ಪ್ರತ್ಯೇಕ ಅಪಘಾತ 12 ಮಂದಿ ಸಾವು
ರಾಜ್ಯದಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ 12 ಮಂದಿ ಪ್ರಾಣ...
ಬೆಂಗಳೂರು: ರಾಜ್ಯದಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸ್ನೇಹಿತರ ಸಾವು: ಧಾರವಾಡ ಕೃಷಿ ವಿಶ್ವವಿದ್ಯಾಲಯ ಎದುರಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇತ್ತೀಚಿಗಷ್ಟೇ ನಡೆದ ಭಿಕರ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ, ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಮತ್ತೊಂದು ಅಪಘಾತವಾಗಿದೆ. ಕೋಟೂರು ಮುಲ್ಲಾ ದಾಬಾ ಬಳಿ ಬೆಳಗ್ಗೆ 6ರ ಸುಮಾರಿಗೆ ಟಿಪ್ಪರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಮೂವರು ಮೃತಪಟ್ಟಿದ್ದಾರೆ.
ಮೂಲತಃ ತಮಿಳು ನಾಡಿನ, ಹಾಲಿ ಗುಜರಾತ್‍ನ ಅಹ್ಮದಾ ಬಾದ್ ನಲ್ಲಿ ವಾಸಿಸುತ್ತಿದ್ದ ಎಂ. ಕುಮಾರಸ್ವಾಮಿ (60), ಉತ್ತರ ಪ್ರದೇಶ ಮೂಲದ ನಿಜಾಮುದ್ದೀನ್ (25) ಮತ್ತು ಕೇದಾರ ಯಾದವ್ (35) ಅಪಘಾತದಲ್ಲಿ ಮೃತಪಟ್ಟವರು. ಈ ಮೂವರು ಮುಂಬೈ ಮೂಲದ ಅಲ್ ಸಿಂಗಾನಿಯಾ ಹಾಗೂ ಗಣಪತಿ ಲಾಜಿಸ್ಟಿಕ್ ಕಂಪನಿಯಲ್ಲಿ ಸರಕು ಸಾಗಾಣಿಕೆ ಲಾರಿಗಳ ಚಾಲಕರಾಗಿದ್ದರು.
ಮುಂಬೈಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಎಂ.ಕುಮಾರಸ್ವಾಮಿ, ಮುಂಬೈಗೆ ಹೊರಟಿದ್ದ ನಿಜಾಮುದ್ದೀನ್ ಹಾಗೂ ಕ್ಲೀನರ್ ಕೇದಾರ ಯಾದವ ಸ್ನೇಹಿತರಿದ್ದ ಕಾರಣ ದೂರವಾಣಿ ಸಂಪರ್ಕ ಮಾಡಿ ಕೋಟೂರು ಮುಲ್ಲಾ ದಾಬಾ ಬಳಿ ಭೇಟಿಯಾಗಲು ನಿರ್ಧರಿಸಿದ್ದರು. ಕೋಟೂರು ಕ್ರಾಸ್ ಬಳಿ ಹೆದ್ದಾರಿಯಲ್ಲಿ ಲಾರಿಗಳನ್ನು ನಿಲ್ಲಿಸಿ ರಸ್ತೆ ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಅವಘಡ ಸಂಭವಿಸಿದೆ.
ವಿದ್ಯಾರ್ಥಿಗಳ ದುರ್ಮರಣ: ಚಳ್ಳಕೆರೆ ತಾಲೂಕಿನ ತಳಕು ಠಾಣೆ ವ್ಯಾಪ್ತಿಯ ಬುಕ್ಕಲೂರಹಳ್ಳಿ ಬಳಿ ಗುರುವಾರ ಮಧ್ಯಾಹ್ನ ಕಾರು ಅಪಘಾತಕ್ಕೀಡಾಗಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಚಿತ್ರದುರ್ಗದ ಜೆಎಂಐಟಿ ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷ (21), ರಾಕೇಶ್ (22) ಮತ್ತು ಪವನ್ (21) ಮೃತರು. ಚಿತ್ರದುರ್ಗದಿಂದ ಕುರುಗೋಡು ಬಸವೇಶ್ವರ ದೇವಸ್ಥಾನಕ್ಕೆ ಹೊರಟ ವಿದ್ಯಾರ್ಥಿಗಳ ಕಾರು ಎದುರಿಂದ ಬಂದ ಲಾರಿಗೆ ಜಾಗ ಬಿಡಲು ಹೋದಾಗ ಸೇತುವೆಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆ ಕೂಡಲಸಂಗಮದ ಭಗವತಿ ಕ್ರಾಸ್ ಬಳಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಹಾಗೂ ಟಾಟಾ ಏಸ್ ಮುಖಾಮುಖಿಯಾಗಿ, ಏಸ್‍ನಲ್ಲಿದ್ದ 20 ದಿನದ ಕಂದಮ್ಮ ಸೇರಿ 6 ಜನ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಅವರು ಮೂವರು ಒಂದೇ ಕುಟುಂಬದವರು. ಘಟನೆಯಲ್ಲಿ 9 ಜನ ಗಾಯಗೊಂಡಿದ್ದಾರೆ.
ಭೈರಮಟ್ಟಿ ಗ್ರಾಮದ ಟಾಟಾ ಏಸ್ ಚಾಲಕ ಮಂಜುನಾಥ ಕುಂಬಾರ (32), ರಾಮಣ್ಣ ಬಡನ್ನವರ (65), ಪಾರ್ವತವ್ವ ಶಿಕ್ಕೇರಿ (55) ಹಾಗೂ ಒಂದೇ ಕುಟುಂಬದ ಯಲ್ಲವ್ವ ವಡ್ಡರಗಲ್ (65), ಯಂಕವ್ವ ವಡ್ಡರಗಲ್ (25), ಅಪ್ಪಣ್ಣ (20 ದಿನ) ಮೃತರು. ಎರಡು ವಾರ ಹಿಂದಷ್ಟೇ ಮುಧೋಳ ತಾಲೂಕು ಲೋಕಾಪುರ ಬಳಿ ಟಾಟಾ ಏಸ್ ಹಾಗೂ ಟ್ಯಾಂಕರ್ ನಡುವಿನ ಡಿಕ್ಕಿಯಲ್ಲಿ 14 ಮಂದಿ ಮೃತಪಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

