ಕ್ರಿಕೆಟ್

ಐಪಿಎಲ್‌ನಲ್ಲಿ ಉತ್ತಮ ನಾಯಕತ್ವ; ಟೀಂ ಇಂಡಿಯಾ ಕ್ಯಾಪ್ಟನ್‌ ರೇಸ್‌ನಲ್ಲಿ ರಜತ್ ಪಾಟೀದಾರ್!

ಸೋಲಿನ ನಂತರ ಮಾತನಾಡಿದ ರಜತ್ ಪಾಟೀದಾರ್, ಬ್ಯಾಟಿಂಗ್ ಪ್ರದರ್ಶನವು ಉತ್ತಮವಾಗಿರಲಿಲ್ಲ ಎಂದು ಒಪ್ಪಿಕೊಂಡರು.

ಐಪಿಎಲ್‌ನಲ್ಲಿ ಉತ್ತಮ ನಾಯಕತ್ವ; ಟೀಂ ಇಂಡಿಯಾ ಕ್ಯಾಪ್ಟನ್‌ ರೇಸ್‌ನಲ್ಲಿ ರಜತ್ ಪಾಟೀದಾರ್!
ರಜತ್ ಪಾಟೀದಾರ್
Published On :

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕತ್ವವನ್ನು ರಜತ್ ಪಾಟೀದಾರ್ ವಹಿಸಿಕೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಂಡವು ತವರಿನಲ್ಲಿ ಉತ್ತಮ ಪ್ರದರ್ಶನ ನೀಡದಿರಬಹುದು ಆದರೆ, ಅವರ ನಾಯಕತ್ವದ ಕುರಿತು ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸೋಲಿನ ಸರಣಿ ಮುಂದುವರೆದಿದ್ದು, ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ತವರಿನಲ್ಲಿ ಕಳಪೆ ಫಾರ್ಮ್ ಮುಂದುವರಿಸಿದ್ದು, ಸತತ ಮೂರನೇ ಸೋಲು ಕಂಡಿದೆ.

ಮಳೆಯಿಂದ ತಡವಾಗಿ ಆರಂಭವಾಗಿದ್ದರಿಂದ ಪಂದ್ಯವನ್ನು 14 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಮಾಡಿದ ಆರ್‌ಸಿಬಿ 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ಮುಟ್ಟಿತು. ಸೋಲಿನ ನಂತರ ಮಾತನಾಡಿದ ಪಾಟೀದಾರ್, ಬ್ಯಾಟಿಂಗ್ ಪ್ರದರ್ಶನವು ಉತ್ತಮವಾಗಿರಲಿಲ್ಲ ಎಂದು ಒಪ್ಪಿಕೊಂಡರು.

'ಆರಂಭದಲ್ಲಿ, ಅದು ಸ್ಟಿಕ್ಕಿಯಾಗಿತ್ತು. ಆದರೆ, ನಾವು ಬ್ಯಾಟಿಂಗ್ ಘಟಕವಾಗಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಬಹುದಿತ್ತು. ಪಾರ್ಟನರ್‌ಶಿಪ್ ಮುಖ್ಯವಾಗುತ್ತದೆ; ನಾವು ಬೇಗ ಬೇಗ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ ಮತ್ತು ಅದು ನಮಗೆ ಒಂದು ದೊಡ್ಡ ಪಾಠ. ಕೆಲವು ಪರಿಸ್ಥಿತಿಗಳಿಂದಾಗಿ (ಪಡ್ಡಿಕಲ್ ಅವರನ್ನು ಬಿಟ್ಟಿದ್ದು) ನಾವು ಆ ಬದಲಾವಣೆಯನ್ನು ಮಾಡಬೇಕಾಯಿತು. ವಿಕೆಟ್ ಅಷ್ಟು ಕೆಟ್ಟದಾಗಿರಲಿಲ್ಲ, ಅದು ದೀರ್ಘಕಾಲದವರೆಗೆ ಕವರ್ ಅಡಿಯಲ್ಲಿತ್ತು. ಅದು ಅವರ ಬೌಲರ್‌ಗಳಿಗೆ ಸಹಾಯ ಮಾಡಿತು. ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ವಿಕೆಟ್ ಹೇಗೆ ಇದ್ದರೂ, ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು ಮತ್ತು ಗೆಲುವಿನ ರನ್ ಕಲೆಹಾಕಬೇಕಿತ್ತು. ಬೌಲಿಂಗ್ ಘಟಕವು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ; ಅದು ದೊಡ್ಡ ಸಕಾರಾತ್ಮಕ ಅಂಶವಾಗಿದೆ. ಬ್ಯಾಟ್ಸ್‌ಮನ್‌ಗಳು ಇಂಟೆಟ್ ಇಟ್ಟುಕೊಂಡು ಆಡಿದ್ದಾರೆ; ಅದು ಸಂತೋಷಕರ ಸಂಗತಿಯಾಗಿದೆ. ಬ್ಯಾಟಿಂಗ್ ಘಟಕದಲ್ಲಿ ನಮ್ಮ ಕೆಲವು ತಪ್ಪುಗಳನ್ನು ನಾವು ಸರಿಪಡಿಸಿಕೊಳ್ಳಬೇಕು' ಎಂದು ಪಾಟೀದಾರ್ ಪಂದ್ಯದ ನಂತರ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉತ್ತಪ್ಪ, 'ರಜತ್ ಆರ್‌ಸಿಬಿಯ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಜವಾಬ್ದಾರಿ ವಹಿಸಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ನಾಯಕನಾಗಿ ಉತ್ತಮ ವ್ಯಕ್ತಿತ್ವವನ್ನು ತೋರಿಸುತ್ತಾರೆ. ಅವರು ತವರಿನಲ್ಲಿ ಗೆಲ್ಲುವ ಬಗ್ಗೆ ಕೆಲಸ ಮಾಡಬೇಕು ಮತ್ತು ಅವರು ಹಾಗೆ ಮಾಡಿದರೆ ಭಾರತೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ರೇಸ್‌ನಲ್ಲಿ ಅವರು ಮುಂಚೂಣಿಯಲ್ಲಿರುತ್ತಾರೆ' ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಈ ಆವೃತ್ತಿಯಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡವು ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ. ಆರ್‌ಸಿಬಿ ಐಪಿಎಲ್ 2025ರಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಆದರೆ, ಅವೆಲ್ಲವೂ ತವರಿನಿಂದ ಹೊರಗೆ ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.