ಇನ್ನು ಕ್ಯೂ ನಿಲ್ಲಂಗಿಲ್ಲ: ಸ್ವಯಂಚಾಲಿತ ಯಂತ್ರದಲ್ಲಿ ರೈಲ್ವೆ ಪ್ರಯಾಣ ಟಿಕೆಟ್ ಲಭ್ಯ
ಸ್ವಯಂ ಚಾಲಿತ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ವಿತರಣಾ ಯಂತ್ರ ಮಾದರಿಯಲ್ಲಿ ಇನ್ನು ಮುಂದೆ ಪ್ರಯಾಣದ ಟಿಕೆಟ್ ಕೂಡಾ ಸ್ವಯಂ ಚಾಲಿತ ಯಂತ್ರಗಳಲ್ಲಿ ಲಭ್ಯವಾಗಲಿವೆ. ರೈಲು ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಪ್ರಯಾಣಿಕರು ಸರತಿ ನಿಲ್ಲುವುದು ಹಾಗೂ ಕೌಂಟರ್‍ಗಳಲ್ಲಿ ಒತ್ತಡ ತಪ್ಪಿಸಲು...
ಬೆಂಗಳೂರು: ಸ್ವಯಂ ಚಾಲಿತ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ವಿತರಣಾ ಯಂತ್ರ ಮಾದರಿಯಲ್ಲಿ ಇನ್ನು ಮುಂದೆ ಪ್ರಯಾಣದ ಟಿಕೆಟ್ ಕೂಡಾ ಸ್ವಯಂ ಚಾಲಿತ ಯಂತ್ರಗಳಲ್ಲಿ ಲಭ್ಯವಾಗಲಿವೆ.
ರೈಲು ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಪ್ರಯಾಣಿಕರು ಸರತಿ ನಿಲ್ಲುವುದು ಹಾಗೂ ಕೌಂಟರ್‍ಗಳಲ್ಲಿ ಒತ್ತಡ ತಪ್ಪಿಸಲು ಈ ಸ್ವಯಂ ಚಾಲಿತ ಯಂತ್ರಗಳು ನೆರವಾಗಲಿವೆ. ಕಳೆದ ರೈಲ್ವೆ ಬಜೆಟ್‍ನಲ್ಲಿ ಸ್ವಯಂ ಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು ಅಳವಡಿಸುವುದು ಘೋಷಣೆಯಾಗಿತ್ತು. ಹೀಗಾಗಿ, ಈ ಯಂತ್ರಗಳ ಖರೀದಿ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಬೆಂಗಳೂರು ವಿಭಾಗದ ನಗರ ರೈಲು ನಿಲ್ದಾಣ, ಯಶವಂತಪುರ, ಕಂಟೋನ್ಮೆಂಟ್, ಕೆಂಗೇರಿ ನಿಲ್ದಾಣಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಪಿಕೆ ಸಕ್ಸೇನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟಿಕೆಟ್ ಯಂತ್ರಗಳ ಜತೆಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಮೆಟ್ರೋ ರೈಲು ಮಾದರಿಯಲ್ಲಿ ಸ್ಮಾರ್ಟ್
ಕಾರ್ಡ್ ವಿತರಿಸಲಾಗುತ್ತದೆ. ಒಮ್ಮೆ ಕನಿಷ್ಠ ರು.100 ಹಾಗೂ ಗರಿಷ್ಠ ರು.500 ಹಣ ಪಾವತಿಸಿ ಸ್ಮಾರ್ಟ್‍ಕಾರ್ಡ್‍ಗೆ ರಿಚಾರ್ಜ್ ಮಾಡಿಸಿಕೊಳ್ಳಬಹುದು. ಬಳಿಕ ಸ್ವಯಂ ಚಾಲಿತ ಟಿಕೆಟ್ ವಿತರಣ ಯಂತ್ರದಲ್ಲೇ ಎಟಿಎಂ ಕಾರ್ಡ್‍ನಂತೆ ಸ್ಮಾರ್ಟ್ ಕಾರ್ಡ್‍ನ್ನು ಸ್ವೈಪ್ ಮಾಡಿ ಟಿಕೆಟ್ ಪಡೆಯಬಹುದು. ಈ ಸೌಲಭ್ಯಗಳು ಇನ್ನು 2 ತಿಂಗಳಲ್ಲಿ ಜಾರಿಗೆ ಬರಲಿವೆ ಎಂದರು.
ರೈಲ್ವೆ ಪ್ರಯಾಣಿಕರು ಹಾಗೂ ಗ್ರಾಹಕರ ಬೇಡಿಕೆಗಳ ಬಗ್ಗೆ ತಿಳಿಯಲು ನೈಋತ್ಯ ರೈಲ್ವೆ ಅಧಿಕಾರಿಗಳು ಕಳೆದ 15 ದಿನಗಳಿಂದ ವಿಶೇಷ ಕಾರ್ಯಕ್ರಮ ನಡೆಸಿದರು. ಈ ವೇಳೆ ರೈಲುಗಳು, ನಿಲ್ದಾಣಗಳಲ್ಲಿ ತೆರಳಿ ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದರು. ಪ್ಯಾಸೆಂಜರ್ ರೈಲುಗಳಲ್ಲಿ ಕೆಲವು ಸಮಯದ ಪ್ರಯಾಣದ ನಂತರ ನೀರು ಖಾಲಿಯಾಗುತ್ತದೆ. ಹೀಗಾಗಿ, ರೈಲು ಪ್ರಯಾಣದ ಪೂರ್ಣ ಅವ„ಯವರೆಗೂ ನೀರಿನ ಸೌಲಭ್ಯ ಕಲ್ಪಿಸುವುದು.
ರಾತ್ರಿ ವೇಳೆ ಸಣ್ಣ ನಿಲ್ದಾಣಗಳಲ್ಲಿ ಎಕ್ಸ್ ಪ್ರೆಸ್ ರೈಲುಗಳು ನಿಂತಾಗ ಅಲ್ಲಿ, ತಿಂಡಿ ಹಾಗೂ ಕಾಪಿs ವ್ಯವಸ್ಥೆ ಇರುವುದಿಲ್ಲ ಎನ್ನುವ ದೂರುಗಳು ಬಂದಿವೆ. ಎಲ್ಲಾ ನಿಲ್ದಾಣಗಳಲ್ಲೂ ಕೋಚ್‍ಗಳಿಗೆ ನೀರು ತುಂಬಿಸುವ ಸೌಲಭ್ಯವಿಲ್ಲ. ಹೀಗಾಗಿ, ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕ್ಯಾಟರಿಂಗ್ ಸೇರಿ ವಿವಿಧ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಎಟಿಎಂ ಮಾದರಿಯ ಯಂತ್ರ
ಯಂತ್ರಗಳ ಅಳವಡಿಕೆಗಾಗಿ ಜಾಗ ಗುರುತಿಸಲಾಗಿದೆ. ರೈಲು ನಿಲ್ದಾಣದ ಆವರಣದಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಸಮಾಪದ ಪ್ರಯಾಣ ಮಾಡುವವರಿಗೆ ಇದು ಅನುಕೂಲವಾಗಲಿದೆ. ಎಟಿಎಂ ಯಂತ್ರದ ಮಾದರಿಯಲ್ಲಿರುವ ಸ್ವಯಂ ಚಾಲಿತ ಟಿಕೆಟ್ ವಿತರಣ ಯಂತ್ರಗಳ ಬಗ್ಗೆ ಪ್ರಯಾಣಿಕರಿಗೆ ತಿಳಿದುಕೊಳ್ಳಲು ಅನುಕೂಲವಾಗುವಂತೆ ಆರಂಭದ 3 ತಿಂಗಳು ನಿವೃತ್ತ ರೈಲ್ವೆ ಉದ್ಯೋಗಿಗಳನ್ನು ಯಂತ್ರಗಳ ಬಳಿ ನಿಯೋಜಿಸಲಾಗುತ್ತದೆ. ಅವರು ಟಿಕೆಟ್ ಪಡೆಯುವುದನ್ನು ವಿವರಿಸುತ್ತಾರೆ.
ಬಳಿಕ ಪ್ರಯಾಣಿಕರು ತಾವಾಗಿಯೇ ಟಿಕೆಟ್ ಖರೀದಿಸಬಹುದು. ಪ್ರಯಾಣ ಮಾಡುತ್ತಿರುವ ರೈಲಿನ ಸಂಖ್ಯೆ ನಮೂದಿಸಿದರೆ ಎಲ್ಲಿಂದ, ಎಲ್ಲಿಗೆ ಎನ್ನುವ ಚಾರ್ಟ್ ಕಂಪ್ಯೂಟರ್ ಪರದೆ ಮೇಲೆ ಮೂಡತ್ತದೆ. ಆಗ ಪ್ರಯಾಣಿಕರು ಅವುಗಳ ಮೇಲೆ ಕ್ಲಿಕ್ ಮಾಡಿದರೆ, ಪ್ರಯಾಣದ ದರ ನಮೂದಾಗಲಿದೆ. ಅಷ್ಟು ಹಣವನ್ನು ಯಂತ್ರಕ್ಕೆ ಹಾಕಿ ಟಿಕೆಟ್ ಪಡೆದುಕೊಳ್ಳಬಹುದು. ಈ ವ್ಯವಸ್ಥೆ ಮುಂಗಡವಾಗಿ ಕಾಯ್ದಿರಿಸುವ ಪ್ರಯಾಣಕ್ಕೆ ಅನ್ವಯವಾಗುವುದಿಲ್ಲ ಎಂದು ನೈಋತ್ಯ ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಡಾ.ಅನೂಪ್ ದಯಾನಂದ್ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

