ಜಿಲ್ಲಾ ಸುದ್ದಿ

ಮಗು ಅಪಹರಿಸಿ, ಠಾಣೆಗೆ ದೂರಲು ತಾನೂ ಹೋದ!

ಹಣಕ್ಕಾಗಿ 6 ವರ್ಷದ ಬಾಲಕನನ್ನು ಅಪಹರಿಸಿದ್ದ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಮೂರು...

ಮಗು ಅಪಹರಿಸಿ, ಠಾಣೆಗೆ ದೂರಲು ತಾನೂ ಹೋದ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಹಣಕ್ಕಾಗಿ 6 ವರ್ಷದ ಬಾಲಕನನ್ನು ಅಪಹರಿಸಿದ್ದ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಮೂರು ಗಂಟೆಗಳಲ್ಲಿ ಅಪಹರಣಕಾರರನ್ನು ಬಂಧಿಸಿ ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿ ಪಾಲಕರ ಮಡಿಲಿಗೆ ಒಪ್ಪಿಸಿದ್ದಾರೆ.

ಕಾಲ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದ ಅಶೋಕ ನಗರ ನಿವಾಸಿ ಗಗನ್ ಹಾಗೂ ಓಕಳಿಪುರ ನಿವಾಸಿ ಕ್ಲಿಂಟೋ ಬಂಧಿತರು. ಖಾಸಗಿ ಕಂಪನಿ ಉದ್ಯೋಗಿ ಆನಂದ್ ಅವರ ಪುತ್ರ ಜಿಷ್ಣು ಎಂಬಾತನೇ ಅಪಹರಣವಾಗಿ ಪಾಲಕರ ಮಡಿಲಿಗೆ ಸುರಕ್ಷಿತವಾಗಿ ಸೇರಿದ್ದಾನೆ.

ಬಂಧಿತ ಗಗನ್ ಹಾಗೂ ಬಾಲಕನ ತಂದೆ ಆನಂದ್ ಸಂಬಂಧಿಗಳು. ಇಬ್ಬರ ನಡುವೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗಗನ್, ಬಾಲಕನ ಅಪಹರಿಸಿ ರು.2 ಲಕ್ಷ ಒತ್ತೆ ಹಣಕ್ಕೆ ಬೇಡಿಕೆ ಇಡುವ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಾಲಕ ಜಿಷ್ಣು ಬುಧವಾರ ಸಂಜೆ ಶಾಲೆ ಮುಗಿಸಿಕೊಂಡು ಬಂದು ಮನೆ ಮುಂದೆ ಆಟವಾಡುತ್ತಿದ್ದ.

ಈ ವೇಳೆ ಆರೋಪಿಗಳು ಜಿಷ್ಣು ಬಳಿ ಬಂದು ಚಾಕೋಲೇಟ್ ಕೊಡಿಸುತ್ತೇನೆ ಎಂದು ಅಪಹರಿಸಿಕೊಂಡು ಹೋಗಿದ್ದರು. ಬೈಕ್ ಚಲಾಯಿಸುತ್ತಿದ್ದ ಗಗನ್, ಬಾಲಕ ಹಾಗೂ ಕ್ಲಿಂಟೋನನ್ನು ರೈಲ್ವೆ ನಿಲ್ದಾಣದ ಇಳಿಸಿ ತನ್ನ ಮನೆಗೆ ಹೋಗಿದ್ದ.

ಇತ್ತ ಮನೆ ಬಳಿ ಆಟವಾಡುತ್ತಿದ್ದ ಮಗ ಜಿಷ್ಣು ಕಾಣಿಸದ ಕಾರಣ ಗಾಬರಿಗೊಂಡ ತಂದೆ ಆನಂದ್ ಸುತ್ತಮುತ್ತ ಹುಡುಕಾಡಿದರೂ ಸಿಕ್ಕಿಲ್ಲ. ಬಳಿಕ ಆನಂದಗೆ ನೆರವು ನೀಡಿದಂತೆ ನಟಿಸಿದ ಗಗನ್, ಆನಂದ ಅವರ ಜತೆ ರಾತ್ರಿ 8 ಗಂಟೆಗೆ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ. ಆಗ ಬಾಲಕನ ನಾಪತ್ತೆ ಹಾಗೂ ಅಪಹರಣ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡರು.

ಈ ವೇಳೆ ಆನಂದ ಅವರ ಮಾಹಿತಿ ಮೇರೆಗೆ ಗಗನ್ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದರು. ನಂತರ ಕೂಡಲೇ ಠಾಣೆಯಲ್ಲೇ ಪ್ರತ್ಯೇಕವಾಗಿ ಗಗನ್‍ನನ್ನು ವಿಚಾರಣೆ ನಡೆಸಿದಾಗ ಜಿಷ್ಣುನನ್ನು ಅಪಹರಿಸಿ ಕ್ಲಿಂಟೋ ಜತೆ ರೈಲ್ವೆ ನಿಲ್ದಾಣದ ಬಳಿ ಬಿಟ್ಟು ಬಂದಿದ್ದಾಗಿ ಹೇಳಿದ್ದಾನೆ. ಕೂಡಲೇ ಪೊಲೀಸರ ತಂಡ ಮಫ್ತಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಹುಡುಕಾಡಿದಾಗ ಬಾಲಕ ಹಾಗೂ ಆರೋಪಿ ಕ್ಲಿಂಟೋ ಪ್ಲಾಟ್ ಫಾಮ್ ನಲ್ಲಿ ಕುಳಿತಿದ್ದರು.

ವಿಚಾರಣೆ ವೇಳೆ ವೈಯಕ್ತಿಕ ದ್ವೇಷದಿಂದ ಬಾಲಕನನ್ನು ಅಪಹರಿಸಿದ್ದಾಗಿ ಗಗನ್ ಹೇಳಿಕೆ ನೀಡಿದ್ದಾನೆ. ಹೀಗಾಗಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ರೈಲ್ವೆ ನಿಲ್ದಾಣದಿಂದ ಬೇರೊಂದು ಸ್ಥಳಕ್ಕೆ ಜಿಷ್ಣುನನ್ನು ಕರೆದೊಯ್ದು ಅಲ್ಲಿಂದ ಆನಂದ್‍ಗೆ ಕರೆ ಮಾಡಿ ರು.50 ಸಾವಿರ ಒತ್ತೆ ಹಣಕ್ಕೆ ಬೆದರಿಕೆ ಹಾಕಲು ನಿರ್ಧರಿಸಿದ್ದರು.

 ಆದರೆ, ಯಾವ ಸ್ಥಳಕ್ಕೆ ಕರೆದೊಯ್ಯಬೇಕು ಎಂಬುದನ್ನು ನಿರ್ಧರಿಸಿರಲಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಕ್ಲಿಂಟೋನನ್ನು ಸೇರಿಕೊಳ್ಳಲು ಗಗನ್ ಯೋಜಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.