ಜಿಲ್ಲಾ ಸುದ್ದಿ

ಬಿಬಿಎಂಪಿ ಅಧಿಕಾರಿಗಳ ಮೇಲಿನ ಕೇಸು ರದ್ದು!

ಬಿಬಿಎಂಪಿಯ 1000ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧದ ಕೇಸುಗಳಲ್ಲಿ ಅನೇಕ ಕೇಸುಗಳನ್ನು ಸದ್ದಿಲ್ಲದೆ ಮುಚ್ಚಿ ಹಾಕಿರುವುದು..

ಬಿಬಿಎಂಪಿ ಅಧಿಕಾರಿಗಳ ಮೇಲಿನ ಕೇಸು ರದ್ದು!
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸದಸ್ಯರಿಂದ ಚರ್ಚೆ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಬಿಬಿಎಂಪಿಯ 1000ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧದ ಕೇಸುಗಳಲ್ಲಿ ಅನೇಕ ಕೇಸುಗಳನ್ನು ಸದ್ದಿಲ್ಲದೆ ಮುಚ್ಚಿ ಹಾಕಿರುವುದು ಗುರುವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಬಯಲಾಯಿತು.

ಕಳೆದ 4 ವರ್ಷಗಳಲ್ಲಿ ಬಿಬಿಎಂಪಿಯಲ್ಲಿ ನಕಲಿ ಖಾತೆ, ಕಳಪೆ ಕಾಮಗಾರಿ ಹಾಗೂ ಟೆಂಡರ್ ಅಕ್ರಮ ಸೇರಿದಂತೆ ಒಟ್ಟು 863 ಕೇಸುಗಳು ದಾಖಲಾಗಿದ್ದು, ಇದರಲ್ಲಿ 795 ಕೇಸುಗಳು ಪಾಲಿಕೆ ವ್ಯಾಪ್ತಿಯಲ್ಲಿಯೂ, 41 ಲೋಕಾಯುಕ್ತದಲ್ಲೂ ತನಿಖೆ ನಡೆಯುತ್ತಿದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ತನಿಖೆ ನಡೆಯುತ್ತಿರುವ 50ಕ್ಕೂ ಹೆಚ್ಚು ಕೇಸುಗಳನ್ನು ತನಿಖಾ ಅಧಿಕಾರಿಗಳು ಮುಚ್ಚಿ ಹಾಕಿದ್ದಾರೆ ಎಂದು ಬಿಜೆಪಿ ಸದಸ್ಯ ಎಸ್.ಹರೀಶ್ ಸಭೆಯಲ್ಲಿ ದಾಖಲೆ ಸಹಿತ ವಿವರಿಸಿದರು.

ಬಿಬಿಎಂಪಿಯ 1000ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಆಯುಕ್ತರು ಶಿಫಾರಸು ಮಾಡಿದರೂ, ಈತನಕ ಯಾವುದೇ ಕ್ರಮಕೈಗೊಂಡಿಲ್ಲ. ಇಂಥ ಆರೋಪಿಗಳ ವಿರುದ್ದ ನಡೆಯುತ್ತಿರುವ ತನಿಖೆಯನ್ನು ಕೇವಲ 6 ತಿಂಗಳಲ್ಲಿ ಪೂರ್ಣಗೊಳಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಕೆಲವು ಪ್ರಕರಣಗಳ ವಿಚಾರಣೆಯನ್ನು 2010ರಿಂದಲೂ ಮುಂದೂಡುತ್ತಾ ವಿಳಂಬ ಮಾಡಲಾಗುತ್ತಿದೆ. ಪರಿಣಾಮ ಆರೋಪಕ್ಕೆ ಗುರಿಯಾಗಿದ್ದವರು ಉತ್ತಮ ಹುದ್ದೆಗಳಲ್ಲೇ ಮುಂದುವರಿಯುತ್ತಿದ್ದಾರೆ. ಅಷ್ಟೇ ಅಲ್ಲ. ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿಯೇ ಅನೇಕ ಆರೋಪಿ ಅಧಿಕಾರಿಗಳಿಗೆ ಜವಾಬ್ದಾರಿಯುತ ಸ್ಥಾನಗಳನ್ನು ನೀಡಲಾಗಿದೆ ಎಂದು ಹರೀಶ್ ಹೇಳಿದರು.

