ಕ್ರಿಕೆಟ್

ತ್ರಿಕೋನ ಏಕದಿನ ಸರಣಿ ಫೈನಲ್: ಬಿಗ್ ಫೈಟ್ ಬಳಿಕ ಲಂಕಾ ಬೌಲಿಂಗ್ ಛಿದ್ರ ಮಾಡಿದ Vaibhav Sooryavanshi; 21 ವರ್ಷಗಳ ಹಳೆಯ ದಾಖಲೆ ಉಡೀಸ್!

ಡಂಬುಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್ ಆಡಿದರು.

ತ್ರಿಕೋನ ಏಕದಿನ ಸರಣಿ ಫೈನಲ್: ಬಿಗ್ ಫೈಟ್ ಬಳಿಕ ಲಂಕಾ ಬೌಲಿಂಗ್ ಛಿದ್ರ ಮಾಡಿದ Vaibhav Sooryavanshi; 21 ವರ್ಷಗಳ ಹಳೆಯ ದಾಖಲೆ ಉಡೀಸ್!
ವೈಭವ್ ಸೂರ್ಯವಂಶಿ
Published On :

ಡಂಬುಲಾ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿ ಫೈನಲ್ ಪಂದ್ಯದಲ್ಲಿ ಭಾರತ ಎ ತಂಡದ ಸ್ಫೋಟಕ ಬ್ಯಾಟರ್ ಶ್ರೀಲಂಕಾ ಎ ತಂಡದ ಬೌಲರ್ ಗಳ ಯೋಜನೆಗಳನ್ನೆಲ್ಲಾ ತಲೆಕೆಳಗೆ ಮಾಡಿದ್ದಾರೆ.

ಡಂಬುಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಈ ಹಿಂದಿನ ಪಂದ್ಯದಲ್ಲಿ ಲಂಕಾ ಬೌಲರ್ ಗಳೊಂದಿಗೆ ಪರಸ್ಪರ ಕೈಕೈ ಮಿಲಾಯಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ವೈಭವ್ ಸೂರ್ಯವಂಶಿ, ಇಂದು ತಮ್ಮ ಹಿಂದಿನ ಪಂದ್ಯದ ಸೇಡನ್ನು ತೀರಿಸಿಕೊಳ್ಳುವ ಉಮೇದಿನಲ್ಲೇ ಅವರು ಬ್ಯಾಟಿಂಗ್ ಗೆ ಬಂದಂತಿತ್ತು.

ಮೊದಲ ಎಸೆತದಿಂದಲೇ ಲಂಕಾ ಬೌಲರ್ ಗಳನ್ನು ಮನಸೋ ಇಚ್ಚೆ ದಂಡಿಸಿದ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಮಾತ್ರವಲ್ಲದೇ ಕೇವಲ 29 ಎಸೆತಗಳಲ್ಲಿ 94 ರನ್ ಸಿಡಿಸಿ, ಕೇವಲ 6 ರನ್ ಅಂತರದಲ್ಲಿ ಶತಕ ಕೂಡ ಮಿಸ್ ಮಾಡಿಕೊಂಡರು. ಅಲ್ಲದೆ ಕೂದಲೆಳೆ ಅಂತರದಲ್ಲೇ ವಿಶ್ವದಾಖಲೆ ಮಿಸ್ ಮಾಡಿಕೊಂಡಿದ್ದಾರೆ.

ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಸೂರ್ಯವಂಶಿ 29 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 94 ರನ್ ಸಿಡಿಸಿದರು. ಅವರಿಗೆ ಮತ್ತೋರ್ವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಉತ್ತಮ ಸಾಥ್ ನೀಡಿದರು. ಪ್ರಿಯಾಂಶ್ ಕೂಡ 29 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 39 ರನ್ ಕಲೆಹಾಕಿದರು. ಮೊದಲ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 132 ರನ್ ಗಳ ಜೊತೆಯಾಟವಾಡಿ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು.

