IPL 2026: ಮಾರ್ಚ್ 28ಕ್ಕೆ ಉದ್ಘಾಟನಾ ಪಂದ್ಯ, ಮೇ 31ಕ್ಕೆ ಫೈನಲ್ ಪಂದ್ಯ!
ಈ ಹಿಂದೆ ಬಿಸಿಸಿಐ (BCCI) ಫ್ರಾಂಚೈಸಿಗಳಿಗೆ ನೀಡಿದ್ದ ಮಾಹಿತಿ ಪ್ರಕಾರ ಮಾರ್ಚ್ 26ರಂದು ಟೂರ್ನಿ ಆರಂಭವಾಗಬೇಕಿತ್ತು. ಆದರೆ, ಆಂತರಿಕ ಕಾರಣಗಳಿಂದಾಗಿ ಎರಡು ದಿನ ವಿಳಂಬವಾಗಿ ಅಂದರೆ ಮಾರ್ಚ್ 28ಕ್ಕೆ ಉದ್ಘಾಟನಾ ಪಂದ್ಯವನ್ನು ನಿಗದಿಪಡಿಸಲಾಗಿದೆ

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುವ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 19ನೇ ಆವೃತ್ತಿಯು ಮಾರ್ಚ್ 28 ಶನಿವಾರದಿಂದ ಆರಂಭವಾಗಲಿದ್ದು, ಮೇ 31ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಬಿಸಿಸಿಐ (BCCI) ಫ್ರಾಂಚೈಸಿಗಳಿಗೆ ನೀಡಿದ್ದ ಮಾಹಿತಿ ಪ್ರಕಾರ ಮಾರ್ಚ್ 26ರಂದು ಟೂರ್ನಿ ಆರಂಭವಾಗಬೇಕಿತ್ತು. ಆದರೆ, ಆಂತರಿಕ ಕಾರಣಗಳಿಂದಾಗಿ ಎರಡು ದಿನ ವಿಳಂಬವಾಗಿ ಅಂದರೆ ಮಾರ್ಚ್ 28ಕ್ಕೆ ಉದ್ಘಾಟನಾ ಪಂದ್ಯವನ್ನು ನಿಗದಿಪಡಿಸಲಾಗಿದೆ. ಮುಂದಿನ ವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪ್ರಕಟಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಕೋಲ್ಕತ್ತಾ , ಚೆನ್ನೈ ಮತ್ತು ಗುವಾಹಟಿ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಭದ್ರತಾ ದೃಷ್ಟಿಯಿಂದ ಚುನಾವಣಾ ಆಯೋಗದ ದಿನಾಂಕಗಳಿಗಾಗಿ ಬಿಸಿಸಿಐ ಕಾಯುತ್ತಿದೆ. ಹೀಗಾಗಿ, ಈ ಬಾರಿಯೂ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಚಾಂಪಿಯನ್ ಆರ್‌ಸಿಬಿ ಮೊದಲ ಪಂದ್ಯ ಎಲ್ಲಿ?
ಇನ್ನೂ ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ. ಆದರೆ, ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತದೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಕಳೆದ ಜೂನ್‌ನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ದುರದೃಷ್ಟಕರ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಡುವೆ ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಬೆಂಗಳೂರಿನಲ್ಲಿ ಪಂದ್ಯ ನಡೆಯದಿದ್ದರೆ ಆರ್‌ಸಿಬಿ ತನ್ನ ತವರಿನ ಪಂದ್ಯಗಳನ್ನು ನವಿ ಮುಂಬೈ, ರಾಯ್‌ಪುರ ಮತ್ತು ಪುಣೆಯಲ್ಲಿ ಆಡುವ ಸಾಧ್ಯತೆಯಿದೆ.

T20 World Cup 2026: ಟೀಂ ಇಂಡಿಯಾದ ಫಿನಿಷರ್ ಪಾತ್ರಕ್ಕೆ ಹೊಂದಿಕೊಳ್ಳಲು IPL ಸಹಾಯ ಮಾಡಿದೆ ಎಂದ ತಿಲಕ್ ವರ್ಮಾ
ಡಿಸೆಂಬರ್‌ನಲ್ಲಿ ನಡೆದ ಮೆಗಾ ಹರಾಜಿನ ನಂತರ ಎಲ್ಲಾ ತಂಡಗಳು ಸಮಬಲದಿಂದ ಕೂಡಿವೆ. ಆರ್‌ಸಿಬಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಹೋರಾಡಲಿದ್ದರೆ, ಉಳಿದ ತಂಡಗಳು ಕಪ್ ಗೆಲ್ಲುವ ತವಕದಲ್ಲಿವೆ. ಮುಂದಿನ ವಾರ ನಡೆಯುವ ಬಿಸಿಸಿಐ ಸಭೆಯಲ್ಲಿ ಈ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದ್ದು, ಪೂರ್ಣ ಪ್ರಮಾಣದ ವೇಳಾಪಟ್ಟಿ ಅಭಿಮಾನಿಗಳ ಕೈಸೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


