ಜಿಲ್ಲಾ ಸುದ್ದಿ

ಮುಕ್ತಾಯಕ್ಕೆ ಮುನ್ನ ಮುಂಗಾರು ಅಬ್ಬರ

ಇನ್ನೇನು ಮುಗಿದೇ ಹೋಯಿತು ಎನ್ನುವ ಹೊತ್ತಿಗೆ ರಾಜ್ಯದಲ್ಲಿ ಮುಂಗಾರು ಅಬ್ಬರಿಸಿದೆ. ಹಲವು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಸುರಿದ ಭಾರೀ...

ಮುಕ್ತಾಯಕ್ಕೆ ಮುನ್ನ ಮುಂಗಾರು ಅಬ್ಬರ
ಬಳ್ಳಾರಿಯಲ್ಲಿ ಮಳೆಯಿಂದಾವೃತವಾಗಿರುವ ಪ್ರದೇಶ (ಕೃಪೆ :ಕೆಪಿಎನ್)
Published On :

ಬೆಂಗಳೂರು:ಇನ್ನೇನು ಮುಗಿದೇ ಹೋಯಿತು ಎನ್ನುವ ಹೊತ್ತಿಗೆ ರಾಜ್ಯದಲ್ಲಿ ಮುಂಗಾರು ಅಬ್ಬರಿಸಿದೆ. ಹಲವು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆ ರೈತರಿಗೆ ತುಸು ನೆಮ್ಮದಿ ತಂದಿದೆ. ಹಾಗೇ, ಮಳೆಯಿಂದಾಗಿ ಕೆಲವೆಡೆ ಅವಘಡಗಳೂ ನಡೆದಿದ್ದು, ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ.ಬೆಳಗಾವಿ, ವಿಜಯಪುರ, ಬಾಗಲಕೋಟೆ, ತುಮಕೂರು, ಕಾರವಾರ, ಧಾರವಾಡ, ಶಿವಮೊಗ್ಗ, ಬೆಂಗಳೂರು, ಮಂಗಳೂರು, ಕೊಡುಗು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಬೆಳಗಾವಿ, ಖಾನಾಪುರ, ಬೈಲಹೊಂಗಲ, ಹುಕ್ಕೇರಿ ಸೇರಿದಂತೆ ಬಹುತೇಕ ಪ್ರದೇಶದಲ್ಲಿ ಮಳೆ ಸುರಿದಿದೆ. ಹುನಗುಂದ ತಾಲೂಕಿನ ಹೇಮವಾಡಗಿ ಗ್ರಾಮದಲ್ಲಿ ಮನೆಯೊಂದರ ಛಾವಣಿ ಕುಸಿದು ಬಿದ್ದಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ರಾಮವಾಡಗಿ ಗ್ರಾಮದ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದ್ದಾರೆ. ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿಯಲ್ಲಿ 130 ಮೀ.ಮೀ. ಮಳೆ ಮಳೆ ಸುರಿದಿದೆ. ದೊಡ್ಡಬಳ್ಳಾಪುರ ದಲ್ಲಿ ಆಸ್ಪತ್ರೆಯೊಂದಕ್ಕೆ ಹಾನಿಯಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್, ಶಿರಾ, ಮಧುಗಿರಿ,ಗುಬ್ಬಿ ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ.ಶಿವಮೊಗ್ಗ ನಗರ ಮತ್ತು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ, ಧಾರವಾಡದಲ್ಲೂ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಮತ್ತು ಹೊಸಪೇಟೆಯಲ್ಲಿ ಹೊಲಗಳು ನಡುಗಡ್ಡೆಯಂತಾ ಗಿದ್ದವು. ನಡುಗಡ್ಡೆಯಲ್ಲಿ ಸಿಲುಕಿದ್ದ 28ಕ್ಕೂ ಹೆಚ್ಚು ರೈತರನ್ನು ರಕ್ಷಿಸಲಾಗಿದೆ. ಬಳ್ಳಾರಿ ಜಿಲ್ಲಾಡಳಿತ ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ರೈತರನ್ನು ರಕ್ಷಿಸಿದೆ. ಇನ್ನು ಸಿರುಗುಪ್ಪದಲ್ಲಿ ಬಸ್‍ವೊಂದು ಹಳ್ಳದಲ್ಲಿ ಸಿಲುಕಿಕೊಂಡಿತ್ತು. ಅದರಲ್ಲಿದ್ದ 43 ಪ್ರಯಾಣಿಕರನ್ನೂ ರಕ್ಷಿಸಲಾಗಿದೆ. ಜಿಲ್ಲೆಯ 100 ಕ್ಕೂ ಹೆಚ್ಚು ಮನೆಗಳು, 75 ಸಾವಿರ ಹೆಕ್ಟೇರ್‍ನಲ್ಲಿ ಬೆಳೆದಿದ್ದ
ಬೆಳೆ ಮಳೆಯಿಂದ ಹಾನಿಯಾಗಿದೆ.


