Commonwealth Games T20: ಮೊದಲ ಪಂದ್ಯದಲ್ಲೇ ಭಾರತ ವನಿತೆಯರ ಮಣಿಸಿದ ಆಸ್ಟ್ರೇಲಿಯಾ
ಬಹು ನಿರೀಕ್ಷಿತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಭಾರತ ವನಿತೆಯರ ತಂಡವನ್ನು ಆಸ್ಟ್ರೇಲಿಯಾ ವನಿತೆಯರ ತಂಡ 3 ವಿಕೆಟ್ ಅಂತರದಲ್ಲಿ ಮಣಿಸಿದೆ.

ಬರ್ಮಿಂಗ್ ಹ್ಯಾಮ್: ಬಹು ನಿರೀಕ್ಷಿತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಭಾರತ ವನಿತೆಯರ ತಂಡವನ್ನು ಆಸ್ಟ್ರೇಲಿಯಾ ವನಿತೆಯರ ತಂಡ 3 ವಿಕೆಟ್ ಅಂತರದಲ್ಲಿ ಮಣಿಸಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಆಟವಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತದ ವಿರುದ್ಧ 3 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯರಾದ ಆ್ಯಶ್ಲೆ ಗಾರ್ಡನರ್ ಹಾಗೂ ಗ್ರೇಸ್ ಹ್ಯಾರಿಸ್ ಅಕ್ಷರಶಃ ಭಾರತದ ಕೈ ಯಿಂದ ಜಯ ಕಸಿದುಕೊಂಡರು.
ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ (48), ಸ್ಮೃತಿ ಮಂದಾನಾ (24) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (52) ಅವರ ಉತ್ತಮ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತ್ತು.
ಭಾರತ ನೀಡಿದ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಅಲಿಸ್ಸಾ ಹೀಲಿ ಶೂನ್ಯಕ್ಕೆ ಔಟಾದರೆ, ನಾಯಕಿ ಮೆಗ್ ಲ್ಯಾನಿಂಗ್ 8 ರನ್ ಗಳಿಸಿ ರೇಣುಕಾ ಸಿಂಗ್ ಬೌಲಿಂಗ್ ನಲ್ಲಿ ಔಟಾದರು. ತಂಡದ ಮೊತ್ತ ಕೇವಲ 34 ರನ್ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿದ ರೇಣುಕಾ, ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಅವರು ನಾಲ್ಕು ಓವರ್‌ಗಳಲ್ಲಿ 18 ರನ್ ಕೊಟ್ಟು 4 ವಿಕೆಟ್ ಕಬಳಿಸಿ ಮಿಂಚಿದರು.
ಒಂದು ಹಂತದಲ್ಲಿ 49 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ, ಭಾರತಕ್ಕೆ ಸುಲಭ ತುತ್ತಾಗುವ ಭೀತಿಯಲ್ಲಿತ್ತು. ಆದರೆ, ಈ ಹಂತದಲ್ಲಿ ಜೊತೆಯಾದ ಗಾರ್ಡನರ್ (52) ಹಾಗೂ ಹ್ಯಾರಿಸ್ (37) ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಆರನೇ ವಿಕೆಟ್‌ಗೆ ಅರ್ಧಶತಕದ (51 ರನ್) ಜೊತೆಯಾಟವಾಡಿದ ಈ ಜೋಡಿ, ತಮ್ಮ ತಂಡದ ಇನಿಂಗ್ಸ್‌ಗೆ ಚೇತರಿಕೆ ನೀಡಿತು. ಹ್ಯಾರಿಸ್ ಕೇವಲ 20 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 37 ರನ್ ಗಳಿಸಿ ಔಟಾದರು. ಗಾರ್ಡನರ್ 35 ಎಸೆತಗಳಲ್ಲಿ 52 ರನ್ ಬಾರಿಸಿ ಅಜೇಯ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯಲ್ಲಿ ಅಲಾನ ಕಿಂಗ್ (18 ಅಜೇಯ) ಬಿರುಸಿನ ಆಟವಾಡಿ, ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 3 ವಿಕೆಟ್ ಅಂತರದ ಜಯ ಸಾಧಿಸುವಂತೆ ಮಾಡಿದರು.
ಇದನ್ನೂ ಓದಿ: ಕ್ರೀಡಾ ಗ್ರಾಮಕ್ಕೆ ಕೋಚ್ ಗೆ ಪ್ರವೇಶ ನಿರಾಕರಣೆ; ಕೋಚಿಂಗ್ ನಿರಾಕರಿಸಿ ಕಿರುಕುಳ: ಒಲಿಂಪಿಕ್ಸ್ ಪದಕ ವಿಜೇತೆ ಲೊವ್ಲಿನಾ ಆರೋಪ
ಅಂತಿಮವಾಗಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 3 ವಿಕೆಟ್ ಗಳ ಜಯ ಸಾಧಿಸಿತು. ಇದರೊಂದಿಗೆ ಆಸ್ಟ್ರೇಲಿಯಾ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿತು. ಭಾರತ ತಂಡವು ಜುಲೈ 31 ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದು, ಅದೇ ದಿನ ಆಸ್ಟ್ರೇಲಿಯಾ ಬಾರ್ಬಡಾಸ್ ವಿರುದ್ಧ ಸೆಣಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


