ಜಿಲ್ಲಾ ಸುದ್ದಿ

ನಾನಾ ಕಡೆ ಅಪಘಾತ ಮಗು ಸೇರಿ ಮೂವರ ಸಾವು

ಕಹಿ ಘಟನೆಗಳ ಮರೆತು ಸಿಹಿ ಘಟನೆಗಳ ಮೆಲುಕು ಹಾಕಬೇಕಿದ್ದ ಗುರುವಾರ(ಡಿ.31) ನಡೆದ ಪ್ರತ್ಯೇಕ ರಸ್ತೆ...

ನಾನಾ ಕಡೆ ಅಪಘಾತ ಮಗು ಸೇರಿ ಮೂವರ ಸಾವು
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕಹಿ ಘಟನೆಗಳ ಮರೆತು ಸಿಹಿ ಘಟನೆಗಳ ಮೆಲುಕು ಹಾಕಬೇಕಿದ್ದ ಗುರುವಾರ(ಡಿ.31) ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. 
ಕಾರು ಡಿಕ್ಕಿಯಾಗಿ ಎಂಜಿನಿಯರ್ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾರುತಿ ನಗರದ ನಿವಾಸಿ ಅರುಣ್‍ಕುಮಾರ್(21) ಮೃತಪಟ್ಟವರು. ನಗರದ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಇವರು, ರಾತ್ರಿ 11.30ರ ಸುಮಾರಿಗೆ ಮಾರುತಿ ನಗರದ ಗಂಗೋತ್ರಿ ವೃತ್ತದಲ್ಲಿ ರಸ್ತೆ ದಾಟುತ್ತಿದ್ದರು. 
ಈ ವೇಳೆ ಚಾಲಕನೊಬ್ಬ ಕಾರನ್ನು ಹಿಂದಕ್ಕೆ ತೆಗೆಯುವಾಗ ಕಾರಿನ ಹಿಂಬದಿ ಅರುಣ್‍ಕುಮಾರ್‍ಗೆ ಡಿಕ್ಕಿಯಾಗಿದ್ದರಿಂದ ಅವರು ತೀವ್ರವಾಗಿ ಗಾಯ ಗೊಂಡಿದ್ದರು. ರಕ್ತ ಮಡುವಿನಲ್ಲಿ ಬಿದ್ದಿದ್ದ ಅರುಣ್‍ನನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಸಂಚಾರ ಠಾಣೆ ಪೊಲೀಸರು, ಕಾರು ಮತ್ತು ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಟಾಟಾ ಏಸ್ ಡಿಕ್ಕಿ ಬೈಕ್ ಸವಾರ ಸಾವು: ಬೈಕ್ ಗೆ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತ ಪಟ್ಟಿರುವ ಘಟನೆ ಗುರುವಾರ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮೇಶ್ವರ ನಗರ ನಿವಾಸಿ ಮಹಮದ್ ಹಸನ್ ಅಲಿ (53) ಮೃತಪಟ್ಟವರು. 
ಉದ್ಯಮಿ ಯಾಗಿರುವ ಇವರು ರಾತ್ರಿ 11ರ ಸುಮಾರಿಗೆ ತಮ್ಮ ಬೈಕ್‍ನಲ್ಲಿ ಡಾ.ಮರಿಗೌಡ ರಸ್ತೆಯ ಅಲ್ ಮಿನ್ ಕಾಲೇಜು ಬಳಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟಾಟಾ ಏಸ್ ಬೈಕ್‍ಗೆ ಡಿಕ್ಕಿ ಹೊಡೆದಿದ್ದರಿಂದ ಅಲಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಕಾರಣನಾದ ಟಾಟಾ ಏಸ್ ಚಾಲಕ ವಾಹನದೊಂದಿಗೆ ಪರಾರಿಯಾಗಿ ದ್ದಾನೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಿಲಿಟರಿ ವಾಹನಕ್ಕೆ ಮಗು ಬಲಿ: ಎ.ನಾರಾ ಯಣಪುರ ಸಮೀಪದ ಗಂಗಮ್ಮ ಟೆಂಪಲ್ ಸ್ಟ್ರೀಟ್‍ನಲ್ಲಿ ಮಿಲಿಟರಿ ವಾಹನ ಹರಿದು ಐದು ವರ್ಷದ ಹೆಣ್ಣು ಮಗುವೊಂದು ಮೃತಪಟ್ಟಿರುವ ಘಟನೆ ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಶೃತಿಕಾ(5) ಮೃತಪಟ್ಟ ಮಗು. ಸಂಜೆ 5ರ ಸುಮಾರಿಗೆ ಗಂಗಮ್ಮನ ಟೆಂಪಲ್ ಸ್ಟ್ರೀಟ್‍ನಲ್ಲಿ ಮಗು ಆಟವಾಡುತ್ತಿತ್ತು. 
ಈ ವೇಳೆ ಮಿಲಿಟರಿ ವಾಹನ ಹಿಂದಕ್ಕೆ ತಿರುಗಿಸುವಾಗ ವಾಹನದ ಚಕ್ರಗಳು ಮಗುವಿನ ಅಂಗಾಂಗಗಳ ಮೇಲೆ ಹರಿದು ಮಗು ಗಂಭೀರವಾಗಿ ಗಾಯಗೊಂಡಿತು ಕೂಡಲೇ ಸ್ಥಳೀಯರು ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ವಾಹನ ಮತ್ತು ಚಾಲಕನ ವಶಕ್ಕೆ ಪಡೆದಿರುವ ಕೆ.ಆರ್.ಪುರಂ ಸಂಚಾರ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.