NatWest ವಿಜಯೋತ್ಸವಕ್ಕೆ 24 ವರ್ಷ: ಕುಟುಂಬದೊಂದಿಗೆ ಐತಿಹಾಸಿಕ ಕ್ಷಣ ಆನಂದಿಸಿದ Sourav Ganguly
ಅಂದು ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಲಾರ್ಡ್ಸ್ ಕ್ರೀಡಾಂಗಣದ ಬಾಲ್ಕನಿಯಲ್ಲೇ ತಮ್ಮ ತಂಡದ ಗೆಲುವನ್ನು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.

ಕೋಲ್ಕತ್ತಾ: ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ನ್ಯಾಟ್‌ವೆಸ್ಟ್ ಟ್ರೋಫಿ ಗೆಲುವಿನ ಸಂಭ್ರಮವನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ಕೋಲ್ಕತ್ತಾದ ನಿವಾಸದಲ್ಲಿ ಆಚರಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. 2002ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ನ್ಯಾಟ್‌ವೆಸ್ಟ್ ಟ್ರೋಫಿ ಸರಣಿ ಭಾರತೀಯ ಕ್ರಿಕೆಟ್ ಇತಿಹಾಸದ ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿದೆ. ಅಂದು ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ವಿರೋಚಿತವಾಗಿ ಮಣಿಸಿದ್ದ ಭಾರತ ಐತಿಹಾಸಿಕ ಜಯಭೇರಿ ಭಾರಿಸಿತ್ತು.
ಅಂದು ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಲಾರ್ಡ್ಸ್ ಕ್ರೀಡಾಂಗಣದ ಬಾಲ್ಕನಿಯಲ್ಲೇ ತಮ್ಮ ತಂಡದ ಗೆಲುವನ್ನು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.
ಈ ಅತ್ಯಪರೂಪದ ಕ್ಷಣ ನಡೆದು ಇಂದಿಗೆ 24 ವರ್ಷಗಳು ಸಂದಿದೆ. ಇಂದು ಅದೇ ಸೌರವ್ ಗಂಗೂಲಿ ತಮ್ಮ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಕೂಡಿ ಟಿವಿಯಲ್ಲಿ ಆ ಪಂದ್ಯವನ್ನು ವೀಕ್ಷಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಗೆಲುವಿನ ಕುರಿತು ಚರ್ಚೆ
ವೈರಲ್ ಆಗಿರುವ ವಿಡಿಯೋದಲ್ಲಿ ಗಂಗೂಲಿ ಆ ಗೆಲುವಿನ ಕುರಿತು ಮತ್ತು ಆ ಪಂದ್ಯದ ಹೈಲೈಟ್ಸ್ ಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿದರು. ಭಾರತೀಯ ಕ್ರಿಕೆಟ್‌ನ ಹಲವು ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡರು ಎನ್ನಲಾಗಿದೆ.
ಬೃಹತ್ ಮೊತ್ತವನ್ನು ಚೇಸ್ ಮಾಡಿದ್ದ ಭಾರತ
2002ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಬರೊಬ್ಬರಿ 326 ರನ್ ಪೇರಿಸಿತ್ತು. ಅಂದಿನ ಕಾಲಘಟ್ಟಕ್ಕೆ ಏಕದಿನ ಕ್ರಿಕೆಟ್ ನಲ್ಲಿ 280 ರಿಂದ 300 ರನ್ ಗಳನ್ನೇ ಬೃಹತ್ ಮೊತ್ತ ಎಂದು ಪರಿಗಣಿಸಲಾಗುತ್ತಿತ್ತು.
ಬೆರಳಣಿಕೆ ಪಂದ್ಯಗಳಲ್ಲಿ ಮಾತ್ರ ಪ್ರಮುಖ ತಂಡಗಳು ಈ ಪರಿಯ ಗುರಿಯನ್ನು ಬೆನ್ನು ಹತ್ತಿ ಯಶ ಕಂಡಿದ್ದವು. ಆದರೆ ಅಂದು ಇಂಗ್ಲೆಂಡ್ ತಂಡ ಬರೊಬ್ಬರಿ 326 ರನ್ ಪೇರಿಸಿತ್ತು. ಹೀಗಾಗಿ ಅಂದು ಭಾರತಕ್ಕೆ ಇದು ಕಬ್ಬಿಣದ ಕಡಲೆ ಎಂದೇ ಭಾವಿಸಲಾಗಿತ್ತು. ಆದರೆ ಮಹಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದಿತ್ತರು.
