ಬಿಬಿಎಂಪಿ ಗೆಲವಿಗೆ ಜೆಡಿಎಸ್ ಹೆಣೆಯುತ್ತಿದೆ ರಣತಂತ್ರ
ರಾಜ್ಯದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ, ಮುನಿದುಹೋಗಿದ್ದ ಮುಖಂಡರನ್ನು ಒಗ್ಗೂಡಿಸುವಲ್ಲಿ ಸಫಲರಾಗಿರುವ ಜೆಡಿಎಸ್ ವರಿಷ್ಠರು, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಪ್ರಭುತ್ವ ಸಾಧಿಸಲು ಹೋರಾಟಕ್ಕೆ ಸಜ್ಜಾಗಿದ್ದಾರೆ...

ಬೆಂಗಳೂರು: ರಾಜ್ಯದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ, ಮುನಿದುಹೋಗಿದ್ದ ಮುಖಂಡರನ್ನು ಒಗ್ಗೂಡಿಸುವಲ್ಲಿ ಸಫಲರಾಗಿರುವ ಜೆಡಿಎಸ್ ವರಿಷ್ಠರು, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಪ್ರಭುತ್ವ ಸಾಧಿಸಲು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಿದ್ದ ಜೆಡಿಎಸ್, ಒಂದು ಸ್ಥಾನದಿಂದ ಮೂರು ಸ್ಥಾನಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತು. ಆದರೆ, ರಾಜ್ಯದ ಒಟ್ಟಾರೆ ಫಲಿತಾಂಶದ ಹಿನ್ನಡೆಯಿಂದ ಲೋಕಸಭೆ ಚುನಾವಣೆಯಲ್ಲಿ ಅಷ್ಟೊಂದು ಆಸಕ್ತಿಯಿಂದ ಸ್ಪರ್ಧಿಸಿರಲಿಲ್ಲ. ಆದರೆ, ಈಗ ಬಿಬಿಎಂಪಿ ಚುನಾವಣೆಯನ್ನು ಪ್ರತಿಷ್ಠೆಯÁಗಿ ಪರಿಗಣಿಸಿದ್ದು, ಈ ಬಾರಿ ಏನಿಲ್ಲವೆಂದರೂ ತಾನಿಲ್ಲದೆ ಯಾರೂ ಅಧಿಕಾರ ನಡೆಸಲು ಸಾಧ್ಯ ಇಲ್ಲ ಎಂಬಷ್ಟು ಸ್ಥಾನಗಳನ್ನು ಪಡೆದುಕೊಳ್ಳಲೇಬೇಕೆಂಬ ಗುರಿ ಹೊಂದಿದೆ.
2010ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ 198 ವಾರ್ಡ್‍ಗಳಲ್ಲಿ ಜೆಡಿಎಸ್ 15 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿತ್ತು. ಇದರಲ್ಲೂ ಬನಶಂಕರಿ ದೇವಸ್ಥಾನ ವಾರ್ಡ್‍ನಲ್ಲಿ ಗೆದ್ದಿದ್ದ ದಿವಾನ್ ಅಲಿ ಕೊಲೆಯಾದ ನಂತರ ಮರು ಚುನಾವಣೆಯಲ್ಲಿ ಆ ವಾರ್ಡ್ ಕೈತಪ್ಪಿತು. ವಿಧಾನಸಭೆ ಚುನಾವಣೆ ವೇಳೆ ಕಾಚರಕನಹಳ್ಳಿ ವಾರ್ಡ್‍ನಿಂದ ಸ್ಪರ್ಧಿಸಿದ್ದ ಪದ್ಮನಾಭರೆಡ್ಡಿ ಕೂಡ ಉಚ್ಛಾಟಿತರಾಗಿ ಬಿಜೆಪಿ ಸೇರಿಕೊಂಡರು. ಹೀಗಾಗಿ, ಕೊನೆಯಲ್ಲಿ 13ಕ್ಕೆ ಮಾತ್ರ ಜೆಡಿಎಸ್ ಸೀಮಿತಗೊಂಡಿತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ ಅದೆಲ್ಲವನ್ನೂ ಮೀರಿ ನಿಲ್ಲುವ ತಂತ್ರಗಳು ರೂಪುಗೊಳ್ಳುತ್ತಿವೆ.
