ಜಿಲ್ಲಾ ಸುದ್ದಿ

ಶಾಸಕರ ಹೆಸರಲ್ಲಿ ದರೋಡೆ ಮಾಡಿರುವ ಆರೋಪಿ ಪತ್ತೆಗೆ ರು. 10 ಸಾವಿರ ಬಹುಮಾನ

ಪಾವಗಡ ಶಾಸಕರ ಕಡೆಯವರೆಂದು ಗಸ್ತು ಪೊಲೀಸರನ್ನು ಯಾಮಾರಿಸಿ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ...

ಶಾಸಕರ ಹೆಸರಲ್ಲಿ ದರೋಡೆ ಮಾಡಿರುವ ಆರೋಪಿ ಪತ್ತೆಗೆ ರು. 10 ಸಾವಿರ ಬಹುಮಾನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಪಾವಗಡ ಶಾಸಕರ ಕಡೆಯವರೆಂದು ಗಸ್ತು ಪೊಲೀಸರನ್ನು ಯಾಮಾರಿಸಿ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆ ಎಸಗಿದ್ದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ನಗರ ಪೊಲೀಸರು ಪಾವಗಡ ಶಾಸಕ ತಿಮ್ಮರಾಯಪ್ಪ ಅವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಅಲ್ಲದೇ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ 10 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಏ.30ರಂದು ರಾತ್ರಿ 9.30ರ ಸುಮಾರಿಗೆ ಮಹಾಲಕ್ಷ್ಮಿ ಬಡಾವಣೆ 3ನೇ ಮುಖ್ಯರಸ್ತೆಯಲ್ಲಿ ಉದ್ಯಮಿ ಪ್ರಕಾಶ ಎಂಬುವರ ಮನೆಗೆ ನುಗ್ಗಿದ್ದ ದರೋಡೆಕೋರರು ಪಿಸ್ತೂಲ್ ತೋರಿಸಿ ರು. 11 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದರು.

ದರೋಡೆ ಮಾಡಲು ಮನೆಯೊಳಗೆ ನುಗ್ಗುವ ಮುನ್ನ ಆರೋಪಿಗಳು ಪ್ರಕಾಶ್ ಅವರ ಮನೆ ಬಳಿ ಓಡಾಡುತ್ತಿದ್ದರು. ಅದೇ ವೇಳೆಗೆ ಗಸ್ತಿನಲ್ಲಿದ್ದ ಮಹಾಲಕ್ಷ್ಮಿ ಬಡಾವಣೆ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ವಿಚಾರಿಸಿದಾಗ, ತಾವು ಪಾವಗಡ ಕ್ಷೇತ್ರದ ಎಂಎಲ್‍ಎ -ತಿಮ್ಮರಾಯಪ್ಪ ಕಡೆಯವರು. ಕೆಲಸದ ಮೇಲೆ ಬಂದಿದ್ದೇವೆ ಎಂದು ಕಾರಿನ ಮೇಲಿದ್ದ ಶಾಸಕರ ಪಾಸ್ ತೋರಿಸಿ ಹೇಳಿ ತಪ್ಪಿಸಿಕೊಂಡಿದ್ದರು.

ಪೊಲೀಸರು ಮುಂದಕ್ಕೆ ಹೋಗುತ್ತಿದ್ದಂತೆ ಉದ್ಯಮಿ ಪ್ರಕಾಶ್ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ದರೋಡೆ ಎಸಗಿದ ಆರೋಪಿಗಳ ತಂಡದಲ್ಲಿದ್ದ ಒಬ್ಬ ವ್ಯಕ್ತಿಯ ಕತ್ತಿನ ಮೇಲೆ ಓಂ ಟ್ಯಾಟು ಇರುವುದನ್ನು ಗಮನಿಸಿದ್ದಾಗಿ ಗಸ್ತು ಪೊಲೀಸರು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಪಾವಗಡ ಶಾಸಕ ತಿಮ್ಮರಾಯಪ್ಪ ಅವರನ್ನು ಸಂಪರ್ಕಿಸಿದಾಗ ತಮ್ಮ ಕಡೆಯವರು ಯಾರೂ ಇಲ್ಲ. ಅಲ್ಲದೇ ಆ ರೀತಿ ಪಾಸನ್ನು ಯಾರಿಗೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ, ಬೇರೆ ಕೋನಗಳಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಉತ್ತರ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು. ಶಾಸಕರ ಕಡೆಯವರೆಂದು ಹೇಳಿಕೊಂಡು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡಿದ್ದ ಆರೋಪಿಗಳು ಪಿಸ್ತೂಲ್ ತೋರಿಸಿ ದರೋಡೆ ಎಸಗಿದ್ದ ಪ್ರಕರಣ ಈಗ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ರು. 10 ಸಾವಿರ ಬಹುಮಾನ: ಶಾಸಕರ ಪಾಸ್ ತೋರಿಸಿ ದರೋಡೆ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಗಳ ಪೈಕಿ ಒಬ್ಬನ ಕತ್ತಿನ ಮೇಲೆ ಹೊರಗೆ ಕಾಣಿಸುವಂತೆ ಹಿಂದಿ `ಓಂ' ಟ್ಯಾಟೂ ಇರುವುದನ್ನು ಪೊಲೀಸರು ಗಮನಿಸಿದ್ದಾರೆ. ಹೀಗಾಗಿ, ಅಪರಾಧ ಹಿನ್ನೆಲೆಯುಳ್ಳ ಓಂ ಟ್ಯಾಟೂ ಹಾಕಿಸಿಕೊಂಡಿರುವ ವ್ಯಕ್ತಿಯ ಬಗ್ಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಇಲಾಖೆಯಿಂದ ರು. 10 ಸಾವಿರ ಬಹುಮಾನ ನೀಡುವುದಾಗಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.