ಕ್ರಿಕೆಟ್

ಕೇವಲ 4 ಎಸೆತದಲ್ಲಿ ಬರೊಬ್ಬರಿ 92 ರನ್, ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ವಿನೂತ ದಾಖಲೆ!

ಕ್ರಿಕೆಟ್ ಇತಿಹಾಸದಲ್ಲಿ ವಿನೂತನ ದಾಖಲೆಯೊಂದು ದಾಖಲಾಗಿದ್ದು, ಕೇವಲ 4 ಎಸೆತಗಳಲ್ಲಿ 92 ರನ್ ಗಳು ಹರಿದು ಬರುವ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ.

ಕೇವಲ 4 ಎಸೆತದಲ್ಲಿ ಬರೊಬ್ಬರಿ 92 ರನ್, ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ವಿನೂತ ದಾಖಲೆ!
ಸಂಗ್ರಹ ಚಿತ್ರ
Published On :

ಢಾಕಾ: ಕ್ರಿಕೆಟ್ ಇತಿಹಾಸದಲ್ಲಿ ವಿನೂತನ ದಾಖಲೆಯೊಂದು ದಾಖಲಾಗಿದ್ದು, ಕೇವಲ 4 ಎಸೆತಗಳಲ್ಲಿ 92 ರನ್ ಗಳು ಹರಿದು ಬರುವ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ.

ಈ ವಿಚಿತ್ರ ದಾಖಲೆಯಾಗಿದ್ದು  ಬಾಂಗ್ಲಾದೇಶದ ಢಾಕಾ ದ್ವಿತೀಯ ಡಿವಿಷನ್ ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ.  ಬುಧವಾರ ಸಿಟಿ ಕ್ಲಬ್‌ ಮೈದಾನದಲ್ಲಿ ನಡೆದ ಆಕ್ಸಿಯಮ್ ಕ್ರಿಕೆಟರ್ಸ್‌ ಮತ್ತು ಲಾಲ್ ಮಟಿಯಾ ಕ್ಲಬ್ ನಡುವೆ ಪಂದ್ಯ  ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಾಲ್ ಮಟಿಯಾ ತಂಡ 14 ಓವರ್‌ಗಳಲ್ಲಿ 88 ರನ್‌ ಗಳಿಗೆ ಆಲೌಟ್ ಆಯಿತು. ಆದರೆ ತಂಡದ ಅಲ್ಪ ಮೊತ್ತಕ್ಕೆ ಆಂಪೈರ್ ಗಳ ಕಳಪೆ ತೀರ್ಪುಗಳೇ ಕಾರಣ  ಎಂದು ಅಸಮಾಧಾನಗೊಂಡ ಲಾಲ್ ಮಟಿಯಾ ಕ್ಲಬ್ ತಂಡ ಬೌಲಿಂಗ್ ವೇಳೆ ಬೇಕೆಂದೇ ಎದುರಾಳಿ ಆಕ್ಸಿಯಮ್ ತಂಡಕ್ಕೆ ರನ್ ಗಳನ್ನು ಬಿಟ್ಟುಕೊಟ್ಟರು.

ಲಾಲ್ ಮಟಿಯಾ ಕ್ಲಬ್ ತಂಡ ನೀಡಿದ 89 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಕ್ಸಿಯಮ್ ತಂಡ ಕೇವಲ 0.4 ಓವರ್ ಗಳಲ್ಲಿ 92 ರನ್ ಗಳಿಸಿ 10 ವಿಕೆಟ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಕಳಪೆ ಅಂಪೈರಿಂಗ್  ನಿಂದ ಅಸಮಾಧಾನಗೊಂಡಿದ್ದ ಲಾಲ್ ಮಟಿಯಾ ತಂಡದ ಬೌಲರ್ ಹಾಗೂ ಕ್ಷೇತ್ರ ರಕ್ಷಕರು ಬೇಕೆಂದೇ ಬಾಲ್ ಗಳು ಬೌಂಡರೆ ಗೆರೆ ದಾಟುವಂತೆ ಮಾಡಿದರು. ಮೊದಲ ಓವರ್ ನಲ್ಲಿ ಬೌಲರ್ ಎಸೆದ 13 ವೈಡ್ ಗಳನ್ನು ಕೀಪರ್  ಹಿಡಿಯುವ ಪ್ರಯತ್ನವನ್ನೇ ಮಾಡದೇ ಅವೆಲ್ಲವೂ ಬೌಂಡರಿ ಗೆರೆ ದಾಟಿತ್ತು. ಪರಿಣಾಮ ವೈಡ್ ಗಳಿಂದ  65 ರನ್‌ಗಳು ಹರಿದು ಬಂದರೆ, ಅದೇ ಓವರ್ ನಲ್ಲಿ ಬಂದ 3 ನೋಬಾಲ್ ಕೂಡ ಬೌಂಡರಿ ಗೆರೆ ದಾಟಿತ್ತು. ಇದರಿಂದಲೂ 15  ರನ್‌ ಗಳು ಖಾತೆ ಸೇರಿದವು.