ಕಂದಾಯ ಮತ್ತು ಕಾಮಗಾರಿ ವಿಭಾಗದಲ್ಲಿ ಹೆಚ್ಚಿನ ಅಕ್ರಮಗಳು ನಡೆದಿದ್ದು, ಇದರಲ್ಲಿ ಸಹಾಯಕ ಕಂದಾಯ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ತಪ್ಪಿತಸ್ಥರಾಗಿದ್ದರು. ಹಾಗೆಯೇ ಕಾಮಗಾರಿಗಳ ವಿಭಾಗದಲ್ಲಿ ಕಾರ್ಯಪಾಲಕ ಎಂಜಿನಿಯರ್‍ಗಳು ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳು ಆರೋಪಕ್ಕೆ ಗುರಿಯಾಗಿದ್ದಾರೆಂದು ವಿಚಾರಣಾ ವರದಿಗಳು ಹೇಳಿವೆ. ಆದರೆ ನಂತರದ ತನಿಖೆ ನಡೆಸಿ ರುವ ಅಧಿಕಾರಿಗಳು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಎಲ್ಲಾ ಪ್ರಮುಖ ಕೇಸುಗಳನ್ನು ಹರೀಶ್ ಸಭೆಯಲ್ಲಿ ವಿವರಿಸಿ, ಕೂಡಲೇ ಎಲ್ಲಾ ಕೇಸುಗಳನ್ನು ಪುನರ್ ತನಿಖೆಗೆ ಒಪ್ಪಿಸಿಬೇಕು.

ಪಾಲಿಕೆಗೆ ಕೋಟ್ಯಂತರ ನಷ್ಟ ಆಗುವುದಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಆಡಳಿತ ಪಕ್ಷದ ಸದಸ್ಯರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು. ಬಿಜೆಪಿಯ ಹಿರಿಯ ಸದಸ್ಯ ಬಿ.ವಿ.ಗಣೇಶ್ ಮಾತನಾಡಿ, ಇಷ್ಟೆಲ್ಲಾ ಅಕ್ರಮ, ಅವ್ಯವಹಾರ ನಡೆದಿದೆ ಎನ್ನುವುದಾದರೆ, ಆಡಳಿತಾಕ್ಮಕ ವರದಿಯನ್ನು ಮಂಡಿಸಿ ಎಂದು ಹೇಳಿದರು. ಆಗ ಮೇಯರ್ ಶಾಂತಕುಮಾರಿ, ಹರೀಶ್ ಅವರು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನೂ ಮಾಡಲಿಲ್ಲ. ಇದರಿಂದ
ನಾಲ್ಕು ವರ್ಷಗಳ ಅಕ್ರಮಗಳ ಆರೋಪದ ಪುನರ್ ತನಿಖೆ ವಿಚಾರ ಸದ್ದಿಲ್ಲದೆ ಮೂಲೆಗುಂಪಾಯಿತು.

ಬಿಬಿಎಂಪಿಗೆ ದೊರೆಯದ ಶಿಕ್ಷಣ ಅನುದಾನ
ಶಾಲಾ ಕಾಲೇಜುಗಳು ಸೇರಿದಂತೆ ಬಿಬಿಎಂಪಿ ನಡೆಸುತ್ತಿರುವ 152 ವಿದ್ಯಾಸಂಸ್ಥೆಗಳಿಗೆ 1989ರಿಂದಲೂ ಅನುದಾನ ಲಭಿಸಿಲ್ಲ ಎಂದು ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ದೂರಿದ್ದಾರೆ. ಪಾಲಿಕೆ ಶಿಕ್ಷಣ ಅಧಿಕಾರಿಗಳು ಹಾಗೂ ಕಲ್ಯಾಣಾಧಿಕಾರಿಗಳು ಸಕಾಲದಲ್ಲಿ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ ದಾಖಲೆಗಳನ್ನು ಒದಗಿಸದೆ ಬಿಬಿಎಂಪಿಗೆ ಈತನಕ ರು485ಕೋಟಿ ಅನುದಾನ ಕೈತಪ್ಪಿ ಹೋಗಿದೆ ಎಂದು ಅವರು ವಿವರಿಸಿದರು.

ಅಧಿಕಾರಿಗಳು ಅಗತ್ಯಕ್ಕಿಂತೆ 280 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ. ಇದರಿಂದ ಪಾಲಿಕೆಗೆ ತಿಂಗಳಿಗೆ ರು.25 ಲಕ್ಷಕ್ಕೂ ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ರಮೇಶ್ ಹೇಳಿದರು. ಆಗ ಮೇಯರ್ ಶಾಂತಕುಮಾರಿ, ವಿದ್ಯಾಧಿಕಾರಿ ಹಾಗೂ ಕಲ್ಯಾಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಸರ್ಕಾರದೊಂದಿಗೆ ವ್ಯವಹರಿಸಿ ಅನುದಾನ ಪಡೆಯುವಂತೆ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.