ಮೈಸೂರು 'ಸಿಂಹ'
'ಮಾನ್ಯ ಮತದಾರ ಬಂಧುಗಳೇ.. ತಮ್ಮ ಚಿನ್ನದಂತ, ಮುತ್ತಿನಂತ, ರತ್ನಖಚಿತ ಮತವನ್ನು ಬಿಜೆಪಿಗೆ ಮೀಸಲಿಡಿ' ಎಂಬ ವಿನಮ್ರ ಮನವಿ.

-ಡಿ.ಎನ್. ಮಹೇಂದ್ರ
ಮೈಸೂರು: ಬಿಸಿಲಿನ ತಾಪದ ನಡುವೆಯೂ ಪಾದಯಾತ್ರೆ, ಬಿಜೆಪಿ ಹಾಗೂ ಮೋದಿ ಪರ ಜಯಘೋಷ, ರಸ್ತೆ ಉದ್ದಕ್ಕೂ ಹಾರ, ತುರಾಯಿಗಳ ಸ್ವೀಕಾರ, ದೇವಸ್ಥಾನಗಳಿಗೆ ಪೂಜೆ ಸಲ್ಲಿಕೆ, ಹಿಮ್ಮೇಳದಲ್ಲಿ ವಿವಿಧ ಚಲನಚಿತ್ರ ಗೀತೆಗಳಿಗೆ ಡಬ್ ಮಾಡಲಾದ ಹಾಡುಗಳ ಮೊರೆತ, ಆಗಾಗೆ ಧ್ವನಿವರ್ಧಕದಿಂದ, 'ಮಾನ್ಯ ಮತದಾರ ಬಂಧುಗಳೇ.. ತಮ್ಮ ಚಿನ್ನದಂತ, ಮುತ್ತಿನಂತ, ರತ್ನಖಚಿತ ಮತವನ್ನು ಬಿಜೆಪಿಗೆ ಮೀಸಲಿಡಿ' ಎಂಬ ವಿನಮ್ರ ಮನವಿ.
- ಇದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರೊಂದಿಗೆ ಹೆಜ್ಜೆ ಹಾಕಿದ 'ಕನ್ನಡಪ್ರಭ'ಕ್ಕೆ ಕಂಡುಬಂದ ದೃಶ್ಯಗಳು.
ಬೆಳಗ್ಗೆ 7.30ಕ್ಕೆ ಎನ್.ಆರ್. ಮೊಹಲ್ಲಾದ ಮಾರುತಿ ದೇವಸ್ಥಾನದ ಬಳಿಯಿಂದ ಆರಂಭಗೊಳ್ಳಬೇಕಿದ್ದ ಚುನಾವಣಾ ಪ್ರಚಾರ ಬೆಳಗ್ಗೆ 8.40ಕ್ಕೆ ಗಾಯತ್ರಿಪುರಂ ಚಾಮುಂಡೇಶ್ವರಿ ದೇವಸ್ಥಾನದ ಬಳಿಯಿಂದ ಆರಂಭವಾಯಿತು. ಅಲ್ಲಿನ ಮುನೇಶ್ವರ ಸ್ವಾಮಿ, ಚಾಮುಂಡೇಶ್ವರಿ ಮತ್ತು ಸಾಯಿಬಾಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಪ್ರಚಾರ ಆರಂಭಿಸಿದರು. ಈ ವೇಳೆ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪ್ರತಾಪ್ ಸಿಂಹ ಅವರಿಗೆ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು. ಬಿಜೆಪಿಗೆ ನರೇಂದ್ರ ಮೋದಿ ಮತ್ತು ಪ್ರತಾಪ್ ಸಿಂಹ ಪರ ಜಯಘೋಷ ಮೊಳಗಿಸಿದರು.
ಬೆಳಗ್ಗೆ 9.45ರ ಸುಮಾರಿಗೆ ರಾಘವೇಂದ್ರ ನಗರಕ್ಕೆ ತೆರಳಿದ ಅವರನ್ನು ಸ್ವಾಗತಿಸಲು ಸ್ಥಳೀಯ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಕಾತರದಿಂದ ಕಾದಿದ್ದರು. ಅಲ್ಲಿನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತಯಾಚನೆ ಆರಂಭಿಸಿದರು.
