ಗರಂಗೆ ಬೆದರದ ಧರಂ
ನಾವು- ಖರ್ಗೆ ಕೂಡಿಕೊಂಡು ಏನೆಲ್ಲಾ ಮಾಡೀವಲ್ರಿ, ಜನ ನಮಗೇ ಗೆಲ್ಲಿಸ್ತಾರೆ ಬಿಡ್ರಿ, ಹವಾ... ಆಟ ಇಲ್ಲಿ ನಡೆಯೋಲ್ಲ

ಮೋದಿ ಅಲೆ ಅಂತಾರ್ರಿ, ನಮ್ಮ ಕಡಿಗೆ ಅದೇನೂ ಇಲ್ಲ, ಇಲ್ಲೇನಿದ್ರೂ ಅಭಿವೃದ್ಧಿ ಹವಾ... ನಾವು- ಖರ್ಗೆ ಕೂಡಿಕೊಂಡು ಏನೆಲ್ಲಾ ಮಾಡೀವಲ್ರಿ, ಜನ ನಮಗೇ ಗೆಲ್ಲಿಸ್ತಾರೆ ಬಿಡ್ರಿ, ಹವಾ... ಆಟ ಇಲ್ಲಿ ನಡೆಯೋಲ್ಲ
-ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುನರಾಯ್ಕೆ ಬಯಸಿ ಅಖಾಡದಲ್ಲಿರುವುದರಿಂದ ಬೀದರ್ ಲೋಕಸಭೆ ರಾಜಕೀಯ ರಂಗೇರಿದೆ. ಉರಿ ಬಿಸಿಲು, ಝಳ ಲೆಕ್ಕಿಸದೆ ಧರಂಸಿಂಗ್ ಅಖಾಡದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಮತದಾನಕ್ಕೆ ಇನ್ನೇನು 2 ದಿನ ಬಾಕಿ ಎನ್ನುವಾಗ ಧರಂಸಿಂಗ್ ಬೀದರ್ ಕ್ಷೇತ್ರದಡಿ ಬರುವ ಆಳಂದ ತಾಲೂಕಿನ ಖಜೂರಿ, ಆಳಂದ, ಮಾದನಹಿಪ್ಪರ್ಗಾ, ನಿಂಬರ್ಗಾಗಳಲ್ಲಿ ರೋಡ್ ಷೋ, ಬಹಿರಂಗ ಸಭೆ ನಡೆಸಿ ಜನಮನ ಸೆಳೆದರು. ಉರಿ ಬಿಸಿಲು, ಗರಂ ಹವಾ. ಆಳಂದದ ತಹಶೀಲ್ದಾರ್ ಕಚೇರಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲೆ ಹಾಕಿ ತೆರೆದ ಜೀಪು ಹತ್ತಿದ ಧರಂಸಿಂಗ್ 1 ಗಂಟೆ ಉರಿ ಬಿಸಿಲನ್ನೂ ಲೆಕ್ಕಿಸದೆ ರೋಡ್ ಶೋ ನಡೆಸಿದರು, ತಹಶೀಲ್ ಕಚೇರಿಯಿಂದ ಶ್ರೀರಾಮ ಮಾರುಕಟ್ಟೆ ಮಾರ್ಗವಾಗಿ ಬಸ್ ನಿಲ್ದಾಣ, ಆಳಂದ ಮುಖ್ಯರಸ್ತೆ ಹೀಗೆ ಸಾಗಿದ ಧರಂ ರೋಡ್ ಷೋ ವಿಠ್ಠಲರಾವ್ ಪಾಟೀಲ್ ಮನೆಯಲ್ಲಿ ಕೊನೆಗೊಂಡಿತು.
ಮಾರ್ಗಮಧ್ಯದಲ್ಲಿರುವ ಮಾರುತಿ ದೇವರಿಗೆ ನಮಸ್ಕರಿಸಿ ಪ್ರಾರ್ಥಿಸಿದ ಧರಂಸಿಂಗ್ ದಾರಿಯುದ್ದಕ್ಕೂ ಜನರತ್ತ ಕೈ ಬೀಸಿ ಗಮನ ಸೆಳೆದರು. 'ಯಾನ್ ಹೊಂಟದರಿ ಯಪ್ಪಾ...' ಎಂದು ಶ್ರೀರಾಮ ಮಾರುಕಟ್ಟೆಯ ಮೂಲೆಯೊಂದರಲ್ಲಿ ಚಪ್ಪಲಿ ಹೊಲಿಯುತ್ತಿದ್ದ ಕುಶಲಕರ್ಮಿಗಳನ್ನು ಪ್ರಶ್ನಿಸಿದರು.
ಮಿತ ಆಹಾರ- ತುಸು ವಿರಾಮ: ವಯೋಸಹಜ ತೊಂದರೆಗಳಿದ್ದರೂ ಧರಂಸಿಂಗ್ ಪ್ರಚಾರದಲ್ಲಿ ಅವುಗಳನ್ನೆಲ್ಲ ಮೆಟ್ಟಿ ನಿಂತಿದ್ದಾರೆ ಎಂದೇ ಹೇಳಬೇಕು. ನಡೆಯಲು ಅಷ್ಟಾಗಿ ಆಗದೆ ಹೋದರೂ ಪಾದಯಾತ್ರೆ, ತೆರೆದ ಜೀಪಿನ ಮೆರವಣಿಗೆ ಎಂದರೆ ಒಲ್ಲೆ ಅಂದದ್ದಿಲ್ಲ.
ಧರಂ ನೆನಪಿನ ಶಕ್ತಿ ಬಲು ಅದ್ಭುತ. ತಾವು ಬಹುಕಾಲದ ಹಿಂದೆ ನೋಡಿದವರನ್ನೂ ಹೆಸರು ಹಿಡಿದು ಮಾತನಾಡಿಸುವ ಅವರ ಶೈಲಿಗೇ ಜನ ಮನಸೋಲುತ್ತಾರೆ. ಆಳಂದದಲ್ಲಿ ಹೀಗೆ ಆಯ್ತು. ವಿಠ್ಠಲರಾವ ಪಾಟೀಲರ ಮನೆಯಲ್ಲಿ ಧರಂಸಿಂಗ್ ನಾಲ್ಕಾರು ಜನರನ್ನು ಹೆಸರು ಹಿಡಿದು ಕರೆದು ಮಾತನಾಡಿಸಿದಾಗ ಎಲ್ಲರಿಗೂ ಅಚ್ಚರಿ.
ಪಾಟೀಲರಂತೂ ತಮ್ಮ ಮನೆ ದೇವರಿಗೆ ಧರಂಸಿಂಗ್ ಅವರಿಂದ ಪೂಜೆ ಮಾಡಿಸಿದರು. 'ಈ ಮನೆ ದೇವರಿಗೆ ಪೂಜಿಸಿದವರಿಗೆ ಗೆಲವು ಕಟ್ಟಿಟ್ಟಬುತ್ತಿ' ಎಂದಾಗ ಬಿಸಿಲಿನ ಆಯಾಸದಲ್ಲಿಯೂ ಧರಂ ಮೊಗದಲ್ಲಿ ನಸುನಗೆ.
ವಿಠ್ಠಲರಾವ ಮನೆಯಲ್ಲೇ ವಿರಮಿಸಿದರಲ್ಲದೆ ಊಟ ಸೇವಿಸಿ ಮತ್ತೆ ಲವಲವಿಕೆಯಿಂದ ಪ್ರಚಾರಕ್ಕೆ ಸಿದ್ಧರಾದರು.
ಬಿರುಸಿನ ಪ್ರಚಾರದಲ್ಲೂ ಲೋಕಾಭಿರಾಮ ಹರಟೆಗೆ ಧರಂ ಆಸಕ್ತಿ. ಅದಕ್ಕೇ ಎಡೆಬಿಡದ ಪ್ರಚಾರದಲ್ಲಿಯೂ ಆಳಂದದಲ್ಲಿ ಶಾಸಕ ಬಿ.ಆರ್. ಪಾಟೀಲ್, ಅಲ್ಲಂ ಪ್ರಭು ಪಾಟೀಲರೊಂದಿಗೆ ರಾಜಕೀಯ ಏರಿಳಿತಗಳ ಕುರಿತು ಹರಟಿದರು.
ಬೆಳಗ್ಗೆ 6ಕ್ಕೆ ಏಳುವ ಧರಂ, ಯೋಗ- ಪ್ರಾಣಾಯಾಮ, ದಿನಪತ್ರಿಕೆಗಳ ಓದು, ನಿತ್ಯ ಕರ್ಮ ಮುಗಿಸುತ್ತಾರೆ. ಬೆಳಗಿನ ಉಪಹಾರ ಎಂದರೆ 2 ಜೋಳದ ರೊಟ್ಟಿ, ಹಸಿರು ತರಕಾರಿ, ಪಚ್ಚಡಿ. ಹಿಂಡಿ ಹಾಗೂ ಮೊಸರು. ಜೊತೆಗೇ ಲೋಟ ಮಜ್ಜಿಗೆ ಸೇವನೆ. ಈಗ ಪ್ರಚಾರದಲ್ಲಿರುವುದರಿಂದ ಮಧ್ಯಾಹ್ನ ಮಿತ ಆಹಾರ, ರಾತ್ರಿಯೂ ಮಿತಾಹಾರಿ.
ಧರಂ ನೆನಪಿನ ಶಕ್ತಿ ಬಲು ಅದ್ಭುತ. ತಾವು ಬಹುಕಾಲದ ಹಿಂದೆ ನೋಡಿದವರನ್ನೂ ಹೆಸರು ಹಿಡಿದು ಮಾತನಾಡಿಸುವ ಅವರ ಶೈಲಿಗೇ ಜನ ಮನಸೋಲುತ್ತಾರೆ. ಆಳಂದದಲ್ಲಿ ಹೀಗೆ ಆಯ್ತು. ವಿಠ್ಠಲರಾವ ಪಾಟೀಲರ ಮನೆಯಲ್ಲಿ ಧರಂಸಿಂಗ್ ನಾಲ್ಕಾರು ಜನರನ್ನು ಹೆಸರು ಹಿಡಿದು ಕರೆದು ಮಾತನಾಡಿಸಿದಾಗ ಎಲ್ಲರಿಗೂ ಅಚ್ಚರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