ಆರಂಭಿಕ ಬ್ಯಾಟ್ಸ್‌ಮನ್ ಮೂರು ಎಸೆತಗಳಲ್ಲಿ ಸತತ ಮೂರು ಬೌಂಡರಿ ಹೊಡೆದರು. ಇದರಿಂದ ತಂಡಕ್ಕೆ 12 ರನ್ ಸೇರಿತು. ಆ ಮೂಲಕ ಆಕ್ಸಿಯಮ್ ಕ್ರಿಕೆಟರ್ಸ್‌ ತಂಡ ಕೇವಲ 4 ಎಸೆತಗಳಲ್ಲಿ 92 ಪೇರಿಸಿ 10 ವಿಕೆಟ್ ಗಳಿಂದ  ಭರ್ಜರಿ ಜಯ ಸಾಧಿಸಿತು. ಪಂದ್ಯದ ಸೋಲನ್ನು ಅಂಪೈರ್ ಗಳ ಕೆಟ್ಟ ತೀರ್ಪನ ವಿರುದ್ಧದ ಸೋಲು ಎಂದು ಬಣ್ಣಿಸಿದ ಲಾಲ್ ಮಟಿಯಾ ಕ್ಲಬ್ ತಂಡ, "ಇಡೀ ಲೀಗ್‌ನಲ್ಲಿ ನಾವು ಕಳಪೆ ಅಂಪೈರಿಂಗ್‌ ಗೆ ಬಲಿಯಾಗಿದ್ದೇವೆ. ಈ  ಪಂದ್ಯದಲ್ಲಿ ಟಾಸ್‌ ಮಾಡಿದ ಕೂಡಲೇ ನಾಣ್ಯವನ್ನು ನೋಡಲು ನಮ್ಮ ನಾಯಕನಿಗೆ ಅವಕಾಶವನ್ನೇ ನೀಡಲಿಲ್ಲ. ನೀವು ಬ್ಯಾಟ್ ಮಾಡಿ ಎಂದು ಹೇಳಿದರು. ಪಂದ್ಯ ಆರಂಭವಾಗಿ ಕೆಲವೇ ಕ್ಷಣಗಳಲ್ಲಿ ನಮ್ಮ ತಂಡವು 7 ಓವರ್‌ಗಳಲ್ಲಿ  11 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತ್ತು’ ಎಂದು ಲಾಲ್ ಮಟಿಯಾ ಕ್ಲಬ್‌ ಕಾರ್ಯದರ್ಶಿ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಬಿಸಿಬಿ ವಕ್ತಾರ ಜಲಾಲ್ ಯೂನುಸ್, ‘ಇದೊಂದು ವಿಚಿತ್ರ ಘಟನೆ.  ಇಷ್ಟೊಂದು ವೈಡ್ ಮತ್ತು ನೋಬಾಲ್‌ ಗಳು ಒಂದೇ ಓವರ್‌ ನಲ್ಲಿ ಆಗಿರುವುದು ಅಚ್ಚರಿ ತಂದಿದೆ. ಪಂದ್ಯದ ಕುರಿತು  ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅದನ್ನು ಪರಿಶೀಲಿಸಿ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ದಾಖಲೆ ಪುಟ ಸೇರಿದ ಬೌಲರ್!
ಇನ್ನು ಒಂದೇ ಓವರ್ ನಲ್ಲಿ  ವೈಡ್. 3 ನೋಬಾಲ್ ಎಸೆದು ಒಟ್ಟು 92 ರನ್ ಚಚ್ಚಿಸಿಕೊಂಡ ಲಾಲ್ ಮಟಿಯಾ ಕ್ಲಬ್ ಬೌಲರ್‌ ಸುಜನ್ ಮಹಮದ್ ದಾಖಲೆಯ ಪುಟ ಸೇರಿದ್ದಾರೆ. ಒಂದೇ ಓವರ್ ನಲ್ಲಿ ಈ ಪರಿ ರನ್ ಚಚ್ಚಿಸಿಕೊಂಡ  ಕುಖ್ಯಾತಿಯನ್ನು ಬೌಲರ್ ಪಡೆದಿದ್ದಾರೆ

ಇದಕ್ಕೂ ಮೊದಲು ನ್ಯೂಜಿಲೆಂಡ್ ಕ್ರಿಕೆಟರ್ ಒಂದೇ ಓವರ್ ನಲ್ಲಿ 22 ಎಸೆತಗಳನ್ನು ಎಸೆದು, 77 ರನ್ ನೀಡಿದ್ದರು. ಇದು ಈ ವರೆಗಿನ ಅತ್ಯಂತ ಕಳಪೆ ಬೌಲಿಂಗ್ ಎಂದು ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.