ಶೂನ್ಯ ಶಾಲೆಗಳ ವಿರುದ್ಧ ಸರ್ಕಾರದ ಮೌನ
ಶೂನ್ಯ ಫಲಿತಾಂಶ `ಸಾಧನೆ' ಮಾಡುತ್ತಿರುವ ಶಾಲೆಗಳ ವಿರುದ್ಧ ಕ್ರಮ ಜರುಗಿಸದೇ ಶಿಕ್ಷಣ ಇಲಾಖೆ ಮೌನವಹಿಸಿದೆ...

ಬೆಂಗಳೂರು: ಶೂನ್ಯ ಫಲಿತಾಂಶ `ಸಾಧನೆ' ಮಾಡುತ್ತಿರುವ ಶಾಲೆಗಳ ವಿರುದ್ಧ ಕ್ರಮ ಜರುಗಿಸದೇ ಶಿಕ್ಷಣ ಇಲಾಖೆ ಮೌನವಹಿಸಿದೆ.
ಶೂನ್ಯ ಫಲಿತಾಂಶ ಗಳಿಸುತ್ತಿರುವ ಶಾಲೆಗಳು ಈ ಶೈಕ್ಷಣಿಕ ವರ್ಷದಲ್ಲಿ ಮೊದಲಲ್ಲ. 2015-16ರಲ್ಲಿ 36 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದರೇ 2014-15ರಲ್ಲಿ 17 ಶಾಲೆಗಳಿಗೆ ಇದೇ ಪರಿಸ್ಥಿತಿ ಬಂದಿತ್ತು.
ಆಶ್ಚರ್ಯವೆಂದರೆ, ಈ ಬಾರಿ ಶೂನ್ಯ ಫಲಿತಾಂಶದಲ್ಲಿ 2014ರ ಪಟ್ಟಿಯಲ್ಲಿದ್ದ 9 ಶಾಲೆಗಳ ಹೆಸರೂ ಇದೆ. ಹಿಂದಿನ ಫಲಿತಾಂಶದ ಸಂದರ್ಭದಲ್ಲಿ ಇಂತಹ ಶಾಲೆಗಳಿಗೆ ನೋಟಿಸ್ ನೀಡಿ ಶಿಸ್ತಿನ ಕ್ರಮ ಜರುಗಿಸುವುದಾಗಿ ಖುದ್ದು ಶಿಕ್ಷಣ ಸಚಿವರೇ ಹೇಳಿದ್ದರು. ಈ ಬಾರಿಯೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಇದೇ ಹೇಳಿಕೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳ್ಯಾವುವೂ ಶೂನ್ಯ ಫಲಿತಾಂಶ ದಾಖಲಿಸಿಲ್ಲ. 2 ಅನುದಾನಿತ ಹಾಗೂ 34 ಖಾಸಗಿ ಶಾಲೆಗಳು ಈ ಶೂನ್ಯ ಪಟ್ಟಿಯಲ್ಲಿವೆ. ಶಿಕ್ಷಣ ಇಲಾಖೆ ನಿಯಮದ ಪ್ರಕಾರ, ಅನುದಾನಿತ ಶಾಲೆಗಳಾಗಿದ್ದರೆ ಅನುದಾನ ರದ್ದುಪಡಿಸಿ ವಿದ್ಯಾರ್ಥಿಗಳನ್ನು ಪಕ್ಕದ ಶಾಲೆಗಳಿಗೆ ವರ್ಗಾಯಿಸಲು ಅವಕಾಶವಿದೆ. ಇನ್ನು ಖಾಸಗಿ ಶಾಲೆಗಳ ವಿಚಾರ ಬಂದಾಗ ಕರ್ನಾಟಕ ಶಿಕ್ಷಣ ಕಾಯಿದೆಯಂತೆ ನೋಟಿಸ್ ಜಾರಿ ಮಾಡಿ ವಿವರಣೆ ಪಡೆಯಬೇಕು. ಬಳಿಕ ಶಿಕ್ಷಣ ಇಲಾಖೆಯು ಶಾಲೆಗಳ ಮಾನ್ಯತೆ ರದ್ದು ಮಾಡಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ವರ್ಗಾಯಿಸುತ್ತದೆ. ಆದರೆ ಕಳೆದ ವರ್ಷ ಶೂನ್ಯ ಫಲಿತಾಂಶಕ್ಕೆ ಕಾರಣವಾದ ಶಾಲೆಗಳಿಗೆ ಕೇವಲ ನೋಟಿಸ್ ನೀಡಲಾಗಿದೆ.
ಕಳೆದ ಶೈಕ್ಷಣಿಕ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯೂ ಇದೇ ಹೇಳಿಕೆ ನೀಡಿದ್ದು, ಶೂನ್ಯ ಫಲಿತಾಂಶದ ಶಾಲೆಗಳ ಮಾನ್ಯತೆ ರದ್ದು ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ ಅವರು ಮಾತನಾಡಿ, `ಶೂನ್ಯ ಫಲಿತಾಂಶ ದಾಖಲಾದ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಆ ಶಾಲೆಯಲ್ಲಿನ ಒಟ್ಟು ಸಂಖ್ಯೆ 25ಕ್ಕಿಂತ ಕಡಿಮೆಯಾದರೆ ನೇರವಾಗಿ ಮಾನ್ಯತೆ ರದ್ದು ಮಾಡಬಹುದು. ಫಲಿತಾಂಶವನ್ನು ಮಾತ್ರ ಕಾರಣವಾಗಿಟ್ಟುಕೊಳ್ಳಬೇಕಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ಈ ಅಧಿಕಾರವಿದೆ. ಈ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲೇ ಹೆಚ್ಚು: ರಾಜ್ಯದ ರಾಜಧಾನಿ ಶಾಲೆಗಳೇ ಶೂನ್ಯ ಫಲಿತಾಂಶದಲ್ಲಿ ಮುಂದಿವೆ. ಈ ಬಾರಿ ಶೂನ್ಯ ಫಲಿತಾಂಶ ದಾಖಲಿಸಿದ 36 ಶಾಲೆಗಳಲ್ಲಿ 7 ಶಾಲೆಗಳು ಬೆಂಗಳೂರು ಜಿಲ್ಲೆಗೆ ಸೇರಿವೆ. ಕಳೆದ ಬಾರಿಯೂ 17 ಶಾಲೆಗಳಲ್ಲಿ 6 ಶಾಲೆಗಳು ಬೆಂಗಳೂರಿನಿಂದೇ ಆಗಿತ್ತು. ಈ ಬಾರಿಯೂ ಅದೇ 6 ಶಾಲೆಗಳಲ್ಲಿ ಶೂನ್ಯ ಫಲಿತಾಂಶ. ಈ ಎಲ್ಲ ಶಾಲೆಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 3ರಿಂದ 25 ಆಗಿದೆ. ಇದರಲ್ಲಿ ಕಾರ್ಪೋರೇಷನ್ ಬಾಲಕಿಯರ ಶಾಲೆಯೂ ಸೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


