ಮಹಿಳಾ ಕ್ರಿಕೆಟ್‌ಗೆ ಹೊಸ ಅಧ್ಯಾಯ: ಭಾರತದಲ್ಲಿ ಮೊಟ್ಟಮೊದಲ ಚಾಂಪಿಯನ್ಸ್ ಟ್ರೋಫಿ ಆಯೋಜನೆ; ICC ಚೇರ್ಮನ್ Jay Shah ಹೇಳಿದ್ದೇನು?
ಮೊದಲ ಬಾರಿಗೆ ನಡೆಯಲಿರುವ ICC ಮಹಿಳಾ ಚಾಂಪಿಯನ್ಸ್ ಟ್ರೋಫಿ 2027 ಮಹಿಳಾ ಕ್ರಿಕೆಟ್‌ನಲ್ಲಿ “ರೋಚಕ ಹೊಸ ಅಧ್ಯಾಯ”ಕ್ಕೆ ನಾಂದಿ ಹಾಡಲಿದೆ ಎಂದು ಐಸಿಸಿ ಅಧ್ಯಕ್ಷರು ಕೂಡ ಆಗಿರುವ ಜಯ್ ಶಾ ಹೇಳಿದ್ದಾರೆ.

ದುಬೈ: ಪುರುಷ ಕ್ರಿಕೆಟಿಗರಿಗೆ ಸರಿಸಮಾನವಾಗಿ ವೇತನ ನೀಡಿಕೆ ಘೋಷಣೆ ಮಾಡುವ ಭಾರತದ ಮಹಿಳಾ ಕ್ರಿಕೆಟಿಗರಿಗೆ ಭರ್ಜರಿ ಸುದ್ದಿ ನೀಡಿದ್ದ ಜಯ್ ಶಾ ಇದೀಗ ಐಸಿಸಿ ಚೇರ್ಮನ್ ಆಗಿ ಜಾಗತಿಕ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೂ ಸೂಪರ್ ಸುದ್ದಿ ನೀಡಿದ್ದಾರೆ.
ಹೌದು.. ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜಿಸಿದೆ. ಆ ಮೂಲಕ ಮಹಿಳಾ ಕ್ರಿಕೆಟ್ ಮತ್ತೊಂದು ಐಸಿಸಿ ಟೂರ್ನಿ ಸೇರ್ಪಡೆಯಾದಂತಾಗಿದೆ.
ಮೊದಲ ಬಾರಿಗೆ ನಡೆಯಲಿರುವ ICC ಮಹಿಳಾ ಚಾಂಪಿಯನ್ಸ್ ಟ್ರೋಫಿ 2027 ಮಹಿಳಾ ಕ್ರಿಕೆಟ್‌ನಲ್ಲಿ “ರೋಚಕ ಹೊಸ ಅಧ್ಯಾಯ”ಕ್ಕೆ ನಾಂದಿ ಹಾಡಲಿದೆ ಎಂದು ಐಸಿಸಿ ಅಧ್ಯಕ್ಷರು ಕೂಡ ಆಗಿರುವ ಜಯ್ ಶಾ ಹೇಳಿದ್ದಾರೆ.
2027ರ ಫೆಬ್ರವರಿಯಲ್ಲಿ ನಡೆಯಲಿರುವ ಈ ಐತಿಹಾಸಿಕ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದ್ದು, ಮುಂಬೈ ಮತ್ತು ವಡೋದರಾ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದೆ.
“ಟೂರ್ನಿಯ ಮೊದಲ ಆವೃತ್ತಿಯಾಗಿರುವುದರಿಂದ, ವಿಶ್ವದ ಅತ್ಯುತ್ತಮ ತಂಡಗಳು ಇಲ್ಲಿ ತೀವ್ರ ಪೈಪೋಟಿ ಹಾಗೂ ಉತ್ತಮ ಗುಣಮಟ್ಟದ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಲಿವೆ” ಎಂದು ಜಯ್ ಶಾ ಹೇಳಿದ್ದಾರೆ.
ವರ್ಷಕ್ಕೊಂದು ಐಸಿಸಿ ಟೂರ್ನಿ
ಶ್ರೇಯಾಂಕದಲ್ಲಿ ಮೇಲೇರಲು ಹಾಗೂ ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಲು ತಂಡಗಳಿಗೆ ಈ ಟೂರ್ನಿ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಅವರು ಹೇಳಿದ್ದಾರೆ.
“ಪ್ರತಿ ವರ್ಷ ಐಸಿಸಿ ಮಹಿಳಾ ಕ್ರಿಕೆಟ್‌ನ ಪ್ರಮುಖ ಟೂರ್ನಿಯೊಂದು ನಡೆಯುತ್ತಿರುವುದರಿಂದ, ಮಹಿಳಾ ಕ್ರಿಕೆಟ್‌ಗೆ ಇನ್ನಷ್ಟು ವೇಗ ನೀಡಲು, ನಿರಂತರತೆ ಹೆಚ್ಚಿಸಲು ಹಾಗೂ ವಿಶ್ವದಾದ್ಯಂತ ಆಟಗಾರ್ತಿಯರು ಮತ್ತು ಅಭಿಮಾನಿಗಳಿಗಾಗಿ ಬಲಿಷ್ಠ ವಾತಾವರಣ ನಿರ್ಮಿಸಲು ನಮಗೆ ಮಹತ್ವದ ಅವಕಾಶ ಸಿಕ್ಕಿದೆ” ಎಂದು ಜಯ್ ಶಾ ಹೇಳಿದ್ದಾರೆ.
