ಸಂಪುಟ ನಂದೇ ನಿರ್ಧಾರ: ಸಿಎಂ
ನಾನು ದೆಹಲಿಯಲ್ಲಿ ಪಕ್ಷದ ವರಿಷ್ಠರ ಜತೆ ಈ ಬಾರಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಈ ಸಂದರ್ಭದಲ್ಲಿ ವರಿಷ್ಠರ ಜತೆ ಮಾತನಾಡಿದ್ದೇನೋ ಹೌದು. ಆದರೆ, ಸಂಪುಟದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ...

ಮೈಸೂರು: ನಾನು ದೆಹಲಿಯಲ್ಲಿ ಪಕ್ಷದ ವರಿಷ್ಠರ ಜತೆ ಈ ಬಾರಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಈ ಸಂದರ್ಭದಲ್ಲಿ ವರಿಷ್ಠರ ಜತೆ ಮಾತನಾಡಿದ್ದೇನೋ ಹೌದು. ಆದರೆ, ಸಂಪುಟದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಮೂಲಕ ಉಪ ಮುಖ್ಯಮಂತ್ರಿ, ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ 9 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಿತು. ನಾನೂ ಭಾಗವಹಿಸಿದ್ದೆ, ಅಲ್ಲಿ ಬೇರೆ ವಿಷಯಗಳನ್ನು ನಾನು ಈ ಸಂದರ್ಭದಲ್ಲಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ನಾನು ವರಿಷ್ಠರ ಜತೆ ಏನು ಮಾತನಾಡಿದ್ದೇನೆ ಎಂಬುದನ್ನು ಇಲ್ಲಿ ಬಹಿರಂಗಪಡಿಸುವ ಅಗತ್ಯ ವಿಲ್ಲ. ಮೇಲಾಗಿ ಸಚಿವ ಸಂಪುಟ ಪುನಾರಚನೆ ಎಂಬುದು ಮುಖ್ಯ ಮಂತ್ರಿಗಳ ಪರಮಾಧಿಕಾರ. ನಾನು ಅದನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಆದರೆ, ಹೈಕಮಾಂಡ್ ಜತೆ ಚರ್ಚಿಸಿ ವಿಸ್ತರಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸೇಡಿನ ರಾಜಕಾರಣ:
ಕಾವೇರಿ ನದಿಗೆ ಕಲುಷಿತ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ರಾಜ್ಯದ ವಿರುದ್ಧ ಸುಪ್ರೀಂ ಕೋರ್ಟ್ ನ ಹಸಿರುಪೀಠಕ್ಕೆ ದೂರು ನೀಡಿದೆ. ಈ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ. ಆದರೆ, ನಾವು ಇದಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡಲಿದ್ದೇವೆ ಎಂದು ಹೇಳಿದ ಅವರು, ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಕೊಡಿಸುವ ಸಂಬಂಧ ಕಬ್ಬು ಬೆಳೆಗಾರರ ಜತೆ ಮಾತುಕತೆಗೆ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಹೆಸರು ರಾಜಕಾರಣ: ಕೇಂದ್ರ ಸರ್ಕಾರವು ಹಲವು ಯೋಜನೆಗಳ ಹೆಸರುಗಳನ್ನು ಬದಲಿಸುವ ಮೂಲಕ ರಾಜಕಾರಣ ಮಾಡಲು ಹೊರಟಿದೆ. ರಾಜೀವ್ ಹೆಸರಿನಲ್ಲಿರುವ ಯೋಜನೆಗಳನ್ನು ಬದಲಿಸುತ್ತಿರುವುದು ಸರಿಯಲ್ಲ. ಅದೇ ಯೋಜನೆಗಳನ್ನು ಬೇರೆ ಹೆಸರಿನಲ್ಲಿ ಜಾರಿ ಮಾಡುವುದು ರಾಜಕಾರಣವಲ್ಲದೇ ಮತ್ತೇನು. ರಾಜೀವ್ ಆವಾಸ್ ಯೋಜನೆಯಲ್ಲಿ ಮಂಜೂರಾತಿ ನೀಡಬೇಡಿ. ಹಾಲಿ ಪ್ರಗತಿಯಲ್ಲಿರುವ ಈ ಯೋಜನೆಯ ಕಾಮಗಾರಿಗಳನ್ನು ಶೀಘ್ರ ಮುಗಿಸಬೇಕು ಎಂದು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದೆ ಎಂದು ಅವರು ಹೇಳಿದರು.
ಜೈಲಿಗೆ ಹೋದವರ ಬಾಯಲ್ಲಿ ಈಮಾತು!:
ರಾಜ್ಯದಲ್ಲಿ ಅಕ್ರಮ ಲಾಟರಿ, ಕ್ರಿಕೆಟ್ ಬೆಟ್ಟಿಂಗ್, ಮರಳುದಂಧೆಗೆ ನಾನು ಹಾಗೂ ಗೃಹ ಸಚಿವ ಕೆ.ಜೆ. ಜಾರ್ಜ್ ಬೆಂಬಲ ನೀಡುತ್ತಿದ್ದೇವೆ. ನಾವು ಜೈಲಿಗೆ ಹೋಗುವವರೆಗೂ ಇದು ನಿಲ್ಲುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.ಜೈಲಿಗೆ ಹೋಗಿ ಬಂದವರ ಬಾಯಲ್ಲಿ ಈ ಮಾತು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ದಂಧೆಗಳಿಗೆ ಕಡಿವಾಣ ಹಾಕಿದ್ದೇವೆ. ಒಂದಂಕಿ ಲಾಟರಿಯನ್ನು ಸಿಬಿಐ ತನಿಖೆಗೆ ವಹಿಸಿದ್ದೇವೆ. ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿಯವರು ಯಾವುದಾದರೂ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟಿದ್ದು: ಪರಮ್
ಬೆಂಗಳೂರು: ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವುದಕ್ಕೆ ದೆಹಲಿಗೆ ಹೋಗಿಲ್ಲ. ಸಂಪುಟ ವಿಸ್ತರಣೆ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು. ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟರು ಇದ್ದಾರೆ ಎಂದು ಎಸ್ಪಿ ಸೋನಿಯಾ ನಾರಂಗ್ ಅವರು ಸರ್ಕಾರಕ್ಕೆ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


