ಜಿಲ್ಲಾ ಸುದ್ದಿ

ಒಪ್ಪಂದಕ್ಕೆ ಮೊದಲು ಮೂಲ ಸೌಕರ್ಯ ಕಲ್ಪಿಸಿ

ಮುಂದಿನ ವರ್ಷದ ಫೆಬ್ರವರಿ 3 ರಿಂದ 5 ರವರೆಗೆ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ...

ಒಪ್ಪಂದಕ್ಕೆ ಮೊದಲು ಮೂಲ ಸೌಕರ್ಯ ಕಲ್ಪಿಸಿ
ಸಿದ್ದರಾಮಯ್ಯ
Published On :
ಬೆಂಗಳೂರು: ಮುಂದಿನ ವರ್ಷದ ಫೆಬ್ರವರಿ 3 ರಿಂದ 5 ರವರೆಗೆ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಬಂಡವಾಳ ಹೂಡಿಕೆಯಾಗುವಂತೆ ನೋಡಿಕೊಳ್ಳುವುದು ಹಾಗೂ ಎಲ್ಲಾ ಜಿಲ್ಲೆಗಳಲ್ಲಿನ ಸರ್ಕಾರದ ಭೂಮಿಯನ್ನು ಡಿಸೆಂಬರ್ 15ರೊಳಗೆ ಹಸ್ತಾಂತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಇನ್‍ವೆಸ್ಟ್ ಕರ್ನಾಟಕ-2016 ಉನ್ನತಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ ಒಪ್ಪಂದಗಳಿಗೆ ಸಹಿ ಹಾಕುವುದು ಮುಖ್ಯವಲ್ಲ. ಅದಂತೆ ಬಂಡವಾಳ ಹೂಡಿಕೆಯಾಗುವುದು ನೋಡಿಕೊಳ್ಳುವುದು ಮುಖ್ಯ. ಯಾವುದೇ ಕಂಪನಿ ಘಟಕ ಆರಂಭಿಸಲು ಮುಂದಾದರೆ ಒಪ್ಪಂದ ಮಾಡಿಕೊಳ್ಳುವ ಮೊದಲೇ ಆ ಕಂಪನಿಗೆ ನೀರು, ವಿದ್ಯುತ್, ಭೂಮಿ ಕಲ್ಪಿಸಬೇಕು. 
ಈ ವಿಚಾರದಲ್ಲಿ ಅನಗತ್ಯ ವಿಳಂಬ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಳೆದ 2012ರ ಸಮಾವೇಶದಲ್ಲಿ 7 ಲಕ್ಷ ಕೋಟಿ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಆದರೆ ಹೂಡಿಕೆಯಾದ ಬಂಡವಾಳ ಎಷ್ಟು? ಆ ರೀತಿ ಈ ಸಮಾವೇಶದಲ್ಲಿ ಆಗಬಾರದು. ಕೆಐಎಡಿಬಿ ಎಲ್ಲಾ ಜಿಲ್ಲೆಗಳಿಗೆ ಸರ್ಕಾರದ ಭೂಮಿ ಡಿ.15ರೊಳಗೆ ಹಸ್ತಾಂತರವಾಗಬೇಕು. 
ಈ ವಿಷಯ ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಮಂಡನೆಯಾಗ ಬೇಕು. ಕೈಗಾರಿಕಾ ಸ್ಥಾಪನೆಗೆ ಪ್ರಶಸ್ತವಾದ ರಾಜ್ಯಗಳ ಸ್ಥಾನದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಈ ಎಲ್ಲಾ ವಿಚಾರಗಳನ್ನು ಉದ್ಯಮಿಗಳಿಗೆ ವಿವರಿಸಿ ಬಂಡವಾಳ ಹೂಡುವಂತೆ ನೋಡಿಕೊಳ್ಳಿ ಎಂದು ಸಂಬಂಧಪಟ್ಟ ಸಚಿವರು ಮತ್ತು ಅದಿಕಾರಿಗಳಿಗೆ ಸೂಚಿಸಿದರು. 
ಗೃಹ ಸಚಿವ ಡಾ.ಜಿ. ಪರಮೇಶ್ವರ್, ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಾರ್ತಾ ಸಚಿವ ಆರ್.ರೋಷನ್ ಬೇಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಹೆಚ್ಚುವರಿ ಕಾರ್ಯದರ್ಶಿ ರತ್ನಪ್ರಭಾ ಉಪಸ್ಥಿತರಿದ್ದರು. 
ಮೂರು ದಿನಗಳ ಸಮ್ಮೇಳನಕ್ಕೆ ಸಜ್ಜು 
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಉದ್ಘಾಟನೆ ಫೆಬ್ರವರಿ 3ರ ಬೆಳಗ್ಗೆ 10 ಗಂಟೆಗೆ ನೆರವೇರಲಿದೆ. ಫೆಬ್ರವರಿ 5ರಂದು ಎಲ್ಲಾ ಉದ್ಯಮಿಗಳಿಗೆ ಸ್ಥಳ ಪರಿಚಯಿಸುವ ಕಾರ್ಯಕ್ರಮವಿದೆ. ಬಂಡವಾಳ ಹೂಡಿಕೆಗೆ 12 ವಲಯ ಗುರುತಿಸಲಾಗಿದೆ. ವಸ್ತುಪ್ರದರ್ಶನ, ವಿಚಾರ ಸಂಕಿರಣ ಏರ್ಪಡಿಸಲಾಗಿದೆ. 
ಎಸ್‍ಬಿಐ, ಎಸ್ ಬ್ಯಾಂಕ್, ಕೆನರಾ ಬ್ಯಾಂಕ್ ಸಮಾವೇಶದ ಪಾಲುದಾರಿಕೆ ವಹಿಸಲಿವೆ. ನೂತನ ಕೈಗಾರಿಕಾ ನೀತಿ, ಸ್ಟಾರ್ಟ್‍ಅಪ್ ನೀತಿ ಜಾರಿಗೆ ತಂದು 100 ಕಂಪನಿಗಳಿಗೆ ಪಿಎಫ್ ಸೌಲಭ್ಯ ನೀಡಿರುವುದರಿಂದ ನಮ್ಮ ರಾಜ್ಯ ಕಾರ್ಮಿಕ ಸ್ನೇಹಿಯಾಗಿದೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂಬ ಅಪಪ್ರಚಾರ ಸಲ್ಲದು. 
ಮುಂದಿನ ವರ್ಷದ ಜೂನ್ ಮತ್ತು ಜುಲೈ ತಿಂಗಳೊಳಗೆ 2 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ. ರಾಜ್ಯದಲ್ಲಿ 1 ಲಕ್ಷ ಎಕರೆ ಜಮೀನಿನ ಅವಶ್ಯಕತೆ ಇದ್ದು, ಸದ್ಯ 40 ಸಾವಿರ ಎಕರೆ ಗುರುತಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.