ಜಿಲ್ಲಾ ಸುದ್ದಿ

ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಮರೆ: ಸಂತೋಷ ಹೆಗ್ಡೆ ವಿಷಾದ

ಮಾನವೀಯ ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಬದಲು ಹಣದ ಹಿಂದೆ ಬಿದ್ದಿದ್ದು, ಪ್ರಾಮಾಣಿಕತೆ ಮರೆಯುತ್ತಿದ್ದಾರೆ ಎಂದು...

ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಮರೆ: ಸಂತೋಷ ಹೆಗ್ಡೆ ವಿಷಾದ
ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಮಾನವೀಯ ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಬದಲು ಹಣದ ಹಿಂದೆ ಬಿದ್ದಿದ್ದು, ಪ್ರಾಮಾಣಿಕತೆ ಮರೆಯುತ್ತಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ಸೆಂಟ್ರಲ್ ಬ್ಯಾಂಕ್ ಎಂಪ್ಲಾಯೀಸ್ ಕಾಂಗ್ರೆಸ್ (ಸಿಬಿಇಸಿ) ಭಾನುವಾರ ಹಮ್ಮಿಕೊಂಡಿದ್ದ 6ನೇ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ಬೋ ಫೋರ್ಸ್, ಕಾಮನ್‍ವೆಲ್ತ್, 2ಜಿ, ಎಲ್‍ಐಸಿ ಹೌಸಿಂಗ್ ಲೋನ್ ಹಗರಣ ಹೀಗೆ ಹಲವು ಹಗರಣಗಳ ದೊಡ್ಡ ಪಟ್ಟಿಯೇ ಇದೆ. ಕರ್ನಾಟಕದ ಒಂದು ವರ್ಷದ ಬಜೆಟ್ ಮೊತ್ತ ರು.1.32 ಲಕ್ಷ ಕೋಟಿ. ಆದರೆ, ಕೆಲವೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ ಇದಕ್ಕೂ ಮೀರಿರುವುದು ಆತಂಕ ಮೂಡಿಸಿದೆ ಎಂದರು.

ಮೌಲ್ಯ ಬಿತ್ತಲು ಅರಿವು: ಮಕ್ಕಳಿಗೆ ಮನೆಯಿಂದಲೇ ಒಳ್ಳೆಯ ಮಾರ್ಗದರ್ಶನ, ಬದ್ಧತೆ, ನಿಷ್ಠೆಯ ಅರಿವು ಸಿಗದ ಹೊರತು ದೇಶ ಭ್ರಷ್ಟಾಚಾರದಿಂದ ಮುಕ್ತವಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಲೋಕಾಯುಕ್ತ ಹುದ್ದೆಯಿಂದ ನಿವೃತ್ತಿ ನಂತರ, ಸುಮಾರು 1,500ಕ್ಕೂ ಹೆಚ್ಚು ಶಾಲಾ, ಕಾಲೇಜು, ಸಂಘ-ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಭ್ರಷ್ಟಾಚಾರ ತೊಲಗಿಸುವ ಕುರಿತು ಸಂವಾದ ನಡೆಸಿದ್ದೇನೆ. ಈ ಮೂಲಕ ಮಾನವೀಯ ಮೌಲ್ಯದ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.

ಎಐಸಿಬಿಇಸಿ ಬ್ಯಾಂಕಿನ ಪ್ರಧಾನ ಕಾರ್ಯದರ್ಶಿ ಸುಭಾಷ್ ಎಸ್. ಸಾವಂತ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಮಾದರಿಯಲ್ಲಿ, ಬ್ಯಾಂಕ್ ಸ್ವಚ್ಛತಾ ಅಭಿಯಾನ ಕೈಗೊಳ್ಳಬೇಕು. ಈ ಮೂಲಕ ಭ್ರಷ್ಟಾಚಾರ ಮುಕ್ತ ಬ್ಯಾಂಕ್ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಹೇಳಿದರು. ಬ್ಯಾಂಕ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್ ಮಾತನಾಡಿ, ಕಾರ್ಮಿಕರ ಹಿತ ಮರೆತು ಕಡೆಗಣಿಸಿದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ಐಎನ್‍ಟಿಯುಸಿ ಅಧ್ಯಕ್ಷ ಎನ್.ಎಂ. ಅಧ್ಯಂತಯ್ಯ, ಶಿವಕುಮಾರ್, ವಾಸ್ತಿ ವೆಂಕಟೇಶ್, ಎಚ್.ಎನ್. ಸುರೇಶ್ ಮೂರ್ತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.