ರಾಜಕಾರಣಿಗಳಿಗೆ ಮಹದಾಯಿ ಬಿಸಿ
ಕಳೆದ ಹಲವು ದಿನಗಳಿಂದ ಹುಬ್ಬಳ್ಳಿ ಧಾರವಾಡ, ನವಲಗುಂದದಲ್ಲಿ ನಡೆಯುತ್ತಿದ್ದ ಕಳಸಾ ಬಂಡೂರಿ ಹೋರಾಟ ಗುರುವಾರ ರಾಜಧಾನಿಗೆ ವಗಾವಣೆಗೊಂಡಿತ್ತು...

ಬೆಂಗಳೂರು: ಕಳೆದ ಹಲವು ದಿನಗಳಿಂದ ಹುಬ್ಬಳ್ಳಿ ಧಾರವಾಡ, ನವಲಗುಂದದಲ್ಲಿ ನಡೆಯುತ್ತಿದ್ದ ಕಳಸಾ ಬಂಡೂರಿ ಹೋರಾಟ ಗುರುವಾರ ರಾಜಧಾನಿಗೆ ವಗಾವಣೆಗೊಂಡಿತ್ತು.
ಉತ್ತರ ಕರ್ನಾಟಕದ ಹಲವು ತಾಲೂಕುಗಳಿಂದ ಬೆಂಗಳೂರಿಗೆ ಬಂದಿದ್ದ, ರೈತರು ರಾಜಕೀಯ ಪಕ್ಷಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬೆಂಗಳೂರಿನ ನಗರ ರೈಲು ನಿಲ್ದಾಣದಿಂದ ಶೇಷಾದ್ರಿಪುರಕ್ಕೆ ತೆರಳಿದ ಹೋರಾಟಗಾರರು ಮೊದಲು ಜೆಡಿಎಸ್ ಕಚೇರಿಗೆ ಮುತ್ತಿಗೆ ಹಾಕಿದರು. ಅಲ್ಲಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದರು. ಜೆಡಿಎಸ್ ಕಚೇರಿ ಬಳಿ ಶಾಸಕ ಜಿ.ಎಸ್.ಕೋನರೆಡ್ಡಿ ಅವರು ಪ್ರತಿಭಟನಾಕಾರರ ಮನವಿ ಆಲಿಸಿದರು.
ಬಿಜೆಪಿ ಕಚೇರಿಯಲ್ಲಿದ್ದ ಮಾಜಿ ಶಾಸಕ ಅರಗ ಜ್ಞಾನೇಂದ್ರ ಅವರು ರೈತರ ಮನವಿ ಸ್ವೀಕರಿಸಿದರು. ಎರಡೂ ಪಕ್ಷಗಳ ಕಚೇರಿಗೆ ಮುತ್ತಿಗೆ ಹಾಕಿ ಕಾಂಗ್ರೆಸ್ ಕಚೇರಿಯತ್ತ ತೆರಳುತ್ತಿದ್ದ ರೈತರಿಗೆ ಸಚಿವ ವಿನಯ್ ಕುಲಕರ್ಣಿ ಎದುರಾಗಿ, ಸಿಎಂ ಗೃಹ ಕಚೇರಿ ಕೃಷ್ಣಗೆ ಕರೆದೊಯ್ದರು. ಚರ್ಚೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವರಾದ ಎಂ.ಬಿ ಪಾಟೀಲ್, ವಿನಯ್ ಕುಲಕರ್ಣಿ, ಎಚ್.ಕೆ ಪಾಟೀಲ್ ಹಾಜರಿದ್ದರು. ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರಧಾನಿ ಮನವೋಲಿಸಲು ಮತ್ತೊಮ್ಮ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಬೇಕು.
ನ.23 ರಂದು ನ್ಯಾಯಾಧೀಕರಣದ ವಿಚಾರಣೆ ಇದ್ದು, ಅದಕ್ಕೂ ಮೊದಲೇ ಯೋಜನೆಯ ಬಗ್ಗೆ ಮಧ್ಯಂತರ ಅರ್ಜಿ ಹಾಕಬೇಕು. ಬೆಳೆ ನಷ್ಟ ಪರಿಹಾರವಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ರೈತರು ಪಡೆದ ಸಾಲವನ್ನು ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಬ್ಯಾಂಕ್‍ಗಳ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡುವ ನಿರ್ಧಾರ ಕೂಡಲೇ ಕೈಗೊಳ್ಳಬೇಕು ಎಂದು ಕಳಸ ಬಂಡೂರಿ ಹೋರಾಟ ಸಮಿತಿ ಸಂಚಾಲಕ ವಿಕಾಸ್ ಸೊಪ್ಪಿನ್ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಹೇಳಿದರು.
ಮನವಿ ಆಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈಗಾಗಲೇ ಒಮ್ಮೆ ಪ್ರಧಾನಿಯನ್ನು ಭೇಟಿ ಮಾಡಲಾಗಿದ್ದು ಅವರಿಂದ ಸೂಕ್ತ ಸ್ಪಂದನೆ ಬಂದಿಲ್ಲ. ಅಲ್ಲದೇ, ಯೋಜನೆ ವಿಚಾರವಾಗಿ ಸ್ಥಳೀಯ ಬಿಜೆಪಿ ನಾಯಕರು ಪ್ರಧಾನಿಗೆ ವಿಷಯವನ್ನು ಸರಿಯಾಗಿ ಮನವರಿಕೆ ಮಾಡಿಕೊಡಲು ವಿಫಲರಾಗಿದ್ದಾರೆ. ಆದರೂ, ರಾಜ್ಯ ಸರ್ಕಾರದ ಪ್ರತಿನಿಧಿಗಳು ರೈತ ಮುಖಂಡರ ಒಳಗೊಂಡ ನಿಯೋಗ ಮಹಾರಾಷ್ಟ್ರ ಹಾಗೂ ಗೋವಾ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸುವ ಉದ್ದೇಶ ವಿದ್ದು ಅದಕ್ಕೆ ಸರ್ಕಾರದ ಬೆಂಬಲವಿದೆ ಎಂದರು. ರಾಜ್ಯದ ಸಂಸದರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


