪಿಗೆ ವರದಾನವಾಗಲಿದೆ.
ಇನ್ನು 8 ವಿಧಾನಸಭೆ ಕ್ಷೇತ್ರಗಳಲ್ಲಿ 4 ಕಡೆ ಜೆಡಿಎಸ್, 3 ಕಡೆ ಕಾಂಗ್ರೆಸ್ ಹಾಗೂ 1 ಕಡೆ ಬಿಜೆಪಿ ಇದ್ದರೂ ಕೂಡ ಜೆಡಿಎಸ್‌ಗೆ ನಿರೀಕ್ಷಿತ ಮಟ್ಟದಲ್ಲಿ ಮತ ಬಿದ್ದಿಲ್ಲ ಎನ್ನಲಾಗಿದೆ. ಇಷ್ಟಾದರೂ ಜೆಡಿಎಸ್ ಅನ್ನು ನಿರ್ಲಕ್ಷಿಸಿಲ್ಲ. ಬಿಜೆಪಿ ಕಾಂಗ್ರೆಸ್‌ನಷ್ಟು ಅಬ್ಬರ ಇಲ್ಲದಿದ್ದರೂ ಜೆಡಿಎಸ್‌ಗೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮತಗಳು ಬಿದ್ದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