10.30ಕ್ಕೆ ಗಿರಿಯಾಬೋವಿ ಪಾಳ್ಯದ ಮನೆ ಮನೆಗೆ ತೆರಳಿ ಮತಯಾಚಿಸಿದರು. ಎಷ್ಟೋ ಮನೆಗಳಿಗೆ ಹೋಗಲಾಗದಿದ್ದಾಗ ದೂರದಲ್ಲಿಯೇ ನಿಂತು ಎರಡೂ ಕೈ ಎತ್ತಿ ಮತ ನೀಡುವಂತೆ ಕೋರಿದರು. ಗಿರಿಯಾಬೋವಿ ಪಾಳ್ಯದಿಂದ ಯರಗನಹಳ್ಳಿ ಆಲದಮರ ಬಳಿಗೆ ತೆರಳಿ ರಸ್ತೆ ಉದ್ದಕ್ಕೂ ಸಿಕ್ಕ ಸಾರ್ವಜನಿಕರಲ್ಲಿ ಮತ ನೀಡುವಂತೆ ಮನವಿ ಮಾಡಿದರು.
ಕುಂಕುಮದ ತಿಲಕವಿಟ್ಟು, ಬಿಳಿ ಉಡುಪಿನೊಂದಿಗೆ ಕಂಗೊಳಿಸುತ್ತಿದ್ದ ಪ್ರತಾಪ್ ದೇವಸ್ಥಾನ ಸಮೀಪದ ಅಂಗಡಿಗಳು, ಮನೆ ಮನೆಗೆ ತೆರಳಿ ಮತಯಾಚಿಸಿದರು.
ಅಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕೊಳ್ಳುತ್ತಿದ್ದ ಸಾರ್ವಜನಿಕರಿಗೆ ಕರಪತ್ರ ಹಂಚಿ, ಮೋದಿಯನ್ನು ಪ್ರಧಾನಿ ಆಗಿ ಮಾಡದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ.
ಆದ್ದರಿಂದ ಈ ಬಾರಿ ಮೋದಿಯನ್ನು ಅಧಿಕಾರಕ್ಕೆ ತರಲು ತಾವೆಲ್ಲರೂ ಕಟಿಬದ್ಧರಾಗುವಂತೆ ಮನವಿ ಮಾಡಿದರು.
ಬಳಿಕ 11.30ಕ್ಕೆ ರೇಲ್ವೆ ನಿಲ್ದಾಣ ಬಳಿಯ ಬಾಬು ಜಗಜೀವನ್ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ರಾಜೇಂದ್ರನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಮಧ್ಯಾಹ್ನ 12.20ಕ್ಕೆ ನಡೆದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಸಭೆ, ಬಳಿಕ ರಾಮಾನುಜರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ನಡೆದ ಕೃಷ್ಣರಾಜ ಕ್ಷೇತ್ರದ ಮಹಿಳಾ ಮೋರ್ಚಾ ಸಭೆಯಲ್ಲಿ ಭಾಗವಹಿಸಿದರು.
ಸಂಜೆ 4ಕ್ಕೆ ಸುದ್ದಿವಾಹಿನಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ 6.15ರ ಗಂಟೆ ಸುಮಾರಿಗೆ ಗಾಂಧಿನಗರ, ಸತ್ಯನಗರದಲ್ಲಿ ಪ್ರಚಾರ ನಡೆಸಿದರು. ಸಂಜೆ 7.50ಕ್ಕೆ ಸರಿಯಾಗಿ ಶನೇಶ್ವರಸ್ವಾಮಿ ದೇವಸ್ಥಾನದ ಕಮಾನು ದ್ವಾರಕ್ಕೆ ಆಗಮಿಸುತ್ತಲೇ ಕಾರ್ಯಕರ್ತರು ಜಯಘೋಷದ ಜತೆಗೆ ಪಟಾಕಿ ಸಿಡಿಸಿ ಸ್ವಾಗತಿಸಿದರು. ಬಳಿಕ ಸರಸ್ವತಿಪುರಂನಲ್ಲಿ ಎಂಎಲ್ಸಿ ಸಿದ್ದರಾಜು ಜತೆ ನಾಯಕ ಜನಾಂಗದ ಮುಖಂಡರ ಸಭೆಯಲ್ಲಿ ಭಾಗವಹಿಸಿ, ರಾತ್ರಿ 9ರ ಸುಮಾರಿಗೆ ಮನೆ ತಲುಪಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


