ಕ್ರಿಕೆಟ್

Cricket: ಶ್ರೀಲಂಕಾದಲ್ಲಿ ದೇವದತ್ ಪಡಿಕ್ಕಲ್ ಇತಿಹಾಸ ಸೃಷ್ಟಿ; ದ್ರಾವಿಡ್‌ರ 27 ವರ್ಷದ ದಾಖಲೆ ಸೇರಿ ಹಲವು ರೆಕಾರ್ಡ್ ಬರೆದ ಕನ್ನಡಿಗ

ಕೊಲಂಬೋದ ಸಿಂಹಳೀಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

Cricket: ಶ್ರೀಲಂಕಾದಲ್ಲಿ ದೇವದತ್ ಪಡಿಕ್ಕಲ್ ಇತಿಹಾಸ ಸೃಷ್ಟಿ; ದ್ರಾವಿಡ್‌ರ 27 ವರ್ಷದ ದಾಖಲೆ ಸೇರಿ ಹಲವು ರೆಕಾರ್ಡ್ ಬರೆದ ಕನ್ನಡಿಗ
ದೇವದತ್ ಪಡಿಕ್ಕಲ್ ಶತಕ
Published On :

ಕೊಲಂಬೊ: ಟೀಂ ಇಂಡಿಯಾದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನ ಭರ್ಜರಿ ಶತಕ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕೊಲಂಬೋದ ಸಿಂಹಳೀಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 45 ರನ್ ಗಳಿಸಿದರೆ, ಕೆಎಲ್ ರಾಹುಲ್ 18 ರನ್ ಗಳಿಸಿ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಎಂದಿನಂತೆ ತಮ್ಮ ಸಮಯೋಚಿತ ಬ್ಯಾಟಿಂಗ್ ಮುಂದುವರೆಸಿದರು.

193 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 12 ಬೌಂಡರಿಗಳ ಸಹಿತ 117 ರನ್ ಗಳಿಸಿದರು. ಈ ಶತಕದೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾದಲ್ಲಿ ಪ್ರವಾಸಿ ತಂಡದ ನಂಬರ್ 3 ಬ್ಯಾಟರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮೊದಲು ಈ ದಾಖಲೆ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರ ಹೆಸರಿನಲ್ಲಿತ್ತು. ಅವರು 307 ರನ್ ಗಳಿಸಿದ್ದರು. ಆದರೆ ಪಡಿಕ್ಕಲ್ ಈ ಸರಣಿಯಲ್ಲಿ ಈಗಾಗಲೇ 328 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾದಲ್ಲಿ ನಂಬರ್ 3 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಎರಡು ಶತಕ ಸಿಡಿಸಿದ ಪ್ರವಾಸಿ ತಂಡದ ಮೊದಲ ಆಟಗಾರ ಎಂಬ ವಿಶೇಷ ವಿಶ್ವ ದಾಖಲೆಗೂ ಪಡಿಕ್ಕಲ್ ಪಾತ್ರರಾಗಿದ್ದಾರೆ.

ದ್ರಾವಿಡ್‌ರ 27 ವರ್ಷದ ದಾಖಲೆ ಪತನ

ಪಡಿಕ್ಕಲ್ ಅವರ ಅದ್ಭುತ ಪ್ರದರ್ಶನದಿಂದ ಭಾರತದ ದಿಗ್ಗಜ ರಾಹುಲ್ ದ್ರಾವಿಡ್ ಅವರ 27 ವರ್ಷಗಳ ಹಳೆಯ ದಾಖಲೆಯೂ ಪತನವಾಗಿದೆ. ಎರಡು ಪಂದ್ಯಗಳ ವಿದೇಶಿ ಟೆಸ್ಟ್ ಸರಣಿಯಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಗರಿಷ್ಠ ರನ್‌ಗಳ ದಾಖಲೆ ಈ ಹಿಂದೆ ದ್ರಾವಿಡ್ ಹೆಸರಿನಲ್ಲಿತ್ತು. 1998-99ರ ನ್ಯೂಜಿಲೆಂಡ್ ಪ್ರವಾಸದಲ್ಲಿ ದ್ರಾವಿಡ್ 321 ರನ್ ಗಳಿಸಿದ್ದರು. ಇದೀಗ ಪಡಿಕ್ಕಲ್ 328 ರನ್ ಗಳಿಸುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ.

ಶ್ರೀಲಂಕಾ ವಿರುದ್ಧ ತವರಿನಿಂದ ಹೊರಗೆ ನಡೆದ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಗೂ ಪಡಿಕ್ಕಲ್ ಸೇರ್ಪಡೆಯಾಗಿದ್ದಾರೆ. ಈ ಸಾಧನೆ ಮಾಡಿದ ಭಾರತದ ಏಳನೇ ಬ್ಯಾಟರ್ ಅವರು. ಈ ಪಟ್ಟಿಯಲ್ಲಿ ವಿನೋದ್ ಕಾಂಬ್ಳಿ, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಮತ್ತು ಚೇತೇಶ್ವರ ಪೂಜಾರ ಇದ್ದಾರೆ.

ಗಿಲ್ ಅರ್ಧಶತಕ, ಭಾರತ ದಿನದಾಟ ಅಂತ್ಯಕ್ಕೆ 300/5

ಪಡಿಕ್ಕಲ್ ಅವರ ಸತತ ಎರಡನೇ ಟೆಸ್ಟ್ ಶತಕದ ನೆರವಿನಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 300 ರನ್ ಗಳಿಸಿತು. ನಾಯಕ ಶುಭಮನ್ ಗಿಲ್ 50 ರನ್ ಗಳಿಸಿದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 45 ಹಾಗೂ ರವೀಂದ್ರ ಜಡೇಜಾ 43 ರನ್ ಗಳಿಸಿದರು.

ಪಡಿಕ್ಕಲ್ ಮತ್ತು ಗಿಲ್ ಮೂರನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟ ನೀಡಿದರು. ಟೀ ವಿರಾಮದ ವೇಳೆ ಭಾರತ 187/3 ತಲುಪಿದ್ದಾಗ ಗಿಲ್ ವಿಕೆಟ್ ಒಪ್ಪಿಸಿದರು. 108 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 50 ರನ್ ಗಳಿಸಿದ್ದ ಅವರನ್ನು ಅಸಿತ ಫೆರ್ನಾಂಡೊ ಔಟ್ ಮಾಡಿದರು. ದಿನದಾಟ ಮುಕ್ತಾಯದ ವೇಳೆಗೆ ಧ್ರುವ್ ಜುರೆಲ್ 7 ಹಾಗೂ ಸಾರಂಶ್ ಜೈನ್ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.