ನಿನ್ನನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇನೆ
ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ವಿಚಾರವಾಗಿ ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ಪಾಲಿಕೆ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರಿಗೆ....

ಬೆಂಗಳೂರು: ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ವಿಚಾರವಾಗಿ ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ಪಾಲಿಕೆ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರಿಗೆ ಬಿಬಿಎಂಪಿ ಪ್ರತಿಪಕ್ಷದ ಮಾಜಿ ನಾಯಕ ಎನ್ ಆರ್ ರಮೇಶ್ ಅವರು ಪ್ರಾಣನ ಬೆದರಿಕೆಯೊಡ್ಡಿ, ತಂದೆ ಮಗ ಇಬ್ಬರನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸರ್ಫರಾಜ್ ಅವರು ಅನೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಕಲಂ 353, 504, 506 ಅನ್ವಯ ಪ್ರಕರಣ ದಾಖಲಾಗಿದೆ.
ಬಿಬಎಂಪಿ ಕೇಂದ್ರ ಕಚೇರಿ ರಸ್ತೆ ಅಗೆದು ಒಎಫ್ ಸಿ ಕೇಬಲ್ ಅಳವಡಿಸಲು ಅನುಮತಿ ನೀಡಿದೆ. ಆದರಂತೆ ಸಂಬಂಧಪಟ್ಟ ಏಜೆನ್ಸಿಯವರು ವಾರ್ಡ್ ಸಂಖ್ಯೆ 2ರ ವ್ಯಾಪ್ತಿಯ ಹಾರೋಹಳ್ಳಿ ಪ್ರದೇಶದಲ್ಲಿ ಕೇಬಲ್ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಆದರೆ, ಮೇ 27 ರಂದು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಮೊಬೈಲ್ ಫೋನ್ ಗೆ ಕರೆ ಮಾಡಿದ ಎನ್. ಆರ್ ರಮೇಶ್, ಹಾರೋಹಳ್ಳಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಸ್ತೆ ಅಗೆದು ಕೇಬಲ್ ಅಳವಡಿಸುತ್ತಿರುವ ಬಗ್ಗೆ ಮಾಹಿತಿ ಇಲ್ಲವೇ ನೀವು ಏನು ಕ್ರಮ ಕೈಗೊಂಡಿದ್ದೀರಾ? ನಿಮಗೆ ಜವಾಬ್ದಾರಿ ಕೊಟ್ಟವರ್ಯಾರು? ನಿಮಗೆ ಜಂಟಿ ಆಯುಕ್ತರ ಹುದ್ದೆ ನೀಡಿದವರು ಯಾರು ? ಎಂದು ಬೆದರಿಸಿ, ಏಕವಚನದಲ್ಲಿ ಅಸಂವಿಧಾನಿಕ ಪದ ಬಳಸಿದ್ದಾರೆ.
ಮತ್ತೊಮ್ಮೆ ಕರೆ ಮಾಡಿ ನೀನು ಮುಸ್ಲಿಂ ಆಗಿದ್ದು, ಪಾಕಿಸ್ತಾನದಿಂದ ಬಂದಿದ್ದೀಯಾ, ನಿನ್ನ ವಿರುದ್ಧ ಲೋಕಾಯುಕ್ತ ಮತ್ತು ಬಿಎಂಟಿಎಫ್ ನಲ್ಲಿ ದೂರು ನೀಡುತ್ತೇನೆ ಎಂದು ಬೆದರಿಸಿದರು. ಅಲ್ಲದೇ ಅನಧಿಕೃತ ಒಎಫ್ ಸಿ ಕೇಬಲ್ ಗಳ ವಿರುದ್ಧ ಕೈಗೊಂಡ ಕ್ರಮದ ವರದಿ ನನಗೆ ನೀಡುವಂತೆ ದರ್ಪದಿಂದ ಹೇಳಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿದ್ದಿದ್ದರೂ ಅದರಲ್ಲಿ ಮೂಗು ತೂರಿಸಿರುವುದಲ್ಲದೇ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ನನ್ನ ಘನತೆಗೆ ತೇಜೋವಧೆ ಮಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಫರಾಜ್ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಹೊಸದಾಗಿ ಡಾಂಬರೀಕರಣ ಆಗಿರುವ ರಸ್ತೆಯಲ್ಲಿ ಅಕ್ರಮವಾಗಿ ರಸ್ತೆ ಅಗೆದು ಒಎಫ್ ಸಿ ಕೇಬಲ್ ಅಳವಡಿಕೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಹಾಗೂ ಬಿಎಂಟಿಎಫ್ ಗೆ ದೂರು ನೀಡಿದ್ದೇನೆ. ಇದೇ ವಿಚಾರವಾಗಿ ಬಿಬಿಬಿಎಂಪಿ ಆಡಳಿತಾಧಿಕಾರಿ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದೇನೆ. ಅದೇ ರೀತಿ ಸರ್ಫರಾಜ್ ಖಾನ್ ಜೊತೆಯೂ ಮಾತನಾಡಿದ್ದೇನೆ. ಯಾವುದೇ ಬೆದರಿಕೆ ಹಾಕಿಲ್ಲ. ಅವರೇ ನನ್ನೊಂದಿಗೆ ಕೆಟ್ಟದಾಗಿ ಮಾತನಾಡಿದ್ದಾರೆ.
ಎನ್. ಆರ್. ರಮೇಶ್, ಬಿಬಿಎಂಪಿ ಮಾಜಿ ಸದಸ್ಯ
ನಾಳೆಯಿಂದ ನಿನಗೆ ಶನಿಕಾಟ ಆರಂಭ. ಬಿಎಂಟಿಎಫ್ ಗೆ ದೂರು ನೀಡುತ್ತೇನೆ. ನಿನ್ನನ್ನು, ನಿನ್ನ ಅಪ್ಪನನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾರೆ. ಅಸಲಿಗೆ ಹಾರೋಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಬಿಡಲಾಗಿರುವ ಗುಂಡಿಗಳ ಮೂಲಕ ಒಎಫ್ ಸಿ ಕೇಬಲ್ ಅಳವಡಿಕೆ ಕಾರ್ಯ ನಡೆದಿದೆ. ರಸ್ತೆಯನ್ನು ಎಲ್ಲೂ ಅಗೆದಿಲ್ಲ.
ಸರ್ಫರಾಜ್ ಖಾನ್, ಜಂಟಿ ಆಯುಕ್ತ, ಬಿಬಿಎಂಪಿ ವಲಯ ಬ್ಯಾಟರಾಯನಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


