ಕೊಹ್ಲಿ ಅಭಿಪ್ರಾಯದ ಬಳಿಕವಷ್ಟೇ ನೂತನ ಕೋಚ್ ಘೋಷಣೆ: ಸೌರವ್ ಗಂಗೂಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಸಂಗ್ರಹದ ಬಳಿಕವಷ್ಟೇ ನೂತನ ಕೋಚ್ ಯಾರೆಂದು ಪ್ರಕಟಿಸಲಾಗುತ್ತದೆ ಎಂದು ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಹೇಳಿದ್ದಾರೆ.

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಸಂಗ್ರಹದ ಬಳಿಕವಷ್ಟೇ ನೂತನ ಕೋಚ್ ಯಾರೆಂದು ಪ್ರಕಟಿಸಲಾಗುತ್ತದೆ ಎಂದು ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಹೇಳಿದ್ದಾರೆ.
ಇಂದು ಮುಂಬೈನಲ್ಲಿ ಬಿಸಿಸಿಐನ ಪ್ರಧಾನ ಕಚೇರಿಯಲ್ಲಿ ನಡೆದ ಕೋಚ್ ಆಕಾಂಕ್ಷಿಗಳ ಸಂದರ್ಶನದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ ಅವರು, ಪ್ರಸ್ತುತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಅವರು ಭಾರತಕ್ಕೆ ಬಂದ ಬಳಿಕ ಕೋಚ್ ವಿಚಾರವಾಗಿ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ನೂತನ ಕೋಚ್ ಆಯ್ಕೆ ಕುರಿತಂತೆ ನಿರ್ಧರಿಸುವುದಾಗಿ ಹೇಳಿದ್ದಾರೆ. ಆದರೆ ಕೋಚ್ ಆಯ್ಕೆ ಕುರಿತಂತೆ ನಿಖರ ದಿನಾಂಕ ಪ್ರಕಟಿಸಲು ಸಾಧ್ಯವಿಲ್ಲ ಎಂದೂ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಕೋಚ್ ಆಕಾಂಕ್ಷಿಗಳ ಸಂದರ್ಶನದ ಕುರಿತು ಮಾತನಾಡಿದ ಗಂಗೂಲಿ, ಇಂದು ಮುಂಬೈನಲ್ಲಿರುವ ಬಿಸಿಸಿಐ ಕಚೇರಿಯಲ್ಲಿ ಕೋಚ್ ಆಕಾಂಕ್ಷಿಗಳ ಸಂದರ್ಶನ ನಡೆಸಲಾಯಿತು. ಈ ವೇಳೆ ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಟಾಮ್ ಮೂಡಿ, ಹಾಲಿ ಆಫ್ಘಾನಿಸ್ತಾನ ತಂಡದ ಕೋಚ್ ಲಾಲ್ ಚಂದ್ ರಜಪೂತ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ಕೋಚ್ ಮತ್ತು ನಿರ್ದೇಶಕರಾದ ರಿಚರ್ಡ್ ಫೈಬಸ್ ಅವರನ್ನು ಸಂದರ್ಶನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೋಚ್ ಆಯ್ಕೆ ಕುರಿತು ಕೊಹ್ಲಿ ಯಾವುದೇ ರೀತಿಯ ಮಾತನಾಡಿಲ್ಲ
ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ಆಯ್ಕೆ ಕುರಿತಂತೆ ನಾಯಕ ವಿರಾಟ್ ಕೊಹ್ಲಿ ಯಾವುದೇ ರೀತಿಯ ಮಾತನಾಡಿಲ್ಲ. ಇಂತಹ ವ್ಯಕ್ತಿಯೇ ಕೋಚ್ ಆಗಬೇಕು ಎಂದು ಅವರು ಎಲ್ಲೂ ಹೇಳಿಲ್ಲ. ಕೋಚ್ ಆಯ್ಕೆ ವಿಚಾರದಲ್ಲಿ ಕೊಹ್ಲಿ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದಾರೆ. ತಂಡದ ನಾಯಕರಾಗಿರುವುದರಿಂದ ಅವರ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಇಂದು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ನೇತೃತ್ವದಲ್ಲಿ ಕೋಚ್ ಆಕಾಂಕ್ಷಿಗಳ ಸಂದರ್ಶನ ನಡೆಸಲಾಯಿತು. ರವಿಶಾಸ್ತ್ರಿ, ಸೆಹ್ವಾಗ್ ಸೇರಿದಂತೆ ಒಟ್ಟು 6 ಮಂದಿ ಕೋಚ್ ಆಕಾಂಕ್ಷಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


