ಬಡ್ಡಿ ಕೃಷ್ಣಪ್ಪನ ಕೊಲೆ: ಸಿಕ್ಕಿಬಿದ್ದ ಆರೋಪಿ
ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ ಮತ್ತಿಕೆರೆ ಎಚ್ ಎಂಟಿ ಬಡಾವಣೆ ಕೃಷ್ಣಪ್ಪ (54) ಅಲಿಯಾಸ್ ಬಡ್ಡಿ ಕೃಷ್ಣಪ್ಪ ಎಂಬಾತನನ್ನು ಆತ ಧರಿಸುತ್ತಿದ್ದ ಕೆಜಿಗಟ್ಟಲೇ ಚಿನ್ನಾಭರಣ ದೋಚುವ ಉದ್ದೇಶದಿಂದ ಹತ್ಯೆಗೈದು ಶವ ಹೂತು ಹಾಕಿದ್ದ ಆರೋಪಿಯೊಬ್ಬನನ್ನು ಯಶವಂತಪುರ ಪೊಲೀಸರು...

ಬೆಂಗಳೂರು: ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ ಮತ್ತಿಕೆರೆ ಎಚ್ ಎಂಟಿ ಬಡಾವಣೆ ಕೃಷ್ಣಪ್ಪ (54) ಅಲಿಯಾಸ್ ಬಡ್ಡಿ ಕೃಷ್ಣಪ್ಪ ಎಂಬಾತನನ್ನು ಆತ ಧರಿಸುತ್ತಿದ್ದ ಕೆಜಿಗಟ್ಟಲೇ ಚಿನ್ನಾಭರಣ ದೋಚುವ ಉದ್ದೇಶದಿಂದ ಹತ್ಯೆಗೈದು ಶವ ಹೂತು ಹಾಕಿದ್ದ ಆರೋಪಿಯೊಬ್ಬನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ಮೂಲದ ಪುನೀತ್(20) ಬಂಧಿತ ಆರೋಪಿ. ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳಾದ ಅಣ್ಣಗೆರೆಯ ಸೋಮಶೇಖರ್ ಹಾಗೂ ಚಂದ್ರಶೇಖರ್ ಎಂಬುವರು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ಮಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತಿಕೆರೆ ಎಚ್‍ಎಂಟಿ ಬಡಾವಣೆಯಲ್ಲಿ ವಾಸವಿದ್ದ ಕೃಷ್ಣಪ್ಪ, ಹಾಲು ಪಾರಿಯಾಗಿದ್ದ. ಕಳೆದ 30 ವರ್ಷಗಳಿಂದ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಮೀಟರ್ ಬಡ್ಡಿ ದಂಧೆಯಿಂದ ಕುಖ್ಯಾತನಾಗಿದ್ದ. ಹೀಗಾಗಿ, ಈತನನ್ನು ಬಡ್ಡಿ ಕೃಷ್ಣಪ್ಪ ಎಂದೇ ಕರೆಯುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಕೃಷ್ಣಪ್ಪ ಮೈಮೇಲೆ ಕೆಜಿಗಟ್ಟಲೇ ಚಿನ್ನಾಭರಣ ಧರಿಸುವ ವ್ಯಾಮೋಹ ಬೆಳೆಸಿಕೊಂಡಿದ್ದ.