ಶ್ರೀಲಂಕಾದಿಂದ ಭಾರತಕ್ಕೆ ಟೂರ್ನಿ ಶಿಫ್ಟ್
ಇದಕ್ಕೂ ಮುನ್ನ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಮೊದಲ ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು ಭಾರತಕ್ಕೆ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಬುಧವಾರ ನಿರ್ಧರಿಸಿದೆ.
ಆರು ತಂಡಗಳ ಈ ಟೂರ್ನಿ 2027ರ ಫೆಬ್ರವರಿ 14ರಿಂದ 28ರವರೆಗೆ ಮುಂಬೈ ಮತ್ತು ವಡೋದರದಲ್ಲಿ ನಡೆಯಲಿದೆ. ಶ್ರೀಲಂಕಾದಲ್ಲಿ ಕ್ರಿಕೆಟ್ ಆಡಳಿತಕ್ಕೆ ಸಂಬಂಧಿಸಿದ ಸಮಸ್ಯೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಆತಿಥ್ಯವನ್ನು ಬದಲಾಯಿಸಲಾಗಿದೆ. ICC ಮಂಡಳಿ ಬುಧವಾರ ಭಾರತವನ್ನು ಹೊಸ ಆತಿಥೇಯ ರಾಷ್ಟ್ರವಾಗಿ ಅಧಿಕೃತವಾಗಿ ಅನುಮೋದಿಸಿದೆ.
“ಟೂರ್ನಿಯನ್ನು ಮೂಲತಃ ಶ್ರೀಲಂಕಾದಲ್ಲಿ ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಜುಲೈನಲ್ಲಿ ನಡೆದ ICC ವಾರ್ಷಿಕ ಸಮ್ಮೇಳನದಲ್ಲಿ ಸೂಚಿಸಲಾದ ಅಗತ್ಯ ಸುಧಾರಣೆಗಳನ್ನು ಶ್ರೀಲಂಕಾ ಕ್ರಿಕೆಟ್ ಮುಂದುವರಿಸಿಕೊಂಡು ಹೋಗುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಇದೀಗ ಭಾರತದಲ್ಲಿ ಆಯೋಜಿಸಲಾಗುತ್ತಿದೆ” ಎಂದು ICC ಪ್ರಕಟಣೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶ, ಭಾರತ ಮತ್ತು ದಕ್ಷಿಣ ಆಫ್ರಿಕಾ ಈ ಮೂರು ದೇಶಗಳನ್ನು ಆತಿಥ್ಯಕ್ಕಾಗಿ ICC ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆ ಪರಿಶೀಲಿಸಲಾಗಿತ್ತು. ಬಳಿಕ ಭಾರತವನ್ನು ಬದಲಿ ಆತಿಥೇಯ ರಾಷ್ಟ್ರವಾಗಿ ಆಯ್ಕೆ ಮಾಡುವಂತೆ ಶಿಫಾರಸು ಮಾಡಲಾಗಿತ್ತು. ಸೆಪ್ಟೆಂಬರ್ 2ರಂದು ICC ಮಂಡಳಿ ಈ ನಿರ್ಧಾರಕ್ಕೆ ಅಂತಿಮ ಅನುಮೋದನೆ ನೀಡಿದೆ.
6 ಬಲಿಷ್ಠ ತಂಡಗಳ ನಡುವೆ ಕಾದಾಟ
ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (CCI) ಮತ್ತು ವಡೋದರಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಈ ಐತಿಹಾಸಿಕ ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಸೇರಿದಂತೆ ವಿಶ್ವದ ಪ್ರಮುಖ ಆರು ಮಹಿಳಾ ಕ್ರಿಕೆಟ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.
ಜುಲೈ 6ರ ಅರ್ಹತಾ ಗಡುವಿನಂದು ಇದ್ದ ICC ಮಹಿಳಾ T20I ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಈ ಆರು ತಂಡಗಳು ಟೂರ್ನಿಗೆ ಅರ್ಹತೆ ಪಡೆದಿವೆ.
ಫೈನಲ್ ಲೆಕ್ಕಾಚಾರ ಹೇಗೆ?
ಟೂರ್ನಿಯಲ್ಲಿ ಆರು ತಂಡಗಳು ರೌಂಡ್-ರಾಬಿನ್ ಲೀಗ್ ಮಾದರಿಯಲ್ಲಿ ಪರಸ್ಪರ ಸೆಣಸಲಿವೆ. ಲೀಗ್ ಹಂತದ ಅಂತ್ಯದಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಫೆಬ್ರವರಿ 28ರಂದು ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಪುರುಷರ ಚಾಂಪಿಯನ್ಸ್ ಟ್ರೋಫಿಯನ್ನು ಸಾಮಾನ್ಯವಾಗಿ 50 ಓವರ್‌ಗಳ ಮಾದರಿಯಲ್ಲಿ ಆಡಲಾಗುತ್ತದೆ. ಆದರೆ ಮೊದಲ ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು T20 ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ.
ಕಳೆದ ವರ್ಷ ಭಾರತವೇ ಮಹಿಳಾ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು. ಆ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕವಾಗಿ ಪ್ರಶಸ್ತಿ ಗೆದ್ದು ಗಮನ ಸೆಳೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