ಭಾರತೀಯ ಬೌಲರ್ ಗಳ ಕಾಡಿದ್ದ ಇಂಗ್ಲೆಂಡ್ ದಾಂಡಿಗರು
ಇನ್ನು ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಪರ ಮಾರ್ಕಸ್ ಥ್ರಿಸ್ಕೋಥಿಕ್, ನಾಯಕ ನಾಸಿರ್ ಹುಸೇನ್ ಮತ್ತು ಆಲ್ ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್ ಭಾರತೀಯ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ್ದರು. ಥ್ರಿಸ್ಕೋಥಿಕ್ 109 ರನ್ ಪೇರಿಸಿದರೆ, ಫ್ಲಿಂಟಾಫ್ ಕೇವಲ 32 ಎಸೆತಗಳಲ್ಲಿ 40 ರನ್ ಚಚ್ಚಿದ್ದರು. ಅಂತೆಯೇ ನಾಯಕ ನಾಸಿರ್ ಹುಸೇನ್ 115 ರನ್ ಪೇರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
ಅಂದು ಭಾರತ ಆಶೀಶ್ ನೆಹ್ರಾ, ಜಹೀರ್ ಖಾನ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ರಂತಹ ದಿಗ್ಗಜ ಬೌಲರ್ ಗಳೇ ಆಂಗ್ಲರನ್ನು ಕಟ್ಟಿಹಾಕಲು ಹೆಣಗಾಡಿದ್ದರು. ಅಂಗ್ಲರ ಕಟ್ಟಿಹಾಕಲು ಸೌರವ್ ಗಂಗೂಲಿ ಬರೊಬ್ಬರಿ 7 ಬೌಲರ್ ಗಳ ಮೊರೆ ಹೋಗಿದ್ದರು. ಮಾತ್ರವಲ್ಲದೇ ಸ್ವತಃ ತಾವೇ 3 ಓವರ್ ಬೌಲಿಂಗ್ ಮಾಡಿ ದುಬಾರಿಯಾಗಿದ್ದರು.
ಐತಿಹಾಸಿಕ ಗೆಲುವು ತಂದಿತ್ತ ಯುವಿ, ಕೈಫ್
ಇನ್ನು ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ವಿರೇಂದ್ರ ಸೆಹ್ವಾಗ್ ಮತ್ತು ನಾಯಕ ಸೌರವ್ ಗಂಗೂಲಿ ಜೋಡಿ ಮೊದಲ ವಿಕೆಟ್ ಗೆ 106ರನ್ ಗಳ ಜೊತೆಯಾಟವಾಡಿತು. ಆದರೆ ಈ ಹಂತದಲ್ಲಿ 60ರನ್ ಗಳಿಸಿದ್ದ ನಾಯಕ ಸೌರವ್ ಗಂಗೂಲಿ ಟುಡೋರ್ ಬೌಲಿಂಗ್ ನಲ್ಲಿ ಔಟಾದರು.
ಅವರ ಬೆನ್ನಲ್ಲೇ 45 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ವಿರೇಂದ್ರ ಸೆಹ್ವಾಗ್ ಕೂಡ ಜೈಲ್ಸ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಮೊಂಗಿಯಾ (9), ಭಾರತದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಸಚಿನ್ ತೆಂಡೂಲ್ಕರ್ (14) ಮತ್ತು ರಾಹುಲ್ ದ್ರಾವಿಡ್ (5) ಕೂಡ ಬೇಗನೇ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ಮಾರಕವಾಗಿ ಪರಿಣಮಿಸಿತು.
ಮಧ್ಯಮ ಕ್ರಮಾಂಕದ ಈ ದಿಢೀರ್ ಕುಸಿತ ಭಾರತವನ್ನು ಸೋಲಿನತ್ತ ಮುಖ ಮಾಡುವಂತೆ ಮಾಡಿತ್ತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಯುವರಾಜ್ ಸಿಂಗ್ ಮತ್ತು ಮಹಮದ್ ಕೈಫ್ ಜೋಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ರಕ್ಷಣಾತ್ಮಕ ಆಟದ ಮೂಲಕ ಬ್ಯಾಟಿಂಗ್ ಆರಂಭಿಸಿದ ಈ ಜೋಡಿ ನಿಧಾನವಾಗಿ ಇಂಗ್ಲೆಂಡ್ ವೇಗಿಗಳ ಮೇಲೆ ಸವಾರಿ ಮಾಡಲಾರಂಭಿಸಿದರು.