ಕೆರೆ ಮೂಲಕ ಕರೆ: ರೈತರ ಸಮಸ್ಯೆಯನ್ನು ಇಟ್ಟುಕೊಂಡು ರಾಜ್ಯಾದ್ಯಂತ ಎಚ್.ಡಿ. ಕುಮಾರಸ್ವಾಮಿ ಹೋರಾಟ ರೂಪಿಸಿರುವುದಕ್ಕೆ ನಿರೀಕ್ಷೆಗಿಂತ ಹೆಚ್ಚು ಸ್ಪಂದನೆ ಸಿಕ್ಕಿದೆ. ಇದು ಬಿಬಿಎಂಪಿ ಚುನಾವಣೆ ಉತ್ಸಾಹಕ್ಕೆ ಹೆಚ್ಚು ಒತ್ತು ನೀಡಿದೆ. ಏಕೆಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆ ಒತ್ತುವರಿ, ಭೂ ಮಾಫಿಯಾದ ಬಗ್ಗೆ ವಿಧಾನಸಭೆಯಲ್ಲಿ ಅತಿಹೆಚ್ಚು ಹೋರಾಟ ನಡೆಸಿದ್ದೇ ಜೆಡಿಎಸ್. ಎಚ್.ಡಿ. ಕುಮಾರಸ್ವಾಮಿ ಅವರು ಕೆರೆಗಳ ಒತ್ತುವರಿ ಬಗ್ಗೆ ಸಮಗ್ರ ವರದಿಯನ್ನೇ ಸರ್ಕಾರದ ಮುಂದಿಟ್ಟಿದ್ದರು. ಇದಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನ ಸಮಿತಿಯನ್ನೂ ರಚಿಸಿದ್ದಾರೆ. ಅಲ್ಲದೆ, ಒತ್ತುವರಿ ತೆರವಿಗೂ ಮುಂದಾದರು. ಅದಾದ ನಂತರ, ಕೆರೆ ಒತ್ತುವರಿಯಲ್ಲಿ ಮನೆ ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕೆಂದು ಕುಮಾರಸ್ವಾಮಿ ಹೋರಾಟ ನಡೆಸಿದರು.
ಒತ್ತುವರಿ ಜಾಗಕ್ಕೆ ತೆರಳಿ, ಸಂತ್ರಸ್ತರ ಮನವಿ ಆಲಿಸಿ, ಅವರಿಗೆ ಸರ್ಕಾರ ಮನೆ ನೀಡಬೇಕೆಂದು ಆಗ್ರಹಿಸಿದ್ದರು. ಅದಕ್ಕೂ ಸರ್ಕಾರದಲ್ಲಿ ಮನ್ನಣೆ ಸಿಕ್ಕಿದೆ. ಹೀಗಾಗಿ, ಈ ಎಲ್ಲ ಪ್ರತಿಫಲಗಳ `ಕ್ರೆಡಿಟ್' ಪಡೆದುಕೊಳ್ಳಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಇದೆಲ್ಲ ತಯಾರಿ ನಂತರ, ಪಕ್ಷದಲ್ಲಿನ ಒಡಕನ್ನೂ ಸರಿಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ. ಹಿಂದಿನ ಎಲ್ಲ ಅಸಮಾಧಾನಗಳನ್ನು ಬದಿಗಿಟ್ಟು ಜಮೀರ್ ಅಹಮದ್‍ರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಈ ಸಲ ದೇವೆಗೌಡರ ಮಾತನ್ನು ಉಲ್ಲಂಘಿಸದೇ ಪೂರ್ತಿ ಪಾಲಿಸಲೂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಹೀಗಾಗಿ ಬಿಬಿಎಂಪಿ ಚುನಾವಣೆಯಲ್ಲಿ ತಂತ್ರ-ಪ್ರತಿತಂತ್ರಗಳನ್ನು ದೇವೇಗೌಡರೇ ರೂಪಿಸಲಿದ್ದು, ಕುಮಾರಸ್ವಾಮಿ ಅವರನ್ನು ಕಾರ್ಯಕರೂಪಕ್ಕೆ ತರಲಿದ್ದಾರೆ.
250 ಸದಸ್ಯರ ಅರ್ಜಿ ಕಡ್ಡಾಯ
ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗುವ ವ್ಯಕ್ತಿ ಅರ್ಜಿಗೆ ರು.200 ಸಲ್ಲಿಸಿದರೆ ಸಾಕು; ಆದರೆ, ಪಕ್ಷಕ್ಕೆ 250 ಸದಸ್ಯರನ್ನು ಮಾಡುವುದು ಮಾತ್ರ ಕಡ್ಡಾಯ. ಬೆಂಗಳೂರು ವ್ಯಾಪ್ತಿಯಲ್ಲಿ ಜೆಡಿಎಸ್ ಸದಸ್ಯರ ಸಂಖ್ಯೆಯನ್ನು ವೃದಿಟಛಿಗೊಳಿಸುವ ಉದ್ದೇಶದಿಂದ ಜೆಡಿಎಸ್ ಇಂತಹ ಯೋಜನೆ ರೂಪಿಸಿದೆ. ಬೆಂಗಳೂರಿನಲ್ಲಿ ಸುಮಾರು 8 ಸಾವಿರ ಸದಸ್ಯರು ಜೆಡಿಎಸ್‍ಗಿದ್ದಾರೆ. ಈ ಬಿಬಿಎಂಪಿ ಚುನಾವಣೆಯಲ್ಲಿ ಈ ಸಂಖ್ಯೆಯನ್ನು 75 ಸಾವಿರಕ್ಕೆ ಹೆಚ್ಚಿಸುವುದು ಜೆಡಿಎಸ್ ಗುರಿ ಎನ್ನುತ್ತಾರೆ ನಗರ ಘಟಕದ ಅಧ್ಯಕ್ಷ ಆರ್. ರತನ್ ಸಿಂಗ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