ವಿಶ್ವದಾಖಲೆ ಜಸ್ಟ್ ಮಿಸ್

ಅಂತೆಯೇ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ 94 ರನ್‌ಗಳಿಗೆ ಔಟಾಗುವುದರೊಂದಿಗೆ ವಿಶ್ವದಾಖಲೆ ನಿರ್ಮಿಸುವ ಅವಕಾಶ ಕೈತಪ್ಪಿತು. ಕೇವಲ 15 ವರ್ಷದ ಸೂರ್ಯವಂಶಿ 29 ಎಸೆತಗಳಲ್ಲಿ ಸ್ಫೋಟಕ 94 ರನ್‌ಗಳನ್ನು ಸಿಡಿಸಿ ದಾಖಲೆ ಶತಕದತ್ತ ದಾಪುಗಾಲಿಟ್ಟಿದ್ದರು.

ಆದರೆ 9ನೇ ಓವರ್ ನ 5ನೇ ಎಸೆತದಲ್ಲಿ ಶ್ರೀಲಂಕಾದ ಸಹನ್ ಅರಚ್ಚಿಗೆ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಯಸ್ಕಾಂತ್ ಗೆ ಕ್ಯಾಚ್ ನೀಡಿ ಔಟಾದರು.

ಒಂದು ವೇಳೆ ವೈಭವ್ ಇಂದು ಶತಕ ಸಿಡಿಸಿದ್ದರೆ ಅವರು ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮ್ಯಾಕ್‌ಗರ್ಕ್ ಅವರ ಹೆಸರಿನಲ್ಲಿರುವ ಅತಿವೇಗದ ಲಿಸ್ಟ್ 'ಎ' ಶತಕದ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಆದರೆ, ಆ ಐತಿಹಾಸಿಕ ಸಾಧನೆ ಕೊನೆಯ ಕ್ಷಣದಲ್ಲಿ ಕೈತಪ್ಪಿತು.

21 ವರ್ಷಗಳ ಹಳೆಯ ದಾಖಲೆ ಉಡೀಸ್!

ಇನ್ನು ವೈಭವ್ ಸೂರ್ಯವಂಶಿ ವೇಗದ ಶತಕದ ದಾಖಲೆ ಮಿಸ್ ಮಾಡಿಕೊಂಡರೂ ಈ ಪಂದ್ಯದಲ್ಲಿ ಮತ್ತೊಂದು ಅರೂಪದ ದಾಖಲೆ ನಿರ್ಮಿಸಿದರು. ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕದ ಹೊಸ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ 21 ವರ್ಷಗಳಿಂದ ಅಜೇಯವಾಗಿದ್ದ ಶ್ರೀಲಂಕಾದ ಕೌಶಲ್ಯ ವೀರರತ್ನೆ ಅವರ 12 ಎಸೆತಗಳ ಅರ್ಧಶತಕದ ದಾಖಲೆಯನ್ನು ಸೂರ್ಯವಂಶಿ ಮುರಿದರು.

ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ತಲುಪಿದ ಸೂರ್ಯವಂಶಿಗೆ ಇದು ಭಾರತ 'ಎ' ತಂಡದ ಪರ ದಾಖಲಾದ ಮೊದಲ ಅರ್ಧಶತಕವೂ ಆಗಿತ್ತು.

ಆದರೆ ಈ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸುವಲ್ಲಿ ವೈಭವ್ ಸೂರ್ಯವಂಶಿ ವಿಫಲರಾದರು. ಆ ಮೂಲಕ ವಿಶ್ವದಾಖಲೆ ಶತಕದ ಕನಸು ನನಸಾಗಲಿಲ್ಲ. ಶ್ರೀಲಂಕಾ 'ಎ' ತಂಡದ ನಾಯಕ ಸಹನ್ ಅರಚ್ಚಿಗೆ ಒಂಬತ್ತನೇ ಓವರ್‌ನಲ್ಲಿ ಸೂರ್ಯವಂಶಿಯನ್ನು ಔಟ್ ಮಾಡುವ ಮೂಲಕ ಅವರ ಸ್ಫೋಟಕ ಇನ್ನಿಂಗ್ಸ್‌ಗೆ ತೆರೆ ಎಳೆದರು. 29 ಎಸೆತಗಳಲ್ಲಿ 94 ರನ್ ಗಳಿಸಿದ ಸೂರ್ಯವಂಶಿಯ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು ಎಂಟು ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.