1 ಕೋಟಿ ಲೋಕಾ ಲಂಚ ಪ್ರಕರಣದ ತನಿಖೆ ಏನಾಯ್ತು?
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ 1ಕೋಟಿ ರೂಪಾಯಿ ಲಂಚ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕೆಂದು...

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ 1ಕೋಟಿ ರೂಪಾಯಿ ಲಂಚ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕೆಂದು ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಎಸ್‍ಐಟಿ ನಡೆಸುತ್ತಿರುವ ತನಿಖೆಯ 20 ದಿನದ ಪ್ರಗತಿ ಏನು ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಸೇರಿ ನಾಲ್ವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ತನಿಖೆ ಪ್ರಗತಿ ವರದಿ ಕುರಿತು ವಿವರ ಕೇಳಿತು.
ಇದಕ್ಕೆ ಉತ್ತರಿಸಿದ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ)ಕ್ಕೆ ವಹಿಸಿದೆ. ತನಿಖಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಜತೆಗೆ, ಇದೇ ಪ್ರಕರಣ ಸಂಬಂಧ ಲೋಕಾಯುಕ್ತ ಪುತ್ರ ತಕರಾರು ಅರ್ಜಿ ಸಲ್ಲಿಸಿದ್ದು, ಅದು ಮತ್ತೊಂದು ವಿಭಾಗೀಯ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. ಪ್ರಕರಣದ ಕುರಿತ ಲೋಕಾಯುಕ್ತ ಸಂಸ್ಥೆಯ ಆಂತರಿಕ ತನಿಖೆಗೆ ಆ ಪೀಠ ಈ ಹಿಂದೆ ತಡೆಯಾಜ್ಞೆ ನೀಡಿದೆ. ಮಂಗಳವಾರವೆ ಆ ಅರ್ಜಿ ಕೂಡ ವಿಚಾರಣೆಗೆ ಬರುತ್ತಿರುವುದಾಗಿ ವಿಭಾಗೀಯ ಪೀಠದ ಗಮನಕ್ಕೆ ತಂದರು.
ಪೂರ್ವಗ್ರಹ ಪೀಡಿತರಾಗಬೇಕಿಲ್ಲ: ಈ ವಾದ ಆಲಿಸಿದ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಯಾರೂ ಪೂರ್ವಗ್ರಹ ಪೀಡಿತರಾಗಬೇಕಿಲ್ಲ. ಪ್ರಕರಣ ಈಗಾಗಲೇ ನ್ಯಾ.ಎನ್.ಕುಮಾರ್ ಅವರಿದ್ದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಅದೇ ಪೀಠದಲ್ಲಿ ವಿಚಾರಣೆ ನಡೆಸುವುದು ಸೂಕ್ತ ಎಂದು ಆದೇಶಿಸಿ ಅರ್ಜಿಯನ್ನು ನ್ಯಾ.ಎನ್.ಕಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ವರ್ಗಾಯಿಸಿದೆ.
ಲೋಕಾಯುಕ್ತ ಎಸ್‍ಪಿ ಸೋನಿಯಾ ನಾರಂಗ್ ತನಿಖೆ ನಡೆಸುತ್ತಿದ್ದನ್ನು ಪ್ರಶ್ನಿಸಿ ಲೋಕಾಯುಕ್ತರ ಪುತ್ರ ವೈ.ಭಾಸ್ಕರ್ ರಾವ್ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಹೈಕೋರ್ಟ್‍ನ ವಿಭಾಗೀಯ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. ಮಂಗಳವಾರವೇ ಆ ಅರ್ಜಿ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬರಲಿದ್ದು ಅದೇ ಪೀಠದಲ್ಲೇ ಈ ಪಿಐಎಲ್ ಅರ್ಜಿ ಕೂಡ ವಿಚಾರಣೆ ನಡೆಯಲಿ ಎಂದು ಆದೇಶಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಎಫ್ಐಆರ್ ದಾಖಲಿಸಿ 20 ದಿನ ಕಳೆದರೂ ಆರೋಪಿಯನ್ನು ಬಂಧಿಸಿಲ್ಲ. ಆದ್ದರಿಂದ ವಿಶೇಷ ತನಿಖಾ ತಂಡ ಜವಾಬ್ದಾರಿಯುತವಾಗಿ ಮತ್ತು ಪ್ರಾಮಾಣಿಕವಾಗಿ ತನಿಖೆ ನಡೆಸುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಇಷ್ಟರಲ್ಲಾಗಲೇ ಯಾವುದಾದರೂ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದ್ದ ರಾಜ್ಯ ಸರ್ಕಾರ ಮೌನವಹಿಸಿರುವುದು ಸರಿಯಲ್ಲ ಎಂದು ವಾದಿಸಿದರು.
ಸಧ್ಯ ಸಂಸ್ಥೆಯ ನಡುವಳಿ ಯಾವ ಹಂತಕ್ಕೆ ತಲುಪಿದೆ ಎಂದರೆ, ಸಂಸ್ಥೆಯ ಹೆಸರು ಕೇಳಿದರೆ ಭ್ರಷ್ಟ ಅಧಿಕಾರಿಗಳು ಹೆದರಬೇಕಿತ್ತು ಆದರೆ, ಇಂದು ಪ್ರಾಮಾಣಿಕ ಅಧಿಕಾರಿಗಳು ಹೆದರುವಂತಾಗಿದೆ ಎಂದು ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ಬೇಸರ ವ್ಯಕ್ತಪಡಿಸಿದರು.
ಆದೇಶ ಬರೆಸಿದ ನಂತರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, `ಇಟ್ಸ್ ವೆರಿ ವೆರಿ ಅನ್ ಫಾರ್ಚುನೇಟ್ ಮಿಸ್ಟರ್ ಧನಂಜಯï'(ಇದು ನಿಜಕ್ಕೂ ದುರದೃಷ್ಟಕರ) ಎಂದು ಹೇಳಿಕೆ ನೀಡಿ ನಂತರ ಕೆಲ ಕಾಲ ಸಹೋದ್ಯೋಗಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಜತೆ ಗಂಭೀರವಾಗಿ ಸಮಾಲೋಚನೆ ನಡೆಸಿದರು.
ಕುಮಾರ್ ಹಿಂದೆ ಸರಿಯುವರೆ?
ಸದ್ಯ ವೈ.ಅಶ್ವಿನ್ ರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಬಿ.
ಶ್ರೀನಿವಾಸೇಗೌಡ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ಆದರೆ, ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್‍ಗೆ ಆಪ್ತರಾಗಿರುವ ನ್ಯಾ.ಎನ್. ಕುಮಾರ್ ವಿಚಾರಣೆ ನಡೆಸುವುದು ಸೂಕ್ತವಲ್ಲ. ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂಬ ಮಾತುಗಳು ವಕೀಲ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


