ಕ್ರಿಕೆಟ್

'ಆಫ್ರಿಕನ್ನರಿಗೂ ವಿರಾಟ ರೂಪ' ತೋರಿಸಿದ ಹಾರ್ದಿಕ್ ಪಾಂಡ್ಯಾ, ಕೂದಲೆಳೆ ಅಂತರದಲ್ಲಿ ಶತಕ ಮಿಸ್!

ಈ ಹಿಂದೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳನ್ನು ಬಿಟ್ಟೂ ಬಿಡದೆ ಕಾಡಿದ್ದ ಭಾರತದ ಹಾರ್ದಿಕ್ ಪಾಂಡ್ಯಾ ಇದೀಗ ಆಫ್ರಿಕನ್ನರಿಗೂ ತಮ್ಮ ವಿರಾಟ ರೂಪ ತೋರಿಸಿದ್ದಾರೆ.

'ಆಫ್ರಿಕನ್ನರಿಗೂ ವಿರಾಟ ರೂಪ' ತೋರಿಸಿದ ಹಾರ್ದಿಕ್ ಪಾಂಡ್ಯಾ, ಕೂದಲೆಳೆ ಅಂತರದಲ್ಲಿ ಶತಕ ಮಿಸ್!
ಆಫ್ರಿಕಾ ವಿರುದ್ಧ ಪಾಂಡ್ಯಾ ಸಾಹಸ
Published On :
ಕೇಪ್ ಟೌನ್: ಈ ಹಿಂದೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳನ್ನು ಬಿಟ್ಟೂ ಬಿಡದೆ ಕಾಡಿದ್ದ ಭಾರತದ ಹಾರ್ದಿಕ್ ಪಾಂಡ್ಯಾ ಇದೀಗ ಆಫ್ರಿಕನ್ನರಿಗೂ ತಮ್ಮ ವಿರಾಟ ರೂಪ ತೋರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಹಾರ್ದಿಕ್ ಪಾಂಡ್ಯಾ ಅಮೋಘ ಬ್ಯಾಟಿಂಗ್ ಮಾಡಿದ್ದು, ಭರ್ಜರಿ 93 ರನ್ ಗಳಿಸುವ  ಮೂಲಕ ಭಾರತದ ಮಾನ ಕಾಪಾಡಿದ್ದಾರೆ. ಒಂದು ಹಂತದಲ್ಲಿ ನೂರರ ಗಡಿದಾಟುವುದು ಅನುಮಾನವೆನಿಸಿದ್ದ ಮೊದಲ ಇನಿಂಗ್ಸ್‌ಗೆ ಜೀವ ತುಂಬಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 95 ಎಸೆತಗಳಲ್ಲಿ 93 ರನ್  ಸಿಡಿಸಿದರು. ಈ ಪೈಕಿ 14 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿತ್ತು.
ಮೊದಲ ದಿನ ಭಾರತದ ಬೌಲರ್‌ಗಳನ್ನು ಕಾಡಿದ್ದ ವಿಲಿಯರ್ಸ್‌-ಪ್ಲೆಸಿಸ್ ಜೋಡಿಯ ಆಟಕ್ಕೆ ಪ್ರತಿಯಾಟ ಎಂಬಂತೆ ಬಿರುಸಾಗಿ ಆಡಿದ ಪಾಂಡ್ಯ ಏಕಾಂಗಿಯಾಗಿ ಆಫ್ರಿಕಾದ ಅಗ್ರ ವೇಗಿಗಳನ್ನು ಕ್ರೀಸಿನಲ್ಲಿದ್ದಷ್ಟೂ ಕಾಲ ಕಾಡಿದರು.  ಬೌಂಡರಿ, ಸಿಕ್ಸರ್ ಮೂಲಕ ಶತಕದ ಅಂಚಿನಲ್ಲಿದ್ದ ಪಾಂಡ್ಯಾ ರಬಾಡಾ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಡಿಕಾಕ್ ಗೆ ಕ್ಯಾಚ್ ನೀಡಿ ಹೊರ ನಡೆದರು. ಪಾಂಡ್ಯಾ ಸಾಹಸದಿಂದಾಗಿ ಭಾರತ 200 ರನ್ ಗಳ ಗಡಿ ದಾಟಿ  ಮಾನ ಉಳಿಸಿಕೊಂಡಿತು. ಟೀಂ ಇಂಡಿಯಾ ಗಳಿಸಿದ ಒಟ್ಟಾರೆ ರನ್ ಗಳಿಕೆಯಲ್ಲಿ ಪಾಂಡ್ಯಾ ಒಬ್ಬರದ್ದೇ ಶೇ.44.5ರಷ್ಟು ರನ್ ಶೇಖರಣೆ ಮಾಡಿದ್ದಾರೆ.
ಬ್ಯಾಟಿಂಗ್ ಬಳಿಕ ಬೌಲಿಂಗ್ ನಲ್ಲೂ ಆಫ್ರಿಕನ್ನರಿಗೆ ಪಾಂಡ್ಯಾ ದುಃಸ್ವಪ್ನ
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ನಲ್ಲಿ ಕಾಡಿದ ಪಾಂಡ್ಯಾ ಬಳಿಕ ಬೌಲಿಂಗ್ ನಲ್ಲೂ ಅಫ್ರಿಕನ್ನರನ್ನು ಕಾಡಿದರು. 81 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ  ಪ್ರಮುಖ 2 ವಿಕೆಟ್ ಕಬಳಿಸುವ ಮೂಲಕ ಮತ್ತೆ ಪಾಂಡ್ಯಾ ಆಫ್ರಿಕನ್ನರಿಗೆ ಕಬ್ಬಿಣದ ಕಡಲೆಯಾದರು. ಭಾರತ ಆಲ್ ಔಟ್ ಆದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ ತಂಡ, ಮೊದಲ ಇನಿಂಗ್ಸ್‌ನಲ್ಲಿ ಆಗಿದ್ದ ತಪ್ಪುಗಳನ್ನು  ಪುನರಾವರ್ತಿಸದೆ ಆಡಿತು. ಆಫ್ರಿಕಾದ ಆರಂಭಿಕರಾದ ಡೀನ್ ಎಲ್ಗರ್(25 ರನ್) ಹಾಗೂ ಮಾರ್ಕ್‌ರಾಮ್(34 ರನ್) ಮೊದಲ ವಿಕೆಟ್‌ ಗೆ 52ರನ್ ಜತೆಯಾಟವಾಡಿದರು. ಆದರೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದ ಈ ಇಬ್ಬರೂ  ಆಟಗಾರರನ್ನು ಹಾರ್ದಿಕ್ ಪಾಂಡ್ಯಾ ಪೆವಿಲಿಯನ್ ಗೆ ಅಟ್ಟಿದರು. ಮಾರ್ಕ್‌ರಾಮ್, ಭುವಿಗೆ ಕ್ಯಾಚ್ ನೀಡಿದರೆ, ಎಲ್ಗಾರ್ ವಿಕೆಟ್ ಕೀಪರ್ ಸಾಹಗೆ ಕ್ಯಾಚ್ ಕೊಟ್ಟು ಹೊರನಡೆದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.