ರಾಯಚೂರು: ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಡೀ ಸುರಿದ ಮಳೆಗೆ ಜಿಲ್ಲೆಯ ಮಾನವಿ ಮತ್ತು ಮಸ್ಕಿ ಸುತ್ತಲಿನ ಪ್ರದೇಶದ ಹಳ್ಳಗಳಲ್ಲಿ ನೀರು ಹರಿದಿದ್ದು, ರೈತಾಪಿ ವರ್ಗಕ್ಕೆ ಸಂತಸ ತಂದಿದೆ. ಮಾನ್ವಿ ತಾಲೂಕಿನ
ಕುರುಕುಂದಾದಲ್ಲಿ 83 ಮಿ.ಮೀ. ಮಳೆಯಾಗಿದೆ. ಮಳೆ ನಿರಾಳತೆ ತಂದರೂ, ಹಲವೆಡೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನತೆ ಪರದಾಡಿದರು.

ತೋಯ್ದು ಯಾತ್ರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರೈತ ಚೈತನ್ಯ ಯಾತ್ರೆ ಸೋಮವಾರ ಸಂಜೆ ಸಿಂಧಗಿ ತಾಲೂಕಿನ ದೇವರಹಿಪ್ಪರಗಿಗೆಬರಬೇಕಿತ್ತು. ಆದರೆ ವೇದಿಕೆ, ಶಾಮಿಯಾನ ಮಳೆ ನೀರಲ್ಲಿ ಮುಳುಗಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ತಗ್ಗಿದ್ದರಿಂದ ವೇದಿಕೆ ಸಜ್ಜುಗೊಳಿಸುವ ಕಾರ್ಯ ಭರದಿಂದನಡೆಯುತ್ತಿತ್ತು.


ಸಿಡಿಲಿಗೆ ಇಬ್ಬರ ಬಲಿ

ರಾಜ್ಯದಲ್ಲಿ ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ. ಬಳ್ಳಾರಿ ತಾಲೂಕಿನ ಬೋರಿಂಗ್ ಕ್ಯಾಂಪ್‍ನ ಪಾರ್ವತಿ (25), ಉಡುಪಿ ತಾಲೂಕಿನ ಅಂಜಾರುಗ್ರಾಮದ ಪಾಲುಬೆಟ್ಟು ನಿವಾಸಿ ಸಂದೀಪ್ ಪೂಜಾರಿ (26) ಮೃತರು.


ಹಿಂಗಾರಿಗೆ ಉತ್ತಮ
ಮುಂಗಾರು ಕೈಕೊಟ್ಟಿದ್ದರಿಂದ ರೈತರು ಹಿಂಗಾರಿನತ್ತ ನಿರೀಕ್ಷೆ ಹೊಂದಿದ್ದರು. ಸಾಮಾನ್ಯವಾಗಿ ಸೆ.15ರಿಂದ ಹಿಂಗಾರು ಆರಂಭ. ಅದಕ್ಕೆ ಮುನ್ನವೇ ಸುರಿದ ಮಳೆ ಕೃಷಿ ತಯಾರಿಗೆ ಹುರುಪು ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.