ಧವನಂನಲ್ಲಿ ಚಿನ್ನಾಭರಣ ದರೋಡೆ
ಕಾಮರಾಜ ರಸ್ತೆಯಲ್ಲಿರುವ ಪ್ರತಿಷ್ಠಿತ ಧವನಂ ಆಭರಣ ಮಾರಾಟ ಮಳಿಗೆಗೆ ತಡರಾತ್ರಿ ನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿ ,,,

ಬೆಂಗಳೂರು: ಕಾಮರಾಜ ರಸ್ತೆಯಲ್ಲಿರುವ ಪ್ರತಿಷ್ಠಿತ ಧವನಂ ಆಭರಣ ಮಾರಾಟ ಮಳಿಗೆಗೆ ತಡರಾತ್ರಿ ನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಮಳಿಗೆ ಪಕ್ಕದಲ್ಲಿರುವ ಛಾಬ್ರಿಯಾ ಸೆಲೆಕ್ಷನ್ಸ್ ಮತ್ತು ತನ್ವೀರ್ ಕಲೆಕ್ಷನ್ಸ್ ಹೆಸರಿನ ಬಟ್ಟೆ ಮಳಿಗೆಗಳ ಬಾಗಿಲು ಮುರಿದು ರೂ. 25 ಸಾವಿರ ನಗದು ದೋಚಿದ್ದಾರೆ. ಧವನಂನಲ್ಲಿ ಕಳವಾದ ಆಭರಣ ಎಷ್ಟು ಎನ್ನುವುದು ತಿಳಿದುಬಂದಿಲ್ಲ. ಮಳಿಗೆಯಲ್ಲಿದ್ದ ಒಡವೆಗಳ ಬಗ್ಗೆ ಪರಿಶೀಲಿಸಿ ಬಳಿಕ ಎಷ್ಟು ಎನ್ನುವ ಮಾಹಿತಿಯನ್ನು ನೀಡುವುದಾಗಿ ಸಿಬ್ಬಂದಿ ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಹುಮಹಡಿ ಕಟ್ಟಡದಲ್ಲಿ ಧವನಂ ಆಭರಣ ಮಳಿಗೆ ಇದೆ. ಅದಕ್ಕೆ ಹೊಂದಿಕೊಂಡಂತೆ ಮಾರಾಟ ಮಳಿಗೆಗಳಿವೆ. ಶನಿವಾರ ನಸುಕಿನಲ್ಲಿ ಧವನಂ ಚಿನ್ನಾಭರಣ ಮಳಿಗೆ ಚಾವಣಿ ಶೀಟ್ ಮುರಿದು ಒಳ ಪ್ರವೇಶಿಸಿ ಬಳಿಕ ಕಬ್ಬಿಣ ಗ್ರಿಲ್ ಕತ್ತರಿಸಿ ಒಳನುಗ್ಗಿರುವ ಖದೀಮರು, ಒಳಗಿದ್ದ 4 ಸಿಸಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಸುಳಿವು ಸಿಗಬಾರದೆಂದು ಸಿಸಿ ಕ್ಯಾಮೆರಾದ ಡಿವಿಆರ್‍ನ್ನು ಕದ್ದೊಯ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ಸೇಫ್ ಲಾಕರ್ ಇದ್ದ ಕೊಠಡಿಗೆ ತೆರಳಿ ಗ್ಯಾಸ್ ಕಟರ್ ಬಳಸಿ ಬಾಗಿಲು ಮುರಿದು ಚಿನ್ನದ ಬಿಸ್ಕತ್, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿದ್ದಾರೆ. ಸೇಫ್ ಲಾಕರ್‍ಗೆ ಅಲಾರಾಂ ಅಳವಡಿಸಲಾಗಿದೆ. ಒಂದು ವೇಳೆ ಯಾರಾದರೂ ಬಾಗಿಲು ತೆಗೆಯಲು ಯತ್ನಿಸಿದರೆ ತಕ್ಷಣ ಮಾಲೀಕರ ಮೊಬೈಲ್ ಫೋನ್‍ಗೆ ಸಂದೇಶ ತಲುಪುತ್ತದೆ.
ನಸುಕಿನಲ್ಲಿ ಕಳ್ಳರು ಲಾಕರ್ ಮುರಿದಾಗ ಮುಂಬೈನಲ್ಲಿದ್ದ ಮಾಲೀಕ ಸುಭಾಷ್ ಅವರ ಮೊಬೈಲ್ ಫೋನ್‍ಗೆ ಸಂದೇಶ ತಲುಪಿದೆ. ಕೂಡಲೆ ಅವರು ನಗರದಲ್ಲಿದ್ದ ವ್ಯವಸ್ಥಾಪಕರಿಗೆ ಕರೆ ಮಾಡಿ ಮಳಿಗೆಗೆ ತೆರಳಿ ಪರಿಶೀಲಿಸಲು ಸೂಚಿಸಿದ್ದರು. ಅದರಂತೆ ಅವರು ಕಟ್ಟಡ ಬಳಿ ತೆರಳಿ ಪರಿಶೀಲಿಸಿದ್ದರಂತೆ. ಯಾವುದೇ ಅನುಮಾನಾಸ್ಪದ ಚಲನವಲನ ಕಂಡು ಬಾರದ ಕಾರಣ ಇಲಿಗಳ ಓಡಾಟದಿಂದ ಮೊಬೈಲ್‍ಗೆ ಸಂದೇಶ ಹೋಗಿರಬಹುದು ಎಂದು ಮನೆಗೆ ವಾಪಸ್ ಹೋಗಿದ್ದರು. ಆದರೆ, ಬೆಳಗ್ಗೆ 10 ಗಂಟೆಗೆ ಮಳಿಗೆ ಬಾಗಿಲು ತೆರೆದಾಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಸೇಫ್ ಲಾಕರ್ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಬಳಿಕ ಅವರು ಠಾಣೆಗೆ ಬಂದ ದೂರು ನೀಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರಣಿ ಕಳವು: ಧವನಂ ಮಳಿಗೆಗೆ ಹೊಂದಿಕೊಂಡಂತೆ ಇರುವ ವಸuಉ ಮಳಿಗೆಗೆ ನುಗ್ಗಿದ ಕಳ್ಳರು ಛಾಬ್ರಿಯಾ ಸೆಲೆಕ್ಷನ್ಸ್‍ನಲ್ಲಿದ್ದ ರೂ.10 ಸಾವಿರ ನಗದು ಹಾಗೂ ತನ್ವೀರ್ ಕಲೆಕ್ಷನ್ಸ್ ಅಂಗಡಿಯಲ್ಲಿದ್ದ ರೂ.15 ಸಾವಿರ ನಗದು ಕದ್ದಿದ್ದಾರೆ ಎಂದು ದೂರಿನಲ್ಲಿ ಮಾಲೀಕರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕಳವಾದ ವಸ್ತುಗಳ ಮೌಲ್ಯ ತಿಳಿಸಿಲ್ಲ ಧವನಂ ಆಭರಣ ಮಳಿಗೆಯಲ್ಲಿ ಕಳವಾಗಿರುವ ಆಭರಣಗಳು ಎಷ್ಟು ಹಾಗೂ ಅವುಗಳ ಮೌಲ್ಯ ಎಷ್ಟು ಎಂಬ ಬಗ್ಗೆ ಮಾಲೀಕರು ಪರಿಶೀಲನೆ ನಡೆಸಿ ಪಟ್ಟಿ ಸಿದ್ಧಪಡಿಸಿ ಭಾನುವಾರ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಕಳ್ಳತನದ ಮೌಲ್ಯ ಉಲ್ಲೇಖಿಸದೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತನಿಖೆಗೆ 2 ತಂಡ ವಿಶೇಷ ತಂಡಗಳ ರಚಿಸಿ ಶೋಧ ಆರಂಭವಾಗಿದೆ. ಆದಷ್ಟು ಬೇಗ ಆರೋಪಿಗಳ ಬಂಧಿಸಲಾಗುವುದು ಎಂದು ಪೂರ್ವವಿಭಾಗ ಡಿಸಿಪಿ ಸತೀಶ್ ಕುಮಾರ್ ಹೇಳಿದರು. ಕಳ್ಳತನದ ಹಿಂದೆ ವೃತ್ತಿಪರ ಕಳ್ಳರ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಲವು ದಿನಗಳಿಂದ ಹೊಂಚು ಹಾಕಿ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿರುವ ಹಳೇ ಆರೋಪಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹೊರ ರಾಜ್ಯಗಳ ಪೊಲೀಸರಿಗೂ ಮಾಹಿತಿ ಕಳುಹಿಸಲಾಗಿದೆ.
ಪಿ. ಹರಿಶೇಖರನ್, ಹೆಚ್ಚುವರಿ ಪೊಲೀಸ್ ಆಯುಕ್ತರು (ಪೂರ್ವ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


