2nd ODI: ಆಫ್ಘಾನಿಸ್ತಾನ ವಿರುದ್ಧ ಸ್ಫೋಟಕ ಬ್ಯಾಟಿಂಗ್; 403 ರನ್ ಬೃಹತ್ ಗುರಿ ನೀಡಿದ ಭಾರತ
ಭಾರತ ತಂಡ 49.5 ಓವರ್ ನಲ್ಲಿ 402 ರನ್ ಗಳಿಗೆ ಆಲೌಟ್ ಆಗಿ ಆಫ್ಘಾನಿಸ್ತಾನಕ್ಕೆ ಗೆಲ್ಲಲು 403 ರನ್ ಗಳ ಬೃಹತ್ ಟಾರ್ಗೆಟ್ ನೀಡಿತು.

ಲಖನೌ: ಆಫ್ಘಾನಿಸ್ತಾನ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಆಫ್ಘಾನಿಸ್ತಾನಕ್ಕೆ ಗೆಲ್ಲಲು 403 ರನ್ ಗಳ ಬೃಹತ್ ಗುರಿ ನೀಡಿದೆ.
ಲಖ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಇಶಾನ್ ಕಿಶನ್ (125) ಮತ್ತು ನಾಯಕ ಶುಭ್ ಮನ್ ಗಿಲ್ (154) ಸ್ಫೋಟಕ ಶತಕದ ನೆರವಿನಿಂದ 402 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಆರಂಭಿಕ ಆಘಾತ ಎದುರಿಸಿತು. ಕೇವಲ 9 ರನ್ ಗೇ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಕೇವಲ 4 ರನ್ ಗಳಿಸಿ ಕ್ರೀಸ್ ನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಸಲೀಂ ಸಫಿ ಬೌಲಿಂಗ್ ನಲ್ಲಿ ಔಟಾದರು.
ಈ ಹಂತದಲ್ಲಿ ರೋಹಿತ್ ಶರ್ಮಾ ರನ್ನು ಜೊತೆಗೂಡಿದ ನಾಯಕ ಶುಭ್ ಮನ್ ಗಿಲ್ 2ನೇ ವಿಕೆಟ್ ಗೆ 87 ರನ್ ಗಳ ಜೊತೆಯಾಟವಾಡಿ, ಭಾರತವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ಈ ಹಂತದಲ್ಲಿ ಕೇವಲ 39 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 48 ರನ್ ಗಳಿಸಿ ದೊಡ್ಡ ಇನ್ನಿಂಗ್ಸ್ ನತ್ತ ದಾಪುಗಾಲಿರಿಸಿದ್ದ ರೋಹಿತ್ ಶರ್ಮಾ ರಷೀದ್ ಖಾನ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಶೆ ಮೂಡಿಸಿದರು.
ಗಿಲ್-ಇಶಾನ್ ಕಿಶನ್ ಭರ್ಜರಿ ಜೊತೆಯಾಟ
ರೋಹಿತ್ ಶರ್ಮಾ ಔಟ್ ಬಳಿಕ ಗಿಲ್ ಜೊತೆಗೂಡಿದ ಇಶಾನ್ ಕಿಶನ್ ಅಕ್ಷರಶಃ ಸ್ಫೋಟಕ ಇನ್ನಿಂಗ್ಸ್ ಆಡಿದರು. 3ನೇ ವಿಕೆಟ್ ಗೆ ಈ ಜೋಡಿ ದಾಖಲೆಯ 224 ರನ್ ಗಳ ಜೊತೆಯಾಟವಾಡಿತು. ಈ ಪೈಕಿ ಇಶಾನ್ ಕಿಶನ್ 125 ರನ್ ಗಳಿಸಿದರೆ, ಶುಭ್ ಮನ್ ಗಿಲ್ ಕೂಡ ಶತಕ ಸಿಡಿಸಿ ತಂಡದ ಮೊತ್ತ 300 ಗಡಿದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಇಬ್ಬರೂ ಬ್ಯಾಟರ್ ಗಳು ಕ್ರೀಸ್ ನಲ್ಲಿರುವವರೆಗೂ ಭಾರತದ ಮೊತ್ತ 400ರ ಗಡಿ ದಾಟಬಹುದು ಎಂದು ಎಣಿಸಲಾಗಿತ್ತು. ಆದರೆ ಶತಕ ಸಿಡಿಸಿ ಅಪಾಯಕಾರಿಯಾಗಿದ್ದ ಇಬ್ಬರೂ ಬ್ಯಾಟರ್ ಗಳನ್ನು ಆಫ್ಘಾನಿಸ್ತಾನದ ನಂಗೆಯಾಲಿಯಾ ಖರೋಟಿ ಔಟ್ ಮಾಡಿದರು.
ಭಾರತದ ಕೆಳಕ್ರಮಾಂಕದ ಪೆವಿಲಿಯನ್ ಪರೇಡ್
ಇಶಾನ್ ಕಿಶನ್ ಮತ್ತು ಶುಭ್ ಮನ್ ಗಿಲ್ ಔಟಾದ ಬೆನ್ನಲ್ಲೇ ಅಕ್ಷರಃ ಭಾರತದ ಪೆವಿಲಿಯನ್ ಪರೇಡ್ ಆರಂಭವಾಯಿತು. ಗಿಲ್ ಬೆನ್ನಲ್ಲೇ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಕೂಡ ಶೂನ್ಯ ಸುತ್ತಿ ತೀವ್ರ ನಿರಾಶೆ ಮೂಡಿಸಿದರು. ತಾವು ಎದುರಿಸಿದ ಮೊದಲ ಎಸೆತದಲ್ಲೇ ಭರ್ಜರಿ ಶಾಟ್ ಗೆ ಮುಂದಾಗಿ ನಂಗೆಯಾಲಿಯಾ ಖರೋಟಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಶ್ರೇಯಸ್ ಅಯ್ಯರ್ (26), ಗುರ್ನೂರ್ ಬ್ರಾರ್ 3, ಅರ್ಶ್ ದೀಪ್ ಸಿಂಗ್ 3, ಪ್ರಿನ್ಸ್ ಯಾದವ್ 5 ಮತ್ತು ವಾಷಿಂಗ್ಟನ್ ಸುಂದರ್ 19 ರನ್ ಗಳಿಸಿ ಔಟಾದರು.
ಅಂತಿಮವಾಗಿ ಭಾರತ ತಂಡ 49.5 ಓವರ್ ನಲ್ಲಿ 402 ರನ್ ಗಳಿಗೆ ಆಲೌಟ್ ಆಗಿ ಆಫ್ಘಾನಿಸ್ತಾನಕ್ಕೆ ಗೆಲ್ಲಲು 403 ರನ್ ಗಳ ಬೃಹತ್ ಟಾರ್ಗೆಟ್ ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



