ಬಾಂಗ್ಲಾ ಸೋಲಿಗೆ "ಮಾಸ್ಟರ್ ಮೈಂಡ್ ಧೋನಿ" ಕಾರಣ?; ಕೊಹ್ಲಿ ಹೇಳಿದ್ದೇನು!
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಸೆಮಿ ಫೈನಲ್ ಪಂದ್ಯದಲ್ಲಿ ಕೇದಾರ್ ಜಾದವ್ ಗೆ ಬಾಲ್ ನೀಡುವಂತೆ ಧೋನಿ ಸಲಹೆ ನೀಡಿದ್ದರು. ಧೋನಿ ಸಲಹೆ ವರ್ಕೌಟ್ ಆಗಿ ಬಾಂಗ್ಲಾದೇಶದ ರನ್ ವೇಗಕ್ಕೆ ಕಡಿವಾಣ ಬಿದ್ದಿತ್ತು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಸೆಮಿ ಫೈನಲ್ ಪಂದ್ಯದಲ್ಲಿ ಕೇದಾರ್ ಜಾದವ್ ಗೆ ಬಾಲ್ ನೀಡುವಂತೆ ಧೋನಿ ಸಲಹೆ ನೀಡಿದ್ದರು. ಧೋನಿ ಸಲಹೆ ವರ್ಕೌಟ್ ಆಗಿ ಬಾಂಗ್ಲಾದೇಶದ ರನ್ ವೇಗಕ್ಕೆ ಕಡಿವಾಣ ಬಿದ್ದಿತ್ತು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಒಂದು ಹಂತದಲ್ಲಿ ನಮ್ಮಿಂದ ಕೈ ಜಾರುತ್ತಿದ್ದ ಪಂದ್ಯವನ್ನು ಪುನಃ ನಮ್ಮ ಕಡೆ ವಾಲುವಂತೆ ಮಾಡಿದ್ದು, ಮಾಜಿ ನಾಯಕ ಎಂ.ಎಸ್. ಧೋನಿ ತೋರಿದ ಚಾಣಾಕ್ಷ ನಿರ್ಧಾರ. ಈ ಬದಲಾವಣೆಯಿಂದ ನಾವು ಬಾಂಗ್ಲಾ ವಿರುದ್ಧ ಸುಲಭ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಕೊಹ್ಲಿ ಹೇಳಿದ್ದಾರೆ. "ಬಾಂಗ್ಲಾ ಬ್ಯಾಟ್ಸ್‌ಮನ್ ಗಳಾದ ತಮೀಮ್ ಇಕ್ಬಾಲ್ ಮತ್ತು ಮುಷ್ಫೀಕರ್ ರಹೀಮ್ ತಲಾ ಅರ್ಧಶತಕ ಗಳಿಸಿ ಮೈದಾನದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಈ ಹಂತದಲ್ಲಿ ಅಂದರೆ ಇನ್ನಿಂಗ್ಸ್ ನ 25ನೇ ಓವರ್ ನಲ್ಲಿ ಧೋನಿ ಜಾದವ್ ಗೆ ಓವರ್ ಮಾಡುವಂತೆ ಹೇಳು ಎಂದು ಸಲಹೆ ನೀಡಿದರು. ಒಂದಷ್ಟು ಹೊತ್ತು ನಾನು ಮತ್ತು ಧೋನಿ ಈ ಬಗ್ಗೆ ಚರ್ಚಿಸಿ ಬಳಿಕ ಇಬ್ಬರೂ ಜೊತೆಗೂಡಿ ಜಾದವ್ ಓವರ್ ನೀಡಲು ಮುಂದಾದೆವು.
ಅದರಂತೆ ಬೌಲಿಂಗ್ ಮಾಡಿದ ಜಾಧವ್ ಮೈದಾನದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ತಮೀಮ್ ಹಾಗೂ ರಹೀಮ್ ವಿಕೆಟ್ ಪಡೆದು ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸುವಂತೆ ಮಾಡಿದ್ದರು. ಪಂದ್ಯದ ಮೇಲೆ ನಾವು ಹಿಡಿತ ಸಾಧಿಸಲು ಜಾಧವ್ ತೆಗೆದುಕೊಂಡ ಆ ಎರಡು ವಿಕೆಟ್‌ಗಳು ಕಾರಣ. ಜಾಧವ್ ಗೆ ಈ ಸಮಯದಲ್ಲಿ ಬೌಲಿಂಗ್ ನೀಡುವ ನಿರ್ಧಾರ ಕೈಗೊಂಡಿದ್ದು ನಾನು ಮತ್ತು ಧೋನಿ. ಈ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಧೋನಿಗೆ ಸಲ್ಲಬೇಕು. ನೆಟ್ಸ್‌ನಲ್ಲಿ ಕೇದಾರ್ ಅಷ್ಟೊಂದು ಒಳ್ಳೆಯ ಬೌಲರ್ ಅಲ್ಲ, ಆದರೆ ಆತ ಓರ್ವ ಸ್ಮಾರ್ಟ್ ಕ್ರಿಕೆಟರ್. ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಗೊಂದಲಕ್ಕೀಡು ಮಾಡಬೇಕೆಂಬುದು ಆತನಿಗೆ ಚೆನ್ನಾಗಿ ಗೊತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ.
ನಿನ್ನೆ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ರನ್ ಕಲೆ ಹಾಕುತ್ತಿತ್ತು. ಇನ್ನಿಂಗ್ಸ್ ನ 25 ನೇ ಓವರ್ ವರೆಗೂ ಭರ್ಜರಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 5.68 ಸರಾಸರಿಯಲ್ಲಿ ಕೇವಲ 2 ವಿಕೆಟ್ ಗಳನ್ನು ಕಳೆದುಕೊಂಡು ಭರ್ಜರಿ 142 ರನ್ ಕಲೆ ಹಾಕಿತ್ತು. ಈ ಹಂತದಲ್ಲಿ ಬೌಲಿಂಗ್ ನಲ್ಲಿ ಬದಲಾವಣೆ ತಂದ ನಾಯಕ ಕೊಹ್ಲಿ ಜಾದವ್ ಕೈಗೆ ಚೆಂಡನ್ನಿತ್ತರು. ಜಾದವ್ ಕೈಗೆ ಬಾಲ್ ಬಂದಿದ್ದೇ ತಡ ಬಾಂಗ್ಲಾದೇಶ ರನ್ ವೇಗಕ್ಕೆ ಕಡಿವಾಣ ಬಿತ್ತು. ನಾಯಕನ ಭರವಸೆಯಂತೆ ಬೌಲಿಂಗ್ ಮಾಡಿದ ಜಾಧವ್ ಮೈದಾನದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ತಮೀಮ್ ಹಾಗೂ ರಹೀಮ್ ವಿಕೆಟ್ ಪಡೆದು ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸುವಂತೆ ಮಾಡಿದ್ದರು.
1 ರಿಂದ 25ನೇ ಓವರ್ ವರೆಗೂ ಬಾಂಗ್ಲಾದೇಶ 5.68 ಸರಾಸರಿಯಲ್ಲಿ ರನ್ ಗಳಿಸಿದ್ದರೆ, 25ನೇ ಓವರ್ ನಿಂದ 50ನೇ ಓವರ್ ವರೆಗೂ ಬಾಂಗ್ಲಾದೇಶ ತಂಡ ಕೇವಲ 3.73ರ ಸರಾಸರಿಯಲ್ಲಿ 122 ರನ್ ಗಳಿಕೆ ಮಾಡಿತ್ತು. ಅಂತಿಮ ಹಂತದ ಓವರ್ ಗಳಲ್ಲಿಯಂತೂ ಬಾಂಗ್ಲಾದೇಶ ರನ್ ಗಳಿಸಲು ಪರದಾಡಿದ್ದಂತೂ ಸತ್ಯ. ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶ ಕವೇಲ 6 ರನ್ ಗಳಿಸಿದ್ದು ಇದಕ್ಕೆ ಸ್ಪಷ್ಟ ನಿದರ್ಶನ. ಒಂದು ಹಂತದಲ್ಲಿ ಬಾಂಗ್ಲಾದೇಶ 300ರ ಗಡಿ ದಾಟಬಹುದು ಎಂದು ಎಣಿಸಲಾಗಿತ್ತು. ಆದರೆ ಜಾದವ್ ಜಾದೂ ಭಾರತಕ್ಕೆ ಆನೆ ಬಲ ತಂದಿತ್ತು. ಇಂದಿನ ಪಂದ್ಯದಲ್ಲಿ ಕೇದಾರ್ ಜಾದವ್ ಅತ್ಯಂತ ಕಡಿಮೆ ರನ್ ನೀಡಿದ (ಮೋಸ್ಟ್ ಎಕನಾಮಿಕ್) ಬೌಲರ್ ಎಂಬ ಕೀರ್ತಿಗೂ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


