ಜಿಲ್ಲಾ ಸುದ್ದಿ

ಗೌರಿ-ಗಣೇಶನಿಗೆ ಬೆಲೆಯೇರಿಕೆ ಆರತಿ

ಬುಧವಾರ ನಡೆಯುವ ಗೌರಿ ಹಬ್ಬಕ್ಕೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಜತೆಗೆ ಗುರುವಾರ ಗಣೇಶನ ಹಬ್ಬಕ್ಕೂ ನಗರ ಸಜ್ಜಾಗುತ್ತಿದೆ. ಗೌರಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಜೊತೆಗೆ ಗಣಪತಿ...

ಗೌರಿ-ಗಣೇಶನಿಗೆ ಬೆಲೆಯೇರಿಕೆ ಆರತಿ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಬುಧವಾರ ನಡೆಯುವ ಗೌರಿ ಹಬ್ಬಕ್ಕೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಜತೆಗೆ ಗುರುವಾರ ಗಣೇಶನ ಹಬ್ಬಕ್ಕೂ ನಗರ ಸಜ್ಜಾಗುತ್ತಿದೆ. ಗೌರಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಜೊತೆಗೆ ಗಣಪತಿ ಆಗಮನಕ್ಕೂ ಸಿದ್ಧತೆಗಳು ನಡೆಯುತ್ತಿವೆ. ಎಂದಿನಂತೆ, ಈ ಹಬ್ಬಕ್ಕೂ ಬೆಲೆ ಏರಿಕೆಯದೇ ಸ್ವಾಗತ.

ಗೌರಿ ಹಬ್ಬದಂದು ಸುಮಂಗಲಿಯರು ವಿಶೇಷವಾಗಿ ಹೂವು ಹಾಗೂ ಆಭರಣಗಳಿಂದ ದೇವಿ ಕಲಶವನ್ನು ಅಲಂಕರಿಸಿ ಪೂಜಿಸಲು ಅನೇಕ ಪೂಜಾ ಸಲಕರಣೆಗಳನ್ನು ಕೊಳ್ಳುತ್ತಿದ್ದಾರೆ. ಈ ಸಲ ಮಾರುಕಟ್ಟೆಯಲ್ಲಿ ಗೌರಿ ಮೂರ್ತಿಗಳು ರು.50 ರಿಂದ ರು.500ರವರೆಗೂ ಇವೆ. ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜತೆಗೆ ಕಲಶ, ಗೌರಿ ದಾರ, ಹತ್ತಿ ಎಳೆ, ಬಳೆ, ಜೊತೆ ಬಾಗಿನದ ಮೊರದ ಖರೀದಿ ನಡೆದಿದೆ. ಈ ಬಾರಿ ಹೂವುಹಣ್ಣುಗಳ ಜತೆಗೆ ತರಕಾರಿ ಬೇಳೆಕಾಳುಗಳ ಬೆಲೆಯೂ ಹೆಚ್ಚಾಗಿರುವುದರಿಂದ ಬಡವರು ಹಾಗೂ ಕೆಳಮಧ್ಯಮ ವರ್ಗಕ್ಕೆ ಬೆಲೆ ಏರಿಕೆ ಬಿಸಿ ಮೂಡಿದೆ.

ಈ ಸಲ ಬರ ಪರಿಸ್ಥಿತಿ ಪಕ್ಕಾ ಆಗುತ್ತದೋ ಏನೋ ಎಂಬ ಆತಂಕ ಜನರಲ್ಲಿದೆ. ಆದರೆ, ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ಬೆಲೆ ಹೆಚ್ಚಾಗಿದ್ದರೂ ಜನ ಲೆಕ್ಕಿಸುತ್ತಿಲ್ಲ. ಗೌರಿ ಹಬ್ಬದ ಜೊತೆಗೆ ಗಣೇಶ ಚತುರ್ಥಿಗೂ ಸಿದ್ಧತೆ ಭರದಿಂದ ಸಾಗಿದೆ. ಗಣೇಶ ಮೂರ್ತಿಗಳ ಖರೀದಿಗೆ ನಗರ, ಗ್ರಾಮೀಣ ಪ್ರದೇಶದಿಂದ ಯುವಕರ ದಂಡೇ ಬಂದಿದ್ದು, ಲಗೇಜ್ ಆಟೋಗಳಲ್ಲಿ ತಮ್ಮ ನೆಚ್ಚಿನ ಗಣೇಶ ಮೂರ್ತಿಗಳನ್ನು ಖರೀದಿಸಿ ಗ್ರಾಮಗಳಿಗೆ ಕೊಂಡೊಯ್ಯುತ್ತಿದ್ದ ದೃಶ್ಯಗಳು ಈಗ ಸಾಮಾನ್ಯ.