ಯುವರಾಜ್ ಸಿಂಗ್ 69 ರನ್ ಗಳಿಸಿ ಆಕ್ರಮಣಕಾರಿಯಾಗಿದ್ದರೆ, ಮತ್ತೊಂದು ಬದಿಯಲ್ಲಿ ಕೈಫ್ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರು. ಈ ಹಂತದಲ್ಲಿ ಯುವಿ ಕಾಲಿಂಗ್ ವುಡ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಟ್ಯುಡೋರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಆಗ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗಿತ್ತು.
ಕೈಫ್ ಏಕಾಂಗಿ ಹೋರಾಟ
ಯುವಿ ಔಟಾದ ಬಳಿಕ ಕ್ರೀಸ್ ನಲ್ಲಿದ್ದ ಮಹಮದ್ ಕೈಫ್ ತಮ್ಮ ಏಕಾಂಗಿ ಹೋರಾಟ ಮುಂದುವರೆಸಿದರು. ಯುವಿ ಬಳಿಕ ಕ್ರೀಸ್ ಗೆ ಬಂದ ಹರ್ಭಜನ್ ಸಿಂಗ್ 15 ರನ್ ಗಳಿಸಿ ಫ್ಲಿಂಟಾಫ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಅನಿಲ್ ಕುಂಭ್ಳೆ ಕೂಡ ಶೂನ್ಯ ಸುತ್ತಿದರು.
ಅಂತಿಮ ಹಂತದಲ್ಲಿ ಕ್ರೀಸ್ ಗೆ ಬಂದ ಜಹೀರ್ ಖಾನ್ ಯಾವುದೇ ಕಾರಣಕ್ಕೂ ವಿಕೆಟ್ ನೀಡಬಾರದು ಎಂಬ ಮನಸ್ಥಿಃತಿಯಲ್ಲೇ ಬ್ಯಾಟಿಂಗ್ ಆರಂಭಿಸಿ 7 ಎಸೆತಗಳನ್ನು ಎದುರಿಸಿ 4 ರನ್ ಮಾತ್ರ ಗಳಿಸಿದರು. ಮತ್ತೊಂದೆಡೆ ಮಹಮದ್ ಕೈಫ್ ಅಜೇಯ 87 ರನ್ ಗಳಿಸಿ ಭಾರತಕ್ಕೆ 2 ವಿಕೆಟ್ ಗಳ ವಿರೋಚಿತ ಮತ್ತು ಐತಿಹಾಸಿಕ ಜಯ ತಂದುಕೊಟ್ಟರು. ಅದೂ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಕೈಫ್ ವಿನ್ನಿಂಗ್ ಶಾಟ್ ಭಾರಿಸಿದರು.
ಶರ್ಟ್ ಬಿಚ್ಚಿ ಸಂಭ್ರಮಿಸಿದ್ದ ಗಂಗೂಲಿ
ಇನ್ನು ಆ ಗೆಲಿವಿನ ಬೆನ್ನಲ್ಲೇ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಉಗುರು ಕಚ್ಚುತ್ತಾ ಕುಳಿತಿದ್ದ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಗಂಗೂಲಿ ಅವರ ಆ ಕ್ಷಣ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. ಆ ಸಂಭ್ರಮಾಚರಣೆ ಭಾರತೀಯ ತಂಡದ ಹೊಸ ಆತ್ಮವಿಶ್ವಾಸ ಮತ್ತು ನಿರ್ಭೀತ ಮನೋಭಾವದ ಸಂಕೇತವಾಗಿತ್ತು.
ಗಂಗೂಲಿ ಅವರ ಇತ್ತೀಚಿನ ಸಂಭ್ರಮಾಚರಣೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ನಾಯಕತ್ವ ಹಾಗೂ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಮತ್ತೊಮ್ಮೆ ಸ್ಮರಿಸಿದ್ದಾರೆ. ಅನೇಕರು ಅವರ ಸಾಧನೆಯನ್ನು ಪ್ರಶಂಸಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ.
24 ವರ್ಷಗಳ ಸಂಭ್ರಮ
ಕುಟುಂಬದೊಂದಿಗೆ ಸರಳವಾಗಿ ಆಚರಿಸಿದ ಈ ಸಂಭ್ರಮ ಭಾರತೀಯ ಕ್ರಿಕೆಟ್‌ನ ಸುವರ್ಣ ಕ್ಷಣಗಳನ್ನು ಮತ್ತೊಮ್ಮೆ ನೆನಪಿಸುವಂತಾಗಿದ್ದು, ಸೌರವ್ ಗಂಗೂಲಿ ಅವರ ಕ್ರಿಕೆಟ್ ಪಯಣದ ಮೇಲಿನ ಅಭಿಮಾನವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




