ಕ್ರಿಕೆಟ್

'ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ': ಇದು ಆಘಾತಕಾರಿ, ಮನುಷ್ಯರೊಂದಿಗೆ ಯಾರೂ ಆ ರೀತಿ ನಡೆದುಕೊಳ್ಳಲ್ಲ; ಪಾಕ್ ವಿರುದ್ಧ ರವಿ ಶಾಸ್ತ್ರಿ ಕಿಡಿ

ಶಾಸ್ತ್ರಿ ಅವರು ಇಮ್ರಾನ್ ಶೀಘ್ರ ಗುಣಮುಖರಾಗಲಿ ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಲಿ ಎಂದು ಹಾರೈಸಿದ್ದಲ್ಲದೆ, ಕ್ರೀಡೆಗೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

'ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ': ಇದು ಆಘಾತಕಾರಿ, ಮನುಷ್ಯರೊಂದಿಗೆ ಯಾರೂ ಆ ರೀತಿ ನಡೆದುಕೊಳ್ಳಲ್ಲ; ಪಾಕ್ ವಿರುದ್ಧ ರವಿ ಶಾಸ್ತ್ರಿ ಕಿಡಿ
ರವಿ ಶಾಸ್ತ್ರಿ
Published On :

ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತಾದ ಕಳವಳಗಳ ನಡುವೆ, ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ, ಜೈಲಿನಲ್ಲಿರುವ ಮಾಜಿ ಪ್ರಧಾನಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. 2023ರಿಂದ ಪಾಕಿಸ್ತಾನದ ಜೈಲಿನಲ್ಲಿರುವ ಇಮ್ರಾನ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಹಾಗೂ ರಾಜತಾಂತ್ರಿಕ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಅನೇಕ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಧ್ವನಿ ಎತ್ತಿದ್ದಾರೆ.

'ರಿಪಬ್ಲಿಕ್ ವರ್ಲ್ಡ್' ಜೊತೆಗಿನ ಸಂವಾದದ ವೇಳೆ ಶಾಸ್ತ್ರಿ ಕೂಡ ಈ ಕುರಿತು ಕಳವಳ ವ್ಯಕ್ತಪಡಿಸಿದ್ದು, ಇಮ್ರಾನ್ ಅವರೊಂದಿಗೆ ಪಾಕಿಸ್ತಾನ ನಡೆಸಿಕೊಳ್ಳುತ್ತಿರುವ ರೀತಿಯನ್ನು 'ಅಮಾನವೀಯ' ಎಂದು ಬಣ್ಣಿಸಿದ್ದಾರೆ. ವರದಿಗಳ ಪ್ರಕಾರ, ಜೈಲಿನಲ್ಲಿ ಇಮ್ರಾನ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರ ಬಲಗಣ್ಣಿನ ದೃಷ್ಟಿ ಕೇವಲ ಶೇ 15ರಷ್ಟು ಮಾತ್ರ ಉಳಿದಿದೆ.

'ನಾನೇನೂ ರಾಜಕಾರಣಿಯಲ್ಲ. ಆದರೆ, ಇಂದು ಅವರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡುವುದೇ ಆಘಾತಕಾರಿ. ಮನುಷ್ಯರೊಂದಿಗೆ ಯಾರೂ ಆ ರೀತಿ ನಡೆದುಕೊಳ್ಳುವುದಿಲ್ಲ. ಮಾನವೀಯ ದೃಷ್ಟಿಕೋನದಿಂದ ಹೇಳುವುದಾದರೆ, ಅವರು ಈಗ ಎದುರಿಸುತ್ತಿರುವ ಪರಿಸ್ಥಿತಿಗೆ ಅರ್ಹರಲ್ಲ ಎಂದೇ ನನ್ನ ಭಾವನೆ. ಹಾಗಾಗಿ, ನಾನು ಕೇವಲ ನನ್ನ ಪರವಾಗಿ ಮಾತ್ರ ಮಾತನಾಡುತ್ತಿಲ್ಲ; ಪ್ರಪಂಚದಾದ್ಯಂತ ಇರುವ ಅನೇಕ ಕ್ರಿಕೆಟಿಗರು ಇದೇ ಅಭಿಪ್ರಾಯವನ್ನು ಹೊಂದಿರಬಹುದು ಎಂದು ನನಗೆ ಅನ್ನಿಸುತ್ತದೆ' ಎಂದು ಶಾಸ್ತ್ರಿ ಹೇಳಿದರು.

