ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್: ರಿಚಾ, ಜೆಮಿಮಾಗೆ ಬಡ್ತಿ; ಸ್ಥಾನ ಕಳೆದುಕೊಂಡ ಶಿಖಾಪಾಂಡೆ, ತಾನಿಯಾ; ಹಲವರಿಗೆ ಹಿಂಬಡ್ತಿ
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪರಿಷ್ಕರಿಸಿದ್ದು, ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರಿಗೆ ಬಡ್ತಿ ನೀಡಿದೆ.

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪರಿಷ್ಕರಿಸಿದ್ದು, ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರಿಗೆ ಬಡ್ತಿ ನೀಡಿದೆ.
ಹೌದು.. ಭಾರತ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೇಂದ್ರ ಗುತ್ತಿಗೆಯಲ್ಲಿ ಬಡ್ತಿ ಗಳಿಸಿದ್ದು, ರಿಚಾ ಮತ್ತು ಜೆಮಿಮಾ ಅವರು ಸಿ ಯಿಂದ ಬಿ ವಿಭಾಗಕ್ಕೆ ಬಡ್ತಿಯಾಗಿದ್ದಾರೆ. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂದಾನ ಎ ಕೆಟಗರಿಯಲ್ಲಿ ಮುಂದುವರಿದಿದ್ದಾರೆ. ಈ ವಿಭಾಗದಲ್ಲಿ ಮೂವರಿಗೆ ಮಾತ್ರ ಸ್ಥಾನ ನೀಡಲಾಗಿದೆ.
ಗುರುವಾರ ಬಿಸಿಸಿಐ ಪಟ್ಟಿ ಪ್ರಕಟಿಸಿದ್ದು, ಇದು ಈ ಅಕ್ಟೋಬರ್‌ನಿಂದ ಮುಂದಿನ ಸೆಪ್ಟೆಂಬರ್‌ವರೆಗೆ ಜಾರಿಯಾಗಲಿದೆ. ಒಟ್ಟು 17 ಆಟಗಾರ್ತಿಯರು ಗುತ್ತಿಗೆ ಪಡೆದುಕೊಂಡಿದ್ದಾರೆ. ಹೋದ ವರ್ಷ ಮಹಿಳಾ ಕ್ರಿಕೆಟಿಗರಿಗೂ ಸಮಾನ ವೇತನವನ್ನು ಬಿಸಿಸಿಐ ಘೋಷಿಸಿತ್ತು. ಎ ಕೆಟಗರಿಯ ಆಟಗಾರ್ತಿಯರಿಗೆ 50 ಲಕ್ಷ, ಬಿ ಮತ್ತು ಸಿ ಕೆಟಗರಿಯವರಿಗೆ ಕ್ರಮವಾಗಿ 30 ಹಾಗೂ 10 ಲಕ್ಷ ರೂ ವಾರ್ಷಿಕವಾಗಿ ನೀಡಲಾಗುತ್ತದೆ.
ಸ್ಥಾನ ಕಳೆದುಕೊಂಡ ಶಿಖಾಪಾಂಡೆ, ತಾನಿಯಾ
ಶಿಖಾ ಪಾಂಡೆ ಹಾಗೂ ತಾನಿಯಾ ಭಾಟಿಯಾ ಈ ಪಟ್ಟಿಯಿಂದ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ ಅವರಿಗೆ ಬಿ ಕೆಟಗರಿಗೆ ಹಿಂಬಡ್ತಿ ನೀಡಲಾಗಿದ್ದು, ಲೆಗ್‌ಸ್ಪಿನ್ನರ್ ಪೂನಂ ಯಾದವ್ ಹೋದ ವರ್ಷ ಎ ವಿಭಾಗದಲ್ಲಿದ್ದರು. ಆದರೆ ಈಗ ಗುತ್ತಿಗೆಯ ಪಟ್ಟಿಯಿಂದ ಹೊರಬಿದ್ದಿದ್ದಾರೆ. 2022ರ ಮಾರ್ಚ್‌ನಲ್ಲಿ ಅವರು ಕೊನೆಯ ಪಂದ್ಯ ಆಡಿದ್ದರು. ಹೋದ ವರ್ಷ ಗುತ್ತಿಗೆಯಲ್ಲಿರದ ರೇಣುಕಾ ಠಾಕೂರ್ ಅವರು ಈ ಬಾರಿ ನೇರವಾಗಿ ಬಿ ವಿಭಾಗದಲ್ಲಿ ಸ್ಥಾನ ಗಳಿಸಿದ್ದಾರೆ.
ವೇಗಿ ಮೇಘನಾ ಸಿಂಗ್, ಬ್ಯಾಟರ್ ದೇವಿಕಾ ವೈದ್ಯ, ಆರಂಭಿಕ ಆಟಗಾರ್ತಿ ಎಸ್ ಮೇಘನಾ, ರಾಧಾ ಯಾದವ್, ಎಡಗೈ ವೇಗಿ ಅಂಜಲಿ ಸರ್ವಾಣಿ ಮತ್ತು ಬ್ಯಾಟರ್ ಯಾಸ್ತಿಕಾ ಭಾಟಿಯಾ ಅವರು ಸಿ ವಿಭಾಗಕ್ಕೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಉಳಿದಂತೆ ಹರ್ಲೀನ್ ಡಿಯೋಲ್ ಮತ್ತು ಸ್ನೇಹ್ ರಾಣಾ ಅವರು ಅತ್ಯಂತ ಕಡಿಮೆಯ ಸಿ ವಿಭಾಗದಲ್ಲಿ ಉಳಿದಿದ್ದಾರೆ, ಗಾಯಾಳು ಆಲ್‌ರೌಂಡರ್ ಪೂಜಾ ವಸ್ತ್ರಾಕರ್ ಅವರನ್ನು ಬಿ ಯಿಂದ ಸಿ ವಿಭಾಗಕ್ಕೆ ಹಿಂಬಡ್ತಿ ನೀಡಲಾಗಿದೆ.
ಸೆಂಟ್ರಲ್ ಕಾಂಟ್ರ್ಯಾಕ್ಟ್ ನಲ್ಲಿರುವವರ ವಿವರ ಇಂತಿದೆ:
ವಿಭಾಗ ಎ:
ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ, ದೀಪ್ತಿ ಶರ್ಮಾ.
ವಿಭಾಗ ಬಿ:
ರೇಣುಕಾ ಠಾಕೂರ್, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ರಿಚಾ ಘೋಷ್, ರಾಜೇಶ್ವರಿ ಗಾಯಕವಾಡ.
ವಿಭಾಗ ಸಿ:
ಮೇಘನಾ ಸಿಂಗ್, ದೇವಿಕಾ ವೈದ್ಯ, ಎಸ್. ಮೇಘನಾ, ಅಂಜಲಿ ಶರವಣಿ, ಪೂಜಾ ವಸ್ತ್ರಕರ್, ಸ್ನೇಹಾ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೊಲ್, ಯಷ್ಟಿಕಾ ಭಾಟಿಯಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