ಕೃಷ್ಣಪ್ಪನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಆದರೆ, ಪತ್ನಿ ಮಕ್ಕಳೊಂದಿಗೆ ನೆಲೆಸದೆ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ವಾಸವಿದ್ದ. ಈತನಿಗೆ ಕುಣಿಗಲ್ ಸಮೀಪದ ಪುಟ್ಟೇನಹಳ್ಳಿ ಹಾಗೂ ಅಂದರಗೆರೆಯಲ್ಲಿ ವಾಸವಿದ್ದ ಸೋಮಶೇಖರ್, ಚಂದ್ರಶೇಖರ್ ಹಾಗೂ ಪುನಿತ್ ಎಂಬುವರ ಪರಿಚಯವಾಗಿತ್ತು. ಮೂವರು ಆರೋಪಿಗಳು ಕೃಷ್ಣಪ್ಪ ಯಾವಾಗಲೂ ಮೈ ಮೇಲೆ ಕೆಜಿಗಟ್ಟಲೆ ಚಿನ್ನಾಭರಣ ಧರಿಸುತ್ತಿದ್ದ ಕಾರಣ ಅದರ ಮೇಲೆ ಕಣ್ಣು ಹಾಕಿದ್ದರು. ಊರಿನಲ್ಲಿ ಟ್ರ್ಯಾಕ್ಟರ್ ಡ್ರೈವರ್ ಗಳಾಗಿದ್ದ ಇವರು, ಸ್ವಂತ ಟ್ರ್ಯಾಕರ್ ಖರೀದಿಸಿ ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸಲು ಕೃಷ್ಣಪ್ಪನ ಮೈ ಮೇಲಿನ ಚಿನ್ನ ದೋಚಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದಿಚುಂಚನಗಿರಿಗೆ ಕರೆದೊಯ್ದರು:
ಕೋಟ್ಯಂತರ ಆಸ್ತಿ ಹೊಂದಿದ್ದರೂ ಹಣದ ತೀವ್ರ ವ್ಯಾಮೋಹ ಹೊಂದಿದ್ದ ಕೃಷ್ಣಪ್ಪನಿಗೆ ಪುಸಲಾಯಿಸಿದ ಆರೋಪಿಗಳು, ಕುಣಿಗಲ್ ಬಳಿಯ ದೇವ ದೇವಸ್ಥಾನವೊಂದರಲ್ಲಿ ಪೂಜೆ ಮಾಡಿಸಿದರೆ ಹೆಚ್ಚು ಹೆಚ್ಚು ಹಣ ಸಂಪಾದಿಸಬಹುದು ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿದ ಕೃಷ್ಣಪ್ಪ ಮೂವರ ಜತೆ ಜೂ.27 ರಂದು ಪ್ರವಾಸಕ್ಕೆ ಹೋಗಿದ್ದ. ಮೊದಲು ಆದಿಚುಂಚನಗಿರಿ ಮಠಕ್ಕೆ ಹೋಗಿದ್ದರು. ಆದಾದ ನಂತರ ಕಾರಿನಲ್ಲಿ ಕುಣಿಗಲ್ ಬಳಿಯ ಅಮೃತೂರು ಬಳಿ ತೆರಳುವಾಗ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ. ಬಳಿಕ ಚಿನ್ನಾಭರಣವನ್ನು ದೋಚಿದ್ದರು.
ಆರೋಪಿ ಸೋಮಶೇಖರ ಅಂದರಗೆರೆ ಗ್ರಾಮದಲ್ಲಿ ಹೊಂದಿರುವ ಜಮೀನಿನಲ್ಲಿ ಜೆಸಿಬಿ ಯಂತ್ರದ ಮೂಲಕ 6 ಅಡಿ ಗುಂಡಿ ಅಗೆಸಿ ಶವವನ್ನು ಹೂತು ಹಾಕಿದ್ದರು. ದೋಚಿದ ಚಿನ್ನಾಭರಣಗಳನ್ನು ಗೋಲ್ಡ್ ಲೋನ್ ಫೈನಾನ್ಸ್ ಸಂಸ್ಥೆಗಳಲ್ಲಿ ಅಡ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿ ಬಿದ್ದಿದ್ದು ಹೇಗೆ?
ಕೃಷ್ಣಪ್ಪ ಹತ್ತು ದಿನಗಳಿಂದ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತನ ಪುತ್ರ ಮೋಹನ್, ಜು.8ರಂದು ಯಶವಂತಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೃಷ್ಣಪ್ಪನೊಂದಿಗೆ ಆರೋಪಿ ಪುನೀತ್ ಫೋನ್ ಸಂಪರ್ಕ ಹೊಂದಿರುವ ಆಧಾರದ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


