ಹೈ ಮೆಟ್ಟಿಲೇರಿದ ಲೋಕಾ ರಿಜಿಸ್ಟ್ರಾರ್ ಜಾಫರ್ ನೇಮಕ
ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಧಿಕಾರಿ ಡಾ.ಪಿ.ಸಿ.ಜಾಫರ್ ಅವರನ್ನು ನೇಮಿಸಿರುವ ಸರ್ಕಾರದ ಕ್ರಮ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ...

ಬೆಂಗಳೂರು: ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಧಿಕಾರಿ ಡಾ.ಪಿ.ಸಿ.ಜಾಫರ್ ಅವರನ್ನು ನೇಮಿಸಿರುವ ಸರ್ಕಾರದ ಕ್ರಮ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಜಾಫರ್ ಅವರನ್ನು ಆ.6ರಂದು ಸರ್ಕಾರ ನೇಮಕಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ಆನಂದ ಮೂರ್ತಿ ಹೈಕೋಟ್ರ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಮಂಗಳವಾರ ನ್ಯಾ. ಎನ್.ಕುಮಾರ್ ಮತ್ತು ನ್ಯಾ.ಜಿ.ನರೇಂದರ್ ಅವರ ವಿಭಾಗೀಯ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ. ಡಾ.ಜಾಫರ್ ಅವರನ್ನು ಸರ್ಕಾರ ನೇಮಕ ಮಾಡಿ ಹೊರಡಿಸಿರುವ ಆದೇಶ ಸಂವಿಧಾನದ ಪರಿಚ್ಚೇದ 50ರ, ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಮತ್ತು ಲೋಕಾಯುಕ್ತ ಕಾಯ್ದೆ 1984ರ ವಿರುದ್ಧವಾಗಿದೆ.
ಮಾತ್ರವಲ್ಲದೇ ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಹೈಕೋರ್ಟ್ ಶಿಫಾರಸು ಮಾಡಿದ ಹೆಸರನ್ನು ಸರ್ಕಾರ ಪರಿಗಣಿಸದೆ ಬೇರೊಬ್ಬರನ್ನು ನೇಮಕ ಮಾಡಿದೆ. ವಾಸ್ತವವಾಗಿ ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದವರು ಲೋಕಾಯುಕ್ತ ಸಂಸ್ಥೆಯ ಆಡಳಿತದ ಹೊಣೆ ಹೊರಬೇಕಾಗುತ್ತದೆ. ಈ ಕಾರಣಕ್ಕಾಗಿ ಹಿಂದೆ ಕೆಲವು ವರ್ಷಗಳಿಂದ ನ್ಯಾಯಾಂಗ ಅಧಿಕಾರಿಗಳ ಸರಿಸಮಾನವಾದ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಇಂದು ಈ ನಿಯಮವನ್ನು ಗಾಳಿಗೆ ತೂರಿ ಸರ್ಕಾರ ಐಎಎಸ್ ಅಧಿಕಾರಿಯನ್ನು ನೇಮಿಸಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ದೂರುಗಳು ಬಹುತೇಕ ಐಎಎಸ್, ಐಪಿಎಸ್ ಮತ್ತು ರಾಜಕಾರಣಿಗಳದ್ದೇ ಆಗಿವೆ. ಸದ್ಯದ ಮಾಹಿತಿ ಪ್ರಕಾರ ಲೋಕಾಯುಕ್ತದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಿರುದ್ಧವೇ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಸದ್ಯ ಲೋಕಾಯುಕ್ತ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿರುವ ಜಾಫರ್ ಅವರ ವಿರುದಟಛಿವೇ ಈ ಹಿಂದೆ ಲೋಕಾಯುಕ್ತದಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ 2014 ಮತ್ತು 2015ರ ಆಸುಪಾಸಿನಲ್ಲಿ ಪ್ರಕರಣ ಇತ್ಯರ್ಥಗೊಂಡಿತ್ತು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹೀಗಿರುವಾಗ ಜಾಫರ್ ಅವರ ಪ್ರಾಮಾಣಿಕತೆಯನ್ನು ಇಲ್ಲಿ ಪ್ರಶ್ನಿಸಬೇಕಾಗುತ್ತದೆ. ಲೋಕಾಯುಕ್ತದಂತಹ ಸಂಸ್ಥೆಯಲ್ಲಿ ಸಾರ್ವಜನಿಕ ಅಧಿಕಾರಿಯನ್ನು ನೇಮಕ ಮಾಡಬೇಕಾದಲ್ಲಿ ಅವರ ಪ್ರಾಮಾಣಿಕತೆಯೂ ಅಷ್ಟೇ ಮುಖ್ಯ ಪಾತ್ರವಹಿಸುತ್ತದೆ. ಆದರೆ ಇದನ್ನು ಗಮನದಲ್ಲಿಡದೆ ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ತನ್ನ ನಿಯಂತ್ರಣದಲ್ಲಿರಬೇಕು ಎಂಬ ಪ್ರಯತ್ನಕ್ಕೆ ಕೈ ಹಾಕುವ ಮೂಲಕ ಈ ಅ„ಕಾರಿಯನ್ನು ನೇಮಿಸಿದೆ. ಸಂಸ್ಥೆಯ ಗೌರವವನ್ನು ಉಳಿಸುವ ಸಲುವಾಗಿ ಜಾಫರ್ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