ಗಣಪತಿ ಮಂದಿರಗಳು ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಪೆಂಡಾಲ್ ಹಾಗೂ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗುತ್ತಿದೆ. ವೈವಿಧ್ಯಮಯ ಗಣೇಶನ ಮೂರ್ತಿಗಳೂ ಪ್ಲ್ಯಾಸ್ಟಿಕ್ ಹೊದಿಕೆಯಡಿ ಭಕ್ತರಿಗಾಗಿ ಕಾಯ್ದಿವೆ. ತಾಂಡವ ನೃತ್ಯದ ಕಾಲ ಭೈರವ, ಗಣಪ, ಸೌಮ್ಯ ಸ್ವಭಾವದ ಶಿವಲಿಂಗ ಗಣಪ, ರಾಜಸ್ತಾನಿ ಗಣಪ, ಬೆಣ್ಣೆ ಗಣಪ, ಒಡಿಶಾ ಶೈಲಿಯ ಗಣಪ, ಮುಂಬೈನಲ್ಲಿ ಜನಪ್ರಿಯವಾಗಿರುವ `ಲಾಲ್‍ಬಾಗ್ ರಾಜ',ಪೂನಾಡಿನ `ದಗಡು ಸೇಟ್ ಗಣಪ',ವಿಳೀಪುರಂನ `ಪೇಪರ್ ಗಣಪ', ಪಾಂಡಿಚೆರಿಯ `ಹರಳು ಗಣಪ', ಪರಿಸರ ಪೂರಕ `ಜೇಡಿಮಣ್ಣಿನ ಗಣಪ' ಸೇರಿದಂತೆ ವಿವಿಧ ಮೂರ್ತಿಗಳು ಜನರನ್ನು ಸೆಳೆಯುತ್ತಿವೆ.

ವಿಶೇಷ ಮೂರ್ತಿಗಳನ್ನು ಪಾಂಡಿಚೇರಿ, ವಿಳೀಪುರಂ, ಕೃಷ್ಣಾಗಿರಿ, ಮುಂಬೈ, ಕೊಲ್ಲಾ-ಪುರ, ಕೋಲ್ಕೊತಾ, ಹೈದರಾಬಾದ್ ಮತ್ತಿತರ ಕಡೆಗಳಿಂದ ತರಿಸಲಾಗುತ್ತದೆ. ಮಾಮೂಲಿ ಗಣೇಶನನ್ನು ಬೆಂಗಳೂರಿನಲ್ಲೇ ತಯಾರಿಸಲಾಗುತ್ತಿದೆ. ಇನ್ನು ಗಣಪನ ಅಮ್ಮ ಗೌರಿಯಲ್ಲೂ ಬಗೆ ಬಗೆ. ಗಜಗೌರಿ, ಮಂಗಳಗೌರಿ, ಮಡಿಗೌರಿ, ಮೈಸೂರು ಗೌರಿ, ಬೆಂಗಳೂರು ಗೌರಿಯರು ತಮ್ಮದೇ ಶೈಲಿಯಲ್ಲಿ ರಾರಾಜಿಸುತ್ತಿದ್ದಾರೆ.

ಎಂದಿನಂತೆ ಹೂವು-ಹಣ್ಣುಗಳ ಬೆಲೆಯಲ್ಲೇನು ಕಡಿಮೆಯಿಲ್ಲ. ದರಗಳು ಈ ಬಾರಿಯೂ ಏರಿಕೆಯಾಗಿವೆ. ಹಬ್ಬಕ್ಕೆ ಎರಡು ದಿನ ಇರುವಂತೆಯೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಭಾನುವಾರದಿಂದಲೇ ಹೂವು-ಹಣ್ಣಿನ ಬೆಲೆಗಳು ಗಗನಕ್ಕೇರಿವೆ. ಹಬ್ಬದ ಹಿಂದಿನ ದಿನ ಇನ್ನೂ ಬೆಲೆಗಳು ಇನ್ನಷ್ಟು ಏರುವ ಸಾಧ್ಯತೆಯಿದೆ. ಕನಕಾಂಬರ ಹೂವು ಕೆ.ಜಿ.ಗೆ ರು.500ದಿಂದ 700 ದಾಟಿದೆ. ಗುಂಡು ಮಲ್ಲಿಗೆ ರು.100, ರು.150, ಮಳ್ಳೆ ಹೂವು, ಕಾಕಡವೂ ರು.400ಕ್ಕೆ ಏರಿದೆ. ಪರಿಮಳ ಬೀರುವ ಕೇದಗೆ ಒಂದು ದಿಂಡಿಗೆ ರು.50ರಿಂದ ರು.100ವರೆಗೆ ಮಾರಾಟವಾಗುತ್ತಿದೆ. ಹಣ್ಣುಗಳ ಬೆಲೆ ಜತೆಗೆ ಬೇಳೆ ಕಾಳುಗಳ ಬೆಲೆಯಲ್ಲೂ ಏರಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.