ಕನ್ನಡಿಗರು, ಕನ್ನಡ ಬಲ್ಲವರಿಗೆ ಬಿಬಿಎಂಪಿ ಟಿಕೆಟ್ ಕೊಡಿ: ಮುಖ್ಯಮಂತ್ರಿ ಚಂದ್ರು
ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕನ್ನಡಿಗರು ಹಾಗೂ ಕನ್ನಡಬಲ್ಲ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಕನ್ನಡಿಗರ ಆಯ್ಕೆ ಜಾಗೃತಿ...

ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕನ್ನಡಿಗರು ಹಾಗೂ ಕನ್ನಡಬಲ್ಲ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಕನ್ನಡಿಗರ ಆಯ್ಕೆ ಜಾಗೃತಿ ಸಮಿತಿ ಸಂಚಾಲಕ ಮುಖ್ಯಮಂತ್ರಿ ಚಂದ್ರು ಎಲ್ಲ ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರುನಾಡಿನ ಸಂಸ್ಕೃತಿಯನ್ನು ಗೌರವಿಸುವ ಹಾಗೂ ಕನ್ನಡದಲ್ಲಿ ಓದಲು, ಬರೆಯಲು ಬರುವವರಿಗೆ ಮಾತ್ರ ಟಿಕೆಟ್ ನೀಡಬೇಕು.
ಇಲ್ಲವಾದಲ್ಲಿ ಬೆಂಗಳೂರು ಕನ್ನಡಿಗರ ಕೈತಪ್ಪಲಿದೆ. ಮತದಾರರು ಸಹ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಚುನಾವಣೆಗೆ ಸ್ಪರ್ಧಿಸುವವರು ಭಾರತದ
ಯಾವುದೇ ರಾಜ್ಯದವರಾದರೂ ಸರಿ. ಆದರೆ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಗೊತ್ತಿರಬೇಕು. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಬೇಕು ಎಂದರು.
ಕನ್ನಡಿಗರಿಗೇ ಮತ ಹಾಕಿ: ಚುನಾವಣೆ ದಿನಾಂಕ ನಿಗದಿಯಾದ ನಂತರ ಮತದಾರರಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುವುದು. ಕನ್ನಡ ಗೊತ್ತಿರುವ ಅಭ್ಯರ್ಥಿಗಳಿಗೇ ಮತ ಹಾಕುವಂತೆ ಎಚ್ಚರಿಸಲಾಗುವುದು. ಹಾಗಾಗಿ ನಗರದ 198 ವಾರ್ಡ್ಗಳಲ್ಲೂ ಕನ್ನಡದ ಹಾಡುಗಳನ್ನು ಹಾಕಿ, ವಾಹನಗಳಲ್ಲಿ ಸಂಚರಿಸುವ ಮೂಲಕ ಸಮಿತಿ ಜನರಲ್ಲಿ ಜಾಗೃತಿ ಮೂಡಿಸಲಿದೆ. ಕನ್ನಡಿಗರಿಗೆ ಟಿಕೆಟ್ ನೀಡದೆ ವಂಚಿಸಿರುವ ಹಾಗೂ ಕನ್ನಡ ಪರ ಚುನಾವಣಾ ಪ್ರಣಾಳಿಕೆ ಮಂಡಿಸಿಲ್ಲದ ಪಕ್ಷಗಳ ವಿರುದ್ಧ (ಅಭ್ಯರ್ಥಿಗಳ) ಪ್ರಚಾರ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಕನ್ನಡ ನಾಡು ರಚನೆಯಾಗಿ ಆರು ದಶಕ ಕಳೆದರೂ ಬೆಂಗಳೂರಿನಲ್ಲಿ ಕನ್ನಡ ವ್ಯಾಪಕವಾಗಿ ಕೇಳುತ್ತಿಲ್ಲ. ನಗರದ ಸಾಕಷ್ಟು ಬಡಾವಣೆಗಳಲ್ಲಿ ಕನ್ನಡ ಮರೆಯಾಗಿದೆ. ಪರಭಾಷೆಯೇ ಮೇಲುಗೈ ಸಾಧಿಸಿದೆ. `ಕನ್ನಡ ಅನಾಥ; ಕನ್ನಡ ಅತಂತ್ರ' ಸ್ಥಿತಿ ತಲುಪಿದೆ. ಇದು ಹೀಗೆಯೇ ಮುಂದುವರಿದಲ್ಲಿ ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗುತ್ತದೆ. `ಮಾಯಾನಗರಿ' ಬೆಂಗಳೂರಿನಲ್ಲಿ ಕನ್ನಡ ಮಾಯವಾಗುವ ಆತಂಕ ಕಾಡುತ್ತಿದೆ. ಹಾಗಾಗಿ ಕನ್ನಡಪರ ಸಂಘಟನೆಗಳು ಒಟ್ಟುಗೂಡಿ ಕನ್ನಡಿಗರ ಆಯ್ಕೆ ಜಾಗೃತಿ ಸಮಿತಿ ರಚಿಸಿವೆ.
ಈ ಮೂಲಕ ಜನರಲ್ಲಿ ಅರಿವು ಮೂಡಿಸಿ, ಕನ್ನಡ ಉಳಿಸಲು ಮುಂದಾಗಿವೆ ಎಂದರು. ಗೋಷ್ಠಿಯಲ್ಲಿ ನಾಟಕಕಾರ ಬಿ.ವಿ. ರಾಜಾರಾಂ, ಕನ್ನಡ ಪರ ಹೋರಾಟಗಾರರಾದ ರಾ.ನಂ. ಚಂದ್ರಶೇ ಖರ್, ಕೆಎಸ್ಆರ್ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ. ಚನ್ನೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