ಶಾಸ್ತ್ರಿ ಅವರು ಇಮ್ರಾನ್ ಶೀಘ್ರ ಗುಣಮುಖರಾಗಲಿ ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಲಿ ಎಂದು ಹಾರೈಸಿದ್ದಲ್ಲದೆ, ಕ್ರೀಡೆಗೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

'ಅವರು ಕ್ಷೇಮವಾಗಿರಲಿ ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಲಿ ಎಂದು ನಾನು ಆಶಿಸುತ್ತೇನೆ. ಏಕೆಂದರೆ, ಅವರು ಈ ಕ್ರೀಡೆಗೆ ನೀಡಿದ ಕೊಡುಗೆ ಅತ್ಯಂತ ವಿಶೇಷವಾದುದು. ಒಬ್ಬ ಅತ್ಯುತ್ತಮ ನಾಯಕನಾಗಿ ಅವರೊಂದಿಗಿನ ನನ್ನ ನೆನಪುಗಳು ಅಚ್ಚಳಿಯದೆ ಉಳಿದಿವೆ; ನಿಜಕ್ಕೂ ಅವರು ಜನರನ್ನು ಮುನ್ನಡೆಸುವ ನಾಯಕರಾಗಿದ್ದರು. ಯುವ ಆಟಗಾರರನ್ನು ಪ್ರೇರೇಪಿಸಿ, ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಸಾಮರ್ಥ್ಯ ಅವರಿಗಿತ್ತು. 40ನೇ ವಯಸ್ಸಿನಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಅವರು, ಸಾಕಷ್ಟು ಯುವ ಆಟಗಾರರನ್ನು ಒಳಗೊಂಡ ತಂಡದೊಂದಿಗೆ ವಿಶ್ವಕಪ್ ಗೆದ್ದುಕೊಂಡಿದ್ದರು' ಎಂದು ಹೇಳಿದರು.

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮುಖವಾಗಿ ಗುರುತಿಸಿಕೊಂಡಿರುವ ಇಮ್ರಾನ್ ಉತ್ತಮ ನಡವಳಿಕೆಗೆ ಅರ್ಹರು ಎಂದು ಹೇಳಿದ ಶಾಸ್ತ್ರಿ, ಅವರ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

'ಆಶಾದಾಯಕವಾಗಿ, ಅವರು ಹೊರಬಂದು ಉತ್ತಮ ಚಿಕಿತ್ಸೆ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ದೀರ್ಘಕಾಲದಿಂದ ಆ ಸ್ಥಾನದಲ್ಲಿದ್ದಾರೆ. ರಾಜಕೀಯದ ಒಳನೋಟಗಳು ನನಗೆ ಅರ್ಥವಾಗದಿದ್ದರೂ, ಬೇರೆ ಯಾರಾದರೂ ಇದೇ ಪರಿಸ್ಥಿತಿಯಲ್ಲಿ ಬೇರೆಡೆ ಇರಬಹುದಿತ್ತು. ಆದರೆ ಅಲ್ಲಿನ ಸೆಲ್‌ನಲ್ಲಿ (ಜೈಲಿನಲ್ಲಿ) ಕಾಲ ಕಳೆಯುವಂತಹ ಸ್ಥಿತಿ ಅವರಿಗೆ ಸಲ್ಲದು; ಏಕೆಂದರೆ ಜಾಗತಿಕವಾಗಿ ಅವರು ಅತ್ಯಂತ ಪ್ರಸಿದ್ಧ ಪಾಕಿಸ್ತಾನಿ ವ್ಯಕ್ತಿತ್ವವಾಗಿದ್ದಾರೆ. ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ, ಇದು ನನ್ನ ಅಭಿಪ್ರಾಯ' ಎಂದರು.

'ನನ್ನೊಂದಿಗೆ ಅಲ್ಲಿ ನೀವು ನೋಡುತ್ತಿರುವ ಈ ವ್ಯಕ್ತಿ ಒಬ್ಬ ಅದ್ಭುತ ಕ್ರಿಕೆಟಿಗರಾಗಿದ್ದರು. ವಾಸ್ತವವಾಗಿ, ಅವರನ್ನು ಕೇವಲ 'ಶ್ರೇಷ್ಠ ಕ್ರಿಕೆಟಿಗ' ಎಂದು ಕರೆಯುವುದು ಅವರ ವ್ಯಕ್ತಿತ್ವಕ್ಕೆ ಸಾಲದು. ನಮ್ಮ ನಡುವಿನ ಪೈಪೋಟಿ ಪರಸ್ಪರ ಗೌರವದ ಮೇಲಿದ್ದದ್ದಾಗಿತ್ತು. ಆ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸಾಕಷ್ಟು ಕ್ರಿಕೆಟ್ ಆಡುತ್ತಿದ್ದವು, ಹಾಗಾಗಿ ಸಹಜವಾಗಿಯೇ ಆ ಪೈಪೋಟಿ ಇತ್ತು. ಆದರೆ ಒಬ್ಬ ಕ್ರಿಕೆಟಿಗರಾಗಿ ಅವರು ಅಸಾಧಾರಣ ವ್ಯಕ್ತಿಯಾಗಿದ್ದರು. ಅವರು ಒಬ್ಬ ನಾಯಕರಾಗಿದ್ದರು - ಜನರನ್ನು ಮುನ್ನಡೆಸುವ ನಾಯಕ. ಒಬ್ಬ ಅದ್ಭುತ ಆಲ್‌ರೌಂಡರ್ ಆಗಿದ್ದರು' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.