ಸೇವಾ ಮನೋಭಾವ ಆರೆಸ್ಸೆಸ್ ಧ್ಯೇಯ
ನಿಸ್ವಾರ್ಥ ಸೇವೆ ಮಾಡುವ ಮನೋಭಾವವನ್ನು ಎಲ್ಲರ ಮನಸ್ಸಿನಲ್ಲಿ ಬಿತ್ತುವುದೇ ಆರ್‍ಎಸ್‍ಎಸ್‍ನ ಮುಖ್ಯ ಧ್ಯೇಯ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರಸಂಘಚಾಲಕ ಮೋಹನ್ ಭಾಗವತ ಹೇಳಿದರು...

ಬೆಂಗಳೂರು: ನಿಸ್ವಾರ್ಥ ಸೇವೆ ಮಾಡುವ ಮನೋಭಾವವನ್ನು ಎಲ್ಲರ ಮನಸ್ಸಿನಲ್ಲಿ ಬಿತ್ತುವುದೇ ಆರ್‍ಎಸ್‍ಎಸ್‍ನ ಮುಖ್ಯ ಧ್ಯೇಯ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರಸಂಘಚಾಲಕ ಮೋಹನ್ ಭಾಗವತ ಹೇಳಿದರು.
ರೇವಾ ವಿಶ್ವ ವಿದ್ಯಾನಿಲಯದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತೀಯ ಶೃಂಗ ವಾದ್ಯ ಶಿಬಿರ (ಸ್ವರಾಂಜಲಿ) ಸಮಾರೋಪದಲ್ಲಿ ಮಾತನಾಡಿದ ಅವರು,
ಭಾರತವು ಯುವ ಸಮುದಾಯದ ದೇಶ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಯುವ ಶಕ್ತಿಯನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ
ಚಿಂತಿಸಬೇಕಿದೆ ಎಂದರು.
ಆರ್‍ಎಸ್‍ಎಸ್ ಯಾರ ಹೊಗಳಿಕೆಯನ್ನೂ ಬಯಸುವುದಿಲ್ಲ. ನಿಸ್ವಾರ್ಥವಾಗಿ ರಾಷ್ಟ್ರಕ್ಕೆ ಹೇಗೆ ಸೇವೆ ಸಲ್ಲಿಸಬೇಕು ಎಂಬುದನ್ನು ತಿಳಿಸುವುದೇ ಸಂಘದ ಪ್ರಮುಖ ಧ್ಯೇಯ. ಇದಕ್ಕೆ ಸರ್ವರೂ
ಕೈಜೋಡಿಸಬೇಕು. ಆರ್‍ಎಸ್‍ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘದ ಕಾರ್ಯಕ್ರಮಗಳಿಗೆ ಒಗ್ಗೂಡಬೇಕು. ಆಗ ರಾಷ್ಟ್ರದಲ್ಲಿ ಪರಿವರ್ತನೆ ಕಾಣಲು ಸಾಧ್ಯ ಎಂದು ಹೇಳಿದರು.
ಪ್ರಕೃತಿ ಸಂಪತ್ತನ್ನು ಸರಿಯಾಗಿ ಬಳಸುತ್ತಿಲ್ಲ. ಇದರಿಂದ ಅಮೂಲ್ಯ ಸಂಪತ್ತು ಮುಂದಿನ ಪೀಳಿಗೆಗೆ ಇಲ್ಲವಾಗುವ ಭೀತಿ ಎದುರಾಗಿದೆ. ಯಾವಾಗ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸುವುದಿಲ್ಲವೋ ಆಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಇಡೀ ಜಗತ್ತೇ ಭಾರತವನ್ನು ನೋಡುತ್ತಿರುವ ಕಾಲಘಟ್ಟದಲ್ಲಿ ಪ್ರಕೃತಿಗೆ ದ್ರೋಹ
ಬಗೆಯಬಾರದು. ನೆಲ-ಜಲ ಸಂಪತ್ತನ್ನು ವಿವೇಕದಿಂದ ಬಳಸಬೇಕೆಂಬುದನ್ನು ನಮ್ಮ ಸಂಸ್ಕೃತಿಯೇ ಹೇಳುತ್ತದೆ.
ಮುಖ್ಯವಾಗಿ ನಮ್ಮ ದೇಶದ ವೈಭವದ ಜೊತೆಗೆ, ವಿಶ್ವಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಇದು ಭಾರತೀಯರ ಹೃದಯ ವೈಶಾಲ್ಯತೆ ಎಂದರು. ಸಂಗೀತ ಕೂಡ ನಮ್ಮ ಅವಿಭಾಜ್ಯ ಅಂಗವಾಗಿದೆ. ಸಂಗೀತ ಉಪಕರಣಗಳು ಕೇವಲ ಮನರಂಜನೆ ನೀಡುವ ಸಾಧನಗಳಲ್ಲ.
ಸಂಗೀತವೆಂಬುದು ನಾದಬ್ರಹ್ಮನ ಪೂಜೆ ಹಾಗೂ ಪವಿತ್ರ ಕಲೆಯಾಗಿದೆ. ಈ ಹಿಂದೆ ಆರ್‍ಎಸ್‍ಎಸ್‍ನಲ್ಲಿ ಸಂಗೀತ ಉಪಕರಣಗಳು ಇರಲಿಲ್ಲ. ಆದರೆ, ಇತ್ತೀಚೆಗಷ್ಟೆ ಅಳವಡಿಸಿಕೊಳ್ಳಲಾಗಿದ್ದು, ನಮ್ಮದೇ ಸ್ವರಗಳಿವೆ. ಈ ಸ್ವರಗಳು ಆಕರ್ಷಕವಾಗಿರುವುದರಿಂದ ಕೆಲವನ್ನು ಭಾರತೀಯ ಸೇನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.
ವಿವಿಧ ಸಂಸ್ಕೃತಿಯನ್ನು ಒಟ್ಟಾಗಿ ಕೂಡಿಸುವುದು ಸನಾತನ ಧರ್ಮ. ಹಾಗಾಗಿ ವೈವಿಧ್ಯತೆಯಿಂದ ಕೂಡಿರುವ ಭಾರತದಲ್ಲಿ ಸನಾತನ ಧರ್ಮದಿಂದಾಗಿ ಒಟ್ಟಿಗೆ ಬದುಕುತ್ತಿದ್ದೇವೆ. ಇದೇ ರೀತಿ ಪ್ರಾಂತ್ಯ ಹಾಗೂ ಸಂಕೀರ್ಣತೆಯನ್ನು ದಾಟಿ, ಒಟ್ಟಾಗಿ ಜೀವಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು. ಇಸ್ರೋ ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾರತದಿಂದ ವಸ್ತುಗಳನ್ನು ರಫ್ತು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.
ಇದರಿಂದ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ. ಅದೇ ರೀತಿ ರಕ್ಷಣಾ ಸಾಮಾಗ್ರಿಗಳನ್ನು ಹೆಚ್ಚು ರಫ್ತು ಮಾಡುವ ಹಂತಕ್ಕೆ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ಭಾರತವು ರಕ್ಷಣಾ ಸಾಮಾಗ್ರಿಗಳನ್ನು ಬಹುತೇಕ ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಹಾಗಾಗಿ ನಮ್ಮಲ್ಲೇ ಉತ್ಪಾದಿಸಿದರೆ ಉತ್ತಮ. ಇದರ ಜೊತೆಗೆ, ಬಯೋ ಮೆಡಿಸಿನ್ ರಫ್ತು ಮಾಡಲು ತಂತ್ರಜ್ಞಾನ ಅಭಿವೃದ್ಧಿಸಬೇಕು. ಇದರಿಂದ ವಿಶ್ವದಲ್ಲೇ ಭಾರತವು ಮುಂಚೂಣಿಯಲ್ಲಿ ನಿಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆರ್‍ಎಸ್‍ಎಸ್ ಆಯೋಜಿಸಿರುವ ವಾದ್ಯ ಶಿಬಿರದಲ್ಲಿ ಮಣಿಪುರ್, ನೇಪಾಳ ಸೇರಿದಂತೆ ದೇಶದ ವಿವಿಧೆಡೆಯಿಂದ 2 ಸಾವಿರಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಗಮಿಸಿದ್ದಾರೆ. ಈ ಮೂಲಕ ಸಂಘವು ಸಂಗೀತವನ್ನು ಎಲ್ಲರಿಗೂ ಉಣಬಡಿಸುತ್ತಿದೆ. ಸಂಗೀತ ಕೇಳುವುದರಿಂದ ಮತ್ತು ಕಲಿಯುವುದರಿಂದ ಹಲವು ಉಪಯೋಗಗಳಿವೆ. ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಲು, ಮನಸ್ಸುಗಳನ್ನು ಒಂದಾಗಿಸಲು, ದುಃಖವನ್ನು ಮರೆಸಲು, ಸಂತೋಷ ನೀಡಲು ಹಾಗೂ ಒತ್ತಡ ಕಡಿಮೆ ಮಾಡಲು ಸಂಗೀತ ಸಹಕಾರಿ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


