ಬಿಬಿಎಂಪಿ ಮೀಸಲು ಪಟ್ಟಿ ತಕರಾರನ್ನು ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳಿ : ಹೈಕೋರ್ಟ್
ಬಿಬಿಎಂಪಿ ಚುನಾವಣೆ ಮೀಸಲು ಪಟ್ಟಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ನ ನ್ಯಾ.ನಾಗರತ್ನ ಅವರ ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಆದೇಶಿಸಿದ್ದಾರೆ.

ಬೆಂಗಳೂರು : ಬಿಬಿಎಂಪಿ ಚುನಾವಣೆ ಮೀಸಲು ಪಟ್ಟಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ನ ನ್ಯಾ.ನಾಗರತ್ನ ಅವರ ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಆದೇಶಿಸಿದ್ದಾರೆ.
ಮೇ.31 ರೊಳಗೆ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ನಡೆಸಬೇಕು. ಬಿಬಿಎಂಪಿ ಚುನಾವಣೆಗೆ 2001 ರ ಜನಗಣತಿ ಆಧರಿಸಿ ಮೀಸಲುಪಟ್ಟಿ ನಿಗದಿಪಡಿಸಿ ಮೇ.31 ರ ಒಳಗಾಗಿ ಚುನಾವಣೆ ನಡೆಸುವಂತೆ ನ್ಯಾ.ಬಿ.ವಿ ನಾಗರತ್ನ ಅವರಿದ್ದ ಪೀಠ ರಾಜ್ಯ ಚುನಾವಣಾ ಆಯೋಗಕ್ಕೆ ಕಳೆದ ಮಾರ್ಚ್ 30 ರಂದು ನಿರ್ದೇಶನ ನೀಡಿತ್ತು. ಆದೇಶವನ್ನು ಪ್ರಶ್ನಿಸಿದ್ದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ, ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿ, 2011 ರ ಜನಗಣತಿ ಆಧಾರದ ಮೇಲೆ ಮೀಸಲು ಪಟ್ಟಿ ಸಿದ್ಧಪಡಿಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಕೋರಿತ್ತು.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್ ಪೊನ್ನಣ್ಣ, ಚುನಾವಣೆಗೆ 2011 ರ ಜನಗಣತಿ ಪ್ರಕಾರವೇ ಮೀಸಲು ಪಟ್ಟಿ ಪ್ರಕಟಿಸಲು ಸರ್ಕಾರ ಸಿದ್ಧವಿದೆ. ಆದರೆ ಸೂಕ್ತ ಸಮಯದಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶಿಸಿರುವ ನ್ಯಾ.ನಾಗರತ್ನ ಅವರ ಆದೇಶದಲ್ಲಿ ಮೀಸಲು ವಿವರ ಸ್ಪಷ್ಟವಾಗಿಲ್ಲ ಎಂದು ನ್ಯಾ. ರಾಘವೇಂದ್ರ ಸಿಂಗ್ ಚೌವ್ಹಾಣ್ ಅವರಿದ್ದ ಪೀಠಕ್ಕೆ ತಿಳಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಏಕ ಸದಸ್ಯ ಪೀಠದ ಆದೇಶದ ನಂತರವೂ ನೀವು ಚುನಾವಣೆಗೆ ಮುಂದಾಗಲೇ ಇಲ್ಲ. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಹೋದಿರಿ, ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗ ನೋಡಿದರೆ ಮೀಸಲು ತಕರಾರಿನಲ್ಲಿ 2011 ರ ಜನಗಣತಿ ಪ್ರಕಾರವೇ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದ್ದೀರಿ, ನಾವು ತಾಳ ಹಾಕಬೇಕು ನೀವು ಕುಣಿಯಬೇಕು ಆಗಾಗ್ಗೆ ಹೊಸ ರಾಗ ಗಳನ್ನೂ ಹುಡುಕಬೇಕೆ? ಎಂದು ನ್ಯಾಯಮೂರ್ತಿ ಚೌವ್ಹಾಣ್ ಸರ್ಕಾರದ ವಕೀಲರನ್ನು ಪ್ರಶ್ನಿಸಿದರು.
ಅಲ್ಲದೇ ತನ್ನದೇ ಮಿತಿಯಲ್ಲಿ ಪೀಠ ವಿಚಾರಣೆ ನಡೆಸುತ್ತಿರುವುದರಿಂದ ಈ ಹಿಂದೆ ಆದೇಶ ನೀಡಿದ್ದ ನ್ಯಾ.ನಾಗರತ್ನ ಅವರ ಏಕಸದಸ್ಯ ಪೀಠದ ಮುಂದೆಯೇ ಹೋಗಿ ಹೊಸದಾಗಿ ಅರ್ಜಿ ಸಲ್ಲಿಸಿ ಬಗೆಹರಿಸಿಕೊಳ್ಳಿ ಎಂದು ಆದೇಶ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